ಪಾಟ್ನಾ: ಬಿಹಾರ ವಿಧಾನಸಭಾ ಚುನಾವಣೆಯಲ್ಲಿ ರಾಷ್ಟ್ರೀಯ ಜನತಾ ದಳ (ಆರ್‌ಜೆಡಿ) ಪಕ್ಷ ಹೀನಾಯ ಸೋಲು ಕಂಡ ನಂತರ ಆ ಪಕ್ಷದ ನಾಯಕ ತೇಜಸ್ವಿ ಯಾದವ್ ಅವರು ತಮ್ಮ ಸಹೋದರಿ ರೋಹಿಣಿ ಆಚಾರ್ಯ ಅವರೊಂದಿಗೆ ತೀವ್ರ ವಾಗ್ವಾದ ನಡೆಸಿದ್ದಾರೆ ಎಂದು ಮೂಲಗಳು ಭಾನುವಾರ ಎನ್‌ಡಿಟಿವಿಗೆ ತಿಳಿಸಿವೆ.
ಶನಿವಾರ ಮಧ್ಯಾಹ್ನ ನಡೆದ ವಾದದ ವೇಳೆ, ವಿರೋಧ ಪಕ್ಷಗಳ ಇಂಡಿಯಾ ಬಣದ ಮುಖ್ಯಮಂತ್ರಿ ಅಭ್ಯರ್ಥಿಯಾಗಿದ್ದ ತೇಜಸ್ವಿ ಯಾದವ್, ಸೋಲಿಗೆ ರೋಹಿಣಿ ಆಚಾರ್ಯ ಅವರೇ ಕಾರಣ ಎಂದು ಆರೋಪಿಸಿದ್ದಾರೆ ಎನ್ನಲಾಗಿದೆ.
'ತುಮ್ಹಾರೆ ಕಾರಣ್ ಹಮ್ ಚುನಾವ್ ಹಾರ್ ಗೇ (ನಿಮ್ಮಿಂದಾಗಿ ನಾವು ಚುನಾವಣೆಯಲ್ಲಿ ಸೋತಿದ್ದೇವೆ). ತುಮ್ಹಾರಾ ಹಾಯ್ ಲಗ್ ಗಯಾ ಹಮ್ ಲೋಗೋ ಕೋ (ನಿಮ್ಮಿಂದಾಗಿ ನಾವು ಶಾಪಗ್ರಸ್ತರು)' ಎಂದು ಯಾದವ್ ತನ್ನ ಅಕ್ಕನಿಗೆ ಹೇಳಿದ್ದಾರೆ. ನಂತರ ಕೋಪದಿಂದ ಅವರ ಮೇಲೆ ಚಪ್ಪಲಿ ಎಸೆದು ಅವರನ್ನು ನಿಂದಿಸಿದ್ದಾರೆಂದು ಮೂಲಗಳು ತಿಳಿಸಿವೆ.
ಆರ್‌ಜೆಡಿ ಮುಖ್ಯಸ್ಥ ಲಾಲು ಪ್ರಸಾದ್ ಯಾದವ್ ಅವರ ಒಂಬತ್ತು ಮಕ್ಕಳಲ್ಲಿ ಒಬ್ಬರಾದ ರೋಹಿಣಿ ಆಚಾರ್ಯ ಶನಿವಾರ ಮಧ್ಯಾಹ್ನ ರಾಜಕೀಯವನ್ನು ತ್ಯಜಿಸುವುದರೊಂದಿಗೆ ತಮ್ಮ ಕುಟುಂಬವನ್ನು ತೊರೆಯುತ್ತಿರುವುದಾಗಿ ಹೇಳಿದ್ದಾರೆ.
ಈ ಕುರಿತು ಎಕ್ಸ್‌ನಲ್ಲಿ ಮಾಡಿರುವ ನಿಗೂಢ ಪೋಸ್ಟ್‌ನಲ್ಲಿ, ತೇಜಸ್ವಿಯವರ ಆಪ್ತ ಸಹಾಯಕರಾಗಿರುವ ಆರ್‌ಜೆಡಿ ಹಿರಿಯ ನಾಯಕ ಸಂಜಯ್ ಯಾದವ್ ಮತ್ತು ತೇಜಶ್ವಿಯವರ ದೀರ್ಘಕಾಲದ ಸ್ನೇಹಿತ ಮತ್ತು ಅವರ ಕೋರ್ ತಂಡದ ಸದಸ್ಯ ರಮೀಜ್ ನೆಮತ್ ಖಾನ್ ಅವರು ಹಾಗೆ ಮಾಡಲು ಕೇಳಿಕೊಂಡಿದ್ದಾರೆ ಎಂದು ಹೇಳಿದ್ದಾರೆ.
ಕಳೆದ ವರ್ಷದ ಲೋಕಸಭಾ ಚುನಾವಣೆಯಲ್ಲಿ ಸರನ್‌ನಿಂದ ಸ್ಪರ್ಧಿಸಿ ಸೋಲು ಕಂಡಿದ್ದ ರೋಹಿಣಿ ಆಚಾರ್ಯ ಅವರು, 'ಎಲ್ಲ ಆಪಾದನೆಗಳನ್ನು ನಾನು ಹೊರುತ್ತಿದ್ದೇನೆ' ಎಂದು ಹೇಳಿದ್ದು, ಯಾವುದನ್ನೂ ನಿರ್ದಿಷ್ಟಪಡಿಸಿಲ್ಲ.
ಅದಾದ ಕೆಲವು ಗಂಟೆಗಳ ನಂತರ ಅವರ ಪೋಸ್ಟ್ ಬಗ್ಗೆ ವರದಿಗಾರರು ಪ್ರಶ್ನಿಸಿದಾಗ, 'ನನಗೆ ಈಗ ಕುಟುಂಬವಿಲ್ಲ. ಹೋಗಿ ಸಂಜಯ್, ರಮೀಜ್ ಮತ್ತು ತೇಜಸ್ವಿ ಯಾದವ್ ಅವರನ್ನು ಕೇಳಿ. ಸೋಲಿನ ಜವಾಬ್ದಾರಿಯನ್ನು ತೆಗೆದುಕೊಳ್ಳಲು ಇಷ್ಟವಿಲ್ಲದ ಕಾರಣ ಅವರು ನನ್ನನ್ನು ಕುಟುಂಬದಿಂದ ಹೊರಗೆ ಹಾಕಿದ್ದಾರೆ. ಪಕ್ಷದ ಚಾಣಕ್ಯ ಎಂದು ತಮ್ಮನ್ನು ತಾವು ಪರಿಗಣಿಸುವವರು ವಿಷಯಗಳು ತಪ್ಪಾದಾಗ ಸ್ವಾಭಾವಿಕವಾಗಿ ಕಠಿಣ ಪ್ರಶ್ನೆಗಳನ್ನು ಎದುರಿಸಬೇಕಾಗುತ್ತದೆ. ಪಕ್ಷದ ಸಾಮಾನ್ಯ ಕಾರ್ಯಕರ್ತರು ಈ 'ಚಾಣಕ್ಯರನ್ನು' ಪ್ರಶ್ನಿಸುತ್ತಿದ್ದರೆ, ಪಕ್ಷವು ಎಷ್ಟು ಕೆಟ್ಟ ಪ್ರದರ್ಶನ (ವಿಶೇಷವಾಗಿ ಬಿಹಾರ ಚುನಾವಣೆ) ನೀಡುತ್ತಿದೆ ಎಂಬುದನ್ನು ತೋರಿಸುತ್ತದೆ' ಎಂದಿದ್ದಾರೆ.
'ನೀವು ಸಂಜಯ್ ಮತ್ತು ರಮೀಜ್ ಅವರ ಹೆಸರನ್ನು ಹೇಳಿದಾಗ, ನಿಮ್ಮನ್ನು ಮನೆಯಿಂದ ಹೊರಹಾಕಲಾಗುತ್ತದೆ. ನಿಮ್ಮ ಮಾನಹಾನಿ ಮಾಡಲಾಗುತ್ತದೆ ಮತ್ತು ನಿಮ್ಮ ಮೇಲೆ ಚಪ್ಪಲಿಯಿಂದ ಹಲ್ಲೆ ಮಾಡಲಾಗುತ್ತದೆ' ಎಂದು ಅವರು ಆರೋಪಿಸಿದ್ದಾರೆ.
ಇಂದು ಬೆಳಿಗ್ಗೆ ಹೊಸ ಪೋಸ್ಟ್‌ನಲ್ಲಿ, 'ನಿನ್ನೆ, ಒಬ್ಬ ಮಗಳು, ಒಬ್ಬ ಸಹೋದರಿ, ವಿವಾಹಿತ ಮಹಿಳೆ ಮತ್ತು ಒಬ್ಬ ತಾಯಿಯನ್ನು ಅವಮಾನಿಸಲಾಯಿತು; ಅವಳ ಮೇಲೆ ಅಸಹ್ಯಕರ ನಿಂದನೆಗಳನ್ನು ಮಾಡಲಾಯಿತು ಮತ್ತು ಚಪ್ಪಲಿ ಎಸೆಯಲಾಯಿತು. ನಾನು ನನ್ನ ಸ್ವಾಭಿಮಾನವನ್ನು ರಾಜಿ ಮಾಡಿಕೊಳ್ಳಲಿಲ್ಲ, ನಾನು ಸತ್ಯವನ್ನು ಬಿಟ್ಟುಕೊಡಲಿಲ್ಲ,ಮತ್ತು ಈ ಕಾರಣದಿಂದಾಗಿಯೇ ನಾನು ಈ ಅವಮಾನವನ್ನು ಸಹಿಸಿಕೊಳ್ಳಬೇಕಾಯಿತು' ಎಂದು ಅವರು ಹಿಂದಿಯಲ್ಲಿ ಬರೆದಿದ್ದಾರೆ.
'ಒಬ್ಬ ಮಗಳು ಅಳುತ್ತಿದ್ದ ಹೆತ್ತವರು ಮತ್ತು ಸಹೋದರಿಯರನ್ನು ಬಲವಂತದಿಂದ ಬಿಟ್ಟು ಹೋಗಬೇಕಾಯಿತು. ಅವರು ನನ್ನ ತಾಯಿಯ ಮನೆಯಿಂದ ದೂರ ಮಾಡಿದರು... ನನ್ನನ್ನು ಅನಾಥಳನ್ನಾಗಿ ಮಾಡಿದರು... ನಿಮ್ಮಲ್ಲಿ ಯಾರೂ ನನ್ನ ಹಾದಿಯಲ್ಲಿ ನಡೆಯದಿರಲಿ; ಯಾವುದೇ ಕುಟುಂಬಕ್ಕೆ ರೋಹಿಣಿಯಂತಹ ಮಗಳು-ಸಹೋದರಿ ಸಿಗದಿರಲಿ' ಎಂದು ಅವರು ಹೇಳಿದರು.
ಕಿಡ್ನಿ ಕೆಟ್ಟದ್ದು ಎಂದರು
ಮತ್ತೊಂದು ಪೋಸ್ಟ್‌ನಲ್ಲಿ, ಅವರು ನಿನ್ನೆ ನನ್ನನ್ನು ನಿಂದಿಸಲಾಯಿತು. ನಾನು "ಕೆಟ್ಟವಳು" ಮತ್ತು 2022ರಲ್ಲಿ ಲಾಲು ಯಾದವ್ ಅವರಿಗೆ ದಾನ ಮಾಡಿದ ನನ್ನ ಕಿಡ್ನಿ ಕೂಡ "ಕೆಟ್ಟದು" ಎಂದು ಹೇಳಲಾಗಿದೆ ಎಂದು ಆರೋಪಿಸಿದ್ದಾರೆ.
'ನಿನ್ನೆ, ನನ್ನನ್ನು ಶಪಿಸಲಾಯಿತು ಮತ್ತು ನಾನು ಕೊಳಕು ಎಂದು ಹೇಳಿದರು. ಕೋಟ್ಯಂತರ ರೂಪಾಯಿಗಳನ್ನು ತೆಗೆದುಕೊಂಡು, ಟಿಕೆಟ್ ಖರೀದಿಸಿ, ನಂತರ ಆ ಕೊಳಕು ಮೂತ್ರಪಿಂಡವನ್ನು ನನ್ನ ತಂದೆಗೆ ಕಸಿ ಮಾಡಿಸಿದ್ದೇನೆ ಎಂದು ದೂರಿದ್ದಾಗಿ ತಿಳಿಸಿದ್ದಾರೆ.
'ನನ್ನ ಕುಟುಂಬ, ನನ್ನ ಮೂವರು ಮಕ್ಕಳಿಗೆ ಆದ್ಯತೆ ನೀಡದಿರುವುದು, ಮೂತ್ರಪಿಂಡ ದಾನ ಮಾಡುವಾಗ ನನ್ನ ಗಂಡ ಅಥವಾ ನನ್ನ ಅತ್ತೆ ಮಾವಂದಿರ ಅನುಮತಿ ಪಡೆಯದಿರುವುದು ನನಗೆ ದೊಡ್ಡ ಪಾಪವಾಯಿತು... ನನ್ನ ದೇವರು, ನನ್ನ ತಂದೆಯನ್ನು ಉಳಿಸಲು ನಾನು ಏನು ಮಾಡಬೇಕೋ ಅದನ್ನು ಮಾಡಿದೆ ಮತ್ತು ಇಂದು ಅದನ್ನು ಕೊಳಕು ಎಂದು ಕರೆಯಲಾಗುತ್ತಿದೆ... ನಿಮ್ಮಲ್ಲಿ ಯಾರೂ ನನ್ನಂತಹ ತಪ್ಪು ಮಾಡದಿರಲಿ, ಯಾವುದೇ ಕುಟುಂಬಕ್ಕೆ ರೋಹಿಣಿಯಂತಹ ಮಗಳು ಎಂದಿಗೂ ಸಿಗದಿರಲಿ' ಎಂದು ಅವರ ಪೋಸ್ಟ್‌ನಲ್ಲಿ ಬರೆಯಲಾಗಿದೆ.