ಕೋಲ್ಕತ್ತಾ: ಟಿಎಂಸಿ ಸಂಸದೆ ಮಹುವಾ ಮೊಯಿತ್ರಾಗೆ ಸಂಕಷ್ಟ ಎದುರಾಗಿದೆ. ಪ್ರಶ್ನೆ ಕೇಳಲು ಹಣ ಕೇಳಿದ ಆರೋಪದಲ್ಲಿ ಅವರ ವಿರುದ್ಧ ನಾಲ್ಕು ವಾರಗಳಲ್ಲಿ ನ್ಯಾಯಾಲಯಕ್ಕೆ ಆರೋಪ ಪಟ್ಟಿ ಸಲ್ಲಿಸಲು ಲೋಕಪಾಲವು ಸಿಬಿಐಗೆ ಅನುಮತಿ ನೀಡಿದೆ. ಇದರೊಂದಿಗೆ ಪಶ್ಚಿಮ ಬಂಗಾಳದ ನಾಡಿಯಾ ಜಿಲ್ಲೆಯ ಕೃಷ್ಣನಗರ ಕ್ಷೇತ್ರದ ಸಂಸದೆ ವಿರುದ್ಧ ಸಿಬಿಐ ಕಾನೂನು ಪ್ರಕ್ರಿಯೆ ಆರಂಭಿಸಿದೆ.
ಈ ಸಂಬಂಧ ನವೆಂಬರ್ 12 ರಂದು ಸಭೆ ನಡೆಸಿದ ಲೋಕಪಾಲದ ಪೂರ್ಣ ಪೀಠ, ಸಂಬಂಧಿತ ನ್ಯಾಯಾಲಯಕ್ಕೆ ಆರೋಪಪಟ್ಟಿ ಸಲ್ಲಿಸಲು ಸಿಬಿಐಗೆ ಅನುಮತಿ ನೀಡುವ ನಿರ್ಧಾರ ತೆಗೆದುಕೊಂಡಿತು. ಆರೋಪಪಟ್ಟಿಯ ಪ್ರತಿಯನ್ನು ತನಗೆ ಸಲ್ಲಿಸುವಂತೆ ಕೇಂದ್ರಿಯ ತನಿಖಾ ತಂಡಕ್ಕೆ ಲೋಕಪಾಲ್ ಸೂಚಿಸಿದೆ.
ಮಹುವಾ ಉದ್ಯಮಿ ದರ್ಶನ್ ಹಿರಾನಂದಾನಿ ಅವರಿಂದ ಹಣ ಮತ್ತು ಗಿಫ್ಟ್ ಪಡೆದು ಸದನದಲ್ಲಿ ಪ್ರಶ್ನೆ ಕೇಳುವ ಮೂಲಕ ಉದ್ಯಮಿ ಗೌತಮ್ ಅದಾನಿ ಮತ್ತು ಪ್ರಧಾನಿ ನರೇಂದ್ರ ಮೋದಿ ಮತ್ತಿತರ ಮೇಲೆ ದಾಳಿ ನಡೆಸಿದ್ದಾರೆ ಎಂದು ಆರೋಪಿಸಿ ಬಿಜೆಪಿ ಸಂಸದ ನಿಶಿಕಾಂತ್ ದುಬೆ ಅವರು ಮಹುವಾ ವಿರುದ್ಧ ಸಿಬಿಐ ತನಿಖೆಗೆ ಒತ್ತಾಯಿಸಿದ್ದರು.
ಮಹುವಾ ಅವರು ಭ್ರಷ್ಟಾಚಾರದಲ್ಲಿ ತೊಡಗಿದ್ದು, ಹಿರಾನಂದಾನಿ ಅವರಿಂದ ಲಂಚ ಪಡೆದಿದ್ದಾರೆ. ಇದರಲ್ಲಿ ಸಂಸತ್ತಿನ ಸದಸ್ಯತ್ವವನ್ನು ದುರ್ಬಳಕೆ ಮಾಡಿಕೊಂಡು, ರಾಷ್ಟ್ರೀಯ ಭದ್ರತೆಗೆ ಬೆದರಿಕೆಗೆ ಕಾರಣವಾಗಿದ್ದಾರೆ ಎಂದು ಆರೋಪಿಸಿದ್ದರು. ಅವರ ವಿರುದ್ಧದ ಆರೋಪಿಗಳ ಕುರಿತು ಪ್ರಾಥಮಿಕ ತನಿಖೆ ವಿವರ ಪಡೆದ ನಂತರ ಲೋಕಪಾಲ್, ಸಿಬಿಐ ತನಿಖೆಗೆ ನಿರ್ದೇಶನ ನೀಡಿತ್ತು. ಸಿಬಿಐ ಮಾರ್ಚ್ 21, 2024 ರಂದು ಮಹುವಾ ಮತ್ತು ಹಿರಾನಂದಾನಿ ವಿರುದ್ಧ ಎಫ್‌ಐಆರ್ ದಾಖಲಿಸಿತ್ತು.
ಜುಲೈ ಅಂತ್ಯದಲ್ಲಿ, ಪ್ರಕರಣಕ್ಕೆ ಸಂಬಂಧಿಸಿದಂತೆ ಸಿಬಿಐ ತನ್ನ ವರದಿಯನ್ನು ಲೋಕಪಾಲಕ್ಕೆ ಸಲ್ಲಿಸಿತ್ತು.ತೃಣಮೂಲ ಕಾಂಗ್ರೆಸ್ ಸಂಸದೆಯನ್ನು ಡಿಸೆಂಬರ್ 2023 ರಲ್ಲಿ ಅನುಚಿತ ನಡೆಗಾಗಿ ಸದನದಿಂದ ಉಚ್ಚಾಟಿಸಲಾಗಿತ್ತು. ಅದರ ವಿರುದ್ಧ ಅವರು ಸುಪ್ರೀಂಕೋರ್ಟ್ ಮೊರೆ ಹೋಗಿದ್ದರು. 2024 ರ ಲೋಕಸಭಾ ಚುನಾವಣೆಯಲ್ಲಿ ಕೃಷ್ಣನಗರ ಕ್ಷೇತ್ರದಲ್ಲಿ ಪ್ರತಿಸ್ಪರ್ಧಿ ಬಿಜೆಪಿಯ ಅಮೃತಾ ರಾಯ್ ಅವರನ್ನು ಸೋಲಿಸುವ ಮೂಲಕ ಭರ್ಜರಿ ಗೆಲುವು ಸಾಧಿಸಿದ್ದರು.