ಮುಂಬೈ: ಬಿಹಾರ ವಿಧಾಸಭೆ ಚುನಾವಣೆಯ ಫಲಿತಾಂಶ ಚುನಾವಣಾ ಆಯೋಗವು ಮಾಡಿದ ಮಹಾ ವಂಚನೆ ಎಂದು ಶಿವಸೇನೆ(ಯುಬಿಟಿ) ಶನಿವಾರ ಟೀಕಿಸಿದ್ದು, ಆಡಳಿತಾರೂಢ ಬಿಜೆಪಿ ನೇತೃತ್ವದ ಎನ್‌ಡಿಎ ಮತ ಕಳ್ಳತನದ ಮೂಲಕ ಗೆಲುವು ಸಾಧಿಸಿದೆ ಎಂದು ಆರೋಪಿಸಿದೆ.
ಚುನಾವಣೆಯಲ್ಲಿ ಆಡಳಿತಾರೂಢ ಎನ್‌ಡಿಎ ಅದ್ಭುತ ಗೆಲುವು ಸಾಧಿಸಿದ ಒಂದು ದಿನದ ನಂತರ, ಉದ್ಧವ್ ಠಾಕ್ರೆ ನೇತೃತ್ವದ ಪಕ್ಷವು, ಬಿಹಾರ ಮುಖ್ಯಮಂತ್ರಿ ಹುದ್ದೆಗಾಗಿ ಜೆಡಿಯು ಮೇಲೆ ಹಿಡಿತ ಸಾಧಿಸಲು ಬಿಜೆಪಿ ಹಿಂಜರಿಯುವುದಿಲ್ಲ ಎಂದು ಹೇಳಿದೆ.
ಮುಖ್ಯಮಂತ್ರಿ ನಿತೀಶ್ ಕುಮಾರ್ ಸ್ಮರಣಶಕ್ತಿ ಕಳೆದುಕೊಳ್ಳುತ್ತಿದ್ದು, ಅಂತಹ ಸಮಸ್ಯೆಗಳನ್ನು ಹೊಂದಿರುವ ನಾಯಕ ಬಿಹಾರವನ್ನು ಹೇಗೆ ಮುನ್ನಡೆಸಬಹುದು ಎಂದು ಶಿವಸೇನೆ(ಯುಬಿಟಿ) ಪ್ರಶ್ನಿಸಿದೆ.ಬಿಹಾರ
ಪಕ್ಷದ ಮುಖವಾಣಿ ಸಾಮ್ನಾದ ಸಂಪಾದಕೀಯದಲ್ಲಿ ಶಿವಸೇನೆ(ಯುಬಿಟಿ), ಮಹಾರಾಷ್ಟ್ರದಂತೆಯೇ ಬಿಹಾರದಲ್ಲಿಯೂ ಬಿಜೆಪಿಯ ಗೆಲುವಿನ ಸೂತ್ರವನ್ನು ನಿರ್ಧರಿಸಲಾಗಿದೆ. ಅಲ್ಲಿ ವಿರೋಧ ಪಕ್ಷವಾದ ಮಹಾ ವಿಕಾಸ್ ಅಘಾಡಿ 50 ಸ್ಥಾನಗಳನ್ನು ಗೆಲ್ಲಲು ಅವಕಾಶ ನೀಡಿಲ್ಲ ಎಂದು ಹೇಳಿದೆ.
ಬಿಹಾರ ಚುನಾವಣೆಯ ಫಲಿತಾಂಶವು ಆಶ್ಚರ್ಯಕರವಲ್ಲ, ಚುನಾವಣಾ ಆಯೋಗ ಮತ್ತು ಬಿಜೆಪಿ ತಾವು ಬಯಸಿದ ಫಲಿತಾಂಶ ಪಡೆಯಲು ಒಟ್ಟಾಗಿ ಕೆಲಸ ಮಾಡುತ್ತಿವೆ ಎಂದು ಆರೋಪಿಸಿದೆ.
"ಬಿಹಾರ ಚುನಾವಣೆ ಭಾರತೀಯ ಪ್ರಜಾಪ್ರಭುತ್ವದಲ್ಲಿ ನಡೆದ ಒಂದು ದೊಡ್ಡ ಹಗರಣ. ಇದಕ್ಕೆ ಚುನಾವಣಾ ಆಯೋಗ ಸಹಕಾರ ನೀಡಿದೆ" ಎಂದು ಸಂಪಾದಕೀಯ ಟೀಕಿಸಿದೆ.
"ಮತಗಳನ್ನು ಮತ್ತೆ ಕದಿಯಲಾಯಿತು. ಅದರ ಆಧಾರದ ಮೇಲೆ ಬಿಜೆಪಿ ಮತ್ತು (ಬಿಹಾರ ಮುಖ್ಯಮಂತ್ರಿ) ನಿತೀಶ್ ಕುಮಾರ್ ಚುನಾವಣೆಯಲ್ಲಿ ಗೆದ್ದರು" ಎಂದು ಉದ್ಧವ್ ನೇತೃತ್ವದ ಪಕ್ಷ ಆರೋಪಿಸಿದೆ.
ಚುನಾವಣಾ ಪ್ರಕ್ರಿಯೆಯ ದ್ವಾರಪಾಲಕನಾಗಿರುವ ಚುನಾವಣಾ ಆಯೋಗವೇ ಕಳ್ಳರಿಗೆ ಸಹಾಯ ಮಾಡಿದರೆ ಜನರು ಯಾರನ್ನು ನಂಬುತ್ತಾರೆ ಎಂದು ಶಿವಸೇನೆ ಪ್ರಶ್ನಿಸಿದೆ.