ನವದೆಹಲಿ: ಬಿಹಾರ ರಾಜ್ಯ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಹೀನಾಯ ಸೋಲು ಕಂಡಿದ್ದು, ಇದರ ಬೆನ್ನಲ್ಲೇ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿಯವರು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ನಿವಾಸದಲ್ಲಿ ಮಹತ್ವದ ಸಭೆ ನಡೆಸುತ್ತಿದ್ದಾರೆ.
ದೆಹಲಿಯ ರಾಜಾಜಿ ಮಾರ್ಗ್‌ನಲ್ಲಿರುವ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ನಿವಾಸದಲ್ಲಿ ರಾಹುಲ್ ಗಾಂಧಿಯವರು ಸಭೆ ನಡೆಸುತ್ತಿದ್ದು, ಫಲಿತಾಂಶ ಕುರಿತು ಚರ್ಚೆ ನಡೆಸುತ್ತಿದ್ದಾರೆಂದು ತಿಳಿದುಬಂದಿದೆ.
ಎಐಸಿಸಿ ಪ್ರಧಾನ ಕಾರ್ಯದರ್ಶಿ ಕೆ.ಸಿ. ವೇಣುಗೋಪಾಲ್, ಪಕ್ಷದ ಖಜಾಂಚಿ ಅಜಯ್ ಮಾಕನ್ ಮತ್ತು ಎಐಸಿಸಿ ಬಿಹಾರ ಉಸ್ತುವಾರಿ ಕೃಷ್ಣ ಅಲ್ಲಾವರು ಅವರು ಭಾಗಿಯಾಗಿದ್ದಾರೆಂದು ಮೂಲಗಳು ತಿಳಿಸಿವೆ.
ಸಭೆಯಲ್ಲಿ ಬಿಹಾರದಲ್ಲಿ ಕಾಂಗ್ರೆಸ್‌ಗೆ ಉಂಟಾಗಿರುವ ಭಾರಿ ಸೋಲಿನ ಬಗ್ಗೆ ಕೂಲಂಕುಷವಾಗಿ ಚರ್ಚೆ ನಡೆಸಲಾಗುತ್ತಿದೆ.
ಫಲಿತಾಂಶ ಕುರಿತು ಪ್ರತಿಕ್ರಿಯೆ ನೀಡಿದ್ದ ರಾಹುಲ್ ಗಾಂಧಿಯವರು, ಈ ಬಾರಿಯ ಬಿಹಾರ ಚುನಾವಣೆಯಲ್ಲಿ ಅಪಾರ ಸಂಖ್ಯೆಯಲ್ಲಿ ಬಿಹಾರ ಜನರು ಘಟನಬಂಧನದ ಮೇಲೆ ನಂಬಿಕೆಯಿಟ್ಟು ಮತ ಹಾಕಿದ್ದಾರೆ. ಈ ಚುನಾವಣೆಯು ಆರಂಭದಿಂದಲೇ ಸರಿಯಿರಲಿಲ್ಲ. ಅಸಲಿಗೆ, ಬಿಹಾರದಲ್ಲಿ ನಾವು ಸಂವಿಧಾನದ ಸಂರಕ್ಷಣೆ ಹಾಗೂ ಪ್ರಜಾಪ್ರಭುತ್ವದ ಸಂರಕ್ಷಣೆಗಾಗಿ ಸೆಣಸಿದ್ದೆವು. ಆದರೂ, ಫಲಿತಾಂಶ ನಮಗೆ ತಕ್ಕಹಾಗೆ ಬಂದಿಲ್ಲ. ಈ ಜನಾದೇಶವನ್ನು ಕಾಂಗ್ರೆಸ್ ಹಾಗೂ INDIA ಮೈತ್ರಿ ಸ್ವೀಕರಿಸುತ್ತದೆ. ಈ ಸೋಲಿನ ಪರಾಮರ್ಶೆಯನ್ನು ಮಾಡುತ್ತೇವೆ. ಪ್ರಜಾಪ್ರಭುತ್ವವನ್ನು ಉಳಿಸಲು ಮುಂದೆಯೂ ಹೋರಾಟ ನಡೆಸುತ್ತೇವೆ ಎಂದು ಹೇಳಿದ್ದರು.