ಶ್ರೀನಗರ: 'ವೈಟ್-ಕಾಲರ್' ಭಯೋತ್ಪಾದನೆ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ವಿಚಾರಣೆ ನಡೆಸಿದ ನಂತರ ಭಾನುವಾರ ಬೆಂಕಿ ಹಚ್ಚಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದ ಡ್ರೈ ಫ್ರೂಟ್ಸ್ ಮಾರಾಟಗಾರ ಸೋಮವಾರ ಶ್ರೀನಗರದ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾರೆ ಎಂದು ವರದಿಯಾಗಿದೆ.
ಅಂತರ್ರಾಜ್ಯ "ವೈಟ್-ಕಾಲರ್" ಭಯೋತ್ಪಾದನಾ ನಂಟಿಗೆ ಸಂಬಂಧಿಸಿದಂತೆ ಅವರ ಮಗ ಮತ್ತು ಸಹೋದರನನ್ನು ಪೊಲೀಸರು ಈ ಮೊದಲೇ ಬಂಧಿಸಿದ್ದರು.
ದಕ್ಷಿಣ ಕಾಶ್ಮೀರದ ಖಾಜಿಗುಂಡ್ ನಿವಾಸಿ ಬಿಲಾಲ್ ಅಹ್ಮದ್ ವಾನಿ ಅವರು ತಮ್ಮ ಮನೆಯಲ್ಲಿ ಬೆಂಕಿ ಹಚ್ಚಿಕೊಂಡಿದ್ದರು. ತೀವ್ರ ಸುಟ್ಟಗಾಯಗಳಿಂದ ಗಂಭೀರ ಸ್ಥಿತಿಯಲ್ಲಿದ್ದ ಅವರನ್ನು ಶ್ರೀನಗರ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಇಂದು ಅವರು ಮೃತಪಟ್ಟಿದ್ದಾರೆ.
ಪ್ರಸ್ತುತ ತನಿಖೆಯ ಸಮಯದಲ್ಲಿ ಬಂಧಿಸಲ್ಪಟ್ಟ ಆರೋಪಿಗಳಲ್ಲಿ ಒಬ್ಬರಾದ ಡಾ. ಅದೀಲ್ ಅಹ್ಮದ್ ರಾಥರ್ ಅವರ ನಿವಾಸದ ಬಳಿ ವಾಸಿಸುವ ಬಿಲಾಲ್ ಅವರನ್ನು ಶನಿವಾರ ಪೊಲೀಸರು ವಿಚಾರಣೆಗೆ ಕರೆದಿದ್ದರು ಮತ್ತು ಸಂಜೆ ವಿಚಾರಣೆ ನಂತರ ಬಿಡುಗಡೆ ಮಾಡಲಾಯಿತು ಎಂದು ಮೂಲಗಳು ತಿಳಿಸಿವೆ.
ಬಿಲಾಲ್ ಅವರ ಮಗ ಜಸ್ಬೀರ್ ಬಿಲಾಲ್ ಮತ್ತು ಸಹೋದರ ನಬೀಲ್ ಅಹ್ಮದ್ ಅವರನ್ನು ಪೊಲೀಸರು ಈಗಾಗಲೇ ವಿಚಾರಣೆಗಾಗಿ ವಶಕ್ಕೆ ಪಡೆದಿದ್ದಾರೆ.
ಬಿಲಾಲ್ ಅವರ ನೆರೆಹೊರೆಯವರನ್ನು ನವೆಂಬರ್ 6 ರಂದು ಉತ್ತರ ಪ್ರದೇಶದ ಸಹರಾನ್‌ಪುರದಿಂದ ಜಮ್ಮು ಮತ್ತು ಕಾಶ್ಮೀರ ಪೊಲೀಸರು ಬಂಧಿಸಿದ್ದಾರೆ. ಪ್ರಕರಣದಲ್ಲಿ ಪ್ರಮುಖ ವ್ಯಕ್ತಿಯಾಗಿ ಹೊರಹೊಮ್ಮಿರುವ ರಾಥರ್ ಅವರ ಕಿರಿಯ ಸಹೋದರ ಡಾ. ಮುಜಾಫರ್ ರಾಥರ್‌ಗಾಗಿ ಪೊಲೀಸರು ಹುಡುಕಾಟ ನಡೆಸಿದ್ದಾರೆ ಮತ್ತು ಅವರು ಅಫ್ಘಾನಿಸ್ತಾನದಲ್ಲಿ ಅಡಗಿಕೊಂಡಿದ್ದಾರೆ ಎಂದು ವರದಿಯಾಗಿದೆ.