ಹೈದರಾಬಾದ್: ಹಲವು ವರ್ಷಗಳಿಂದ ಚಲನಚಿತ್ರೋದ್ಯಮಕ್ಕೆ ನುಂಗಲಾರದ ತುತ್ತಾಗಿದ್ದ ಪೈರಸಿ ಕಾಟಕ್ಕೆ ಕೊನೆಗೂ ಹೈದರಾಬಾದ್ ಪೊಲೀಸರು ಚೆಕ್ ಇಟ್ಟಿದ್ದು, ಚಲನಚಿತ್ರ ಮಂದಿರದಲ್ಲಿ ಸಿನಿಮಾ ಬಿಡುಗಡೆಯಾಗುವುದಕ್ಕೂ ಮೊದಲೇ ಅದರ ಪೈರೇಟೆಡ್ ಕಾಪಿಯನ್ನು ತನ್ನ ವೆಬ್‌ಸೈಟ್‌ನಲ್ಲಿ ಅಪ್‌ಲೋಡ್ ಮಾಡುತ್ತಿದ್ದ ವ್ಯಕ್ತಿಯನ್ನು ಬಂಧಿಸಿದ್ದಾರೆ.
ಹೌದು.. ಐಬೊಮ್ಮ ಮತ್ತು ಬಪ್ಪಂ ವೆಬ್ ಸೈಟ್ ಗಳಲ್ಲಿ ದೊಡ್ಡ ಪ್ರಮಾಣದ ಚಲನಚಿತ್ರ ಪೈರಸಿ ಜಾಲವನ್ನು ನಿರ್ವಹಿಸುತ್ತಿದ್ದ ಪ್ರಮುಖ ಆರೋಪಿ ಇಮ್ಮಡಿ ರವಿಯನ್ನು ಬಂಧಿಸುವ ಮೂಲಕ ಹೈದರಾಬಾದ್ ಸೈಬರ್ ಅಪರಾಧ ಪೊಲೀಸರು ನಿರ್ಮಾಪಕರಿಗೆ ದೊಡ್ಡ ರಿಲೀಫ್ ನೀಡಿದ್ದಾರೆ.
ಈ ಪೈರಸಿ ಕಾಟದಿಂದಾಗಿ ತೆಲುಗು ಚಿತ್ರೋದ್ಯಮಕ್ಕೆ ಸಾವಿರಾರು ಕೋಟಿ ನಷ್ಟವಾಗುತ್ತಿತ್ತು ಎಂದು ಹೇಳಲಾಗಿದೆ.
ರವಿ ಮಾತ್ರವಲ್ಲದೇ ನೆಲ್ಲೂರು ಮೂಲದ ವೆಬ್‌ಸೈಟ್ ಡೆವಲಪರ್ ದುದ್ದೇಲಾ ಶಿವಾಜಿ (27) ಮತ್ತು ಖಾಸಗಿ ಉದ್ಯೋಗಿ ಸುಸರ್ಲಾ ಪ್ರಶಾಂತ್ (27) ಅವರನ್ನು ಈ ಪ್ರಕರಣದಲ್ಲಿ ಬಂಧಿಸಲಾಗಿದೆ ಎಂದು ತಿಳಿದುಬಂದಿದೆ.
ಯಾರು ಈ ಪೈರಸಿ ಮಾಸ್ಟರ್ ಮೈಂಡ್?
ಮೂಲಗಳ ಪ್ರಕಾರ ಹೈದರಾಬಾದ್ ಪೊಲೀಸರು iBomma ಮತ್ತು ಬಪ್ಪಂ ಎಂಬ ಪೈರೆಟೆಡ್ ಸಿನಿಮಾಗಳನ್ನು ಅಪ್ಲೋಡ್ ಮಾಡುತ್ತಿದ್ದ ವೆಬ್ ಸೈಟ್ ನ ಮಾಲೀಕ ರವಿ ಇಮ್ಮಡಿ ಎಂಬಾತನನ್ನು ಬಂಧಿಸಿದ್ದಾರೆ.
ಈತನೇ ತನ್ನ ವೆಬ್ ಸೈಟ್ ಗಳ ಮೂಲಕ ಆಗಷ್ಟೇ ಬಿಡುಗಡೆಯಾಗುತ್ತಿದ್ದ ಬಹುತೇಕ ಎಲ್ಲ ಚಿತ್ರಗಳನ್ನು ಅಪ್ಲೋಡ್ ಮಾಡಿ ಪ್ರೇಕ್ಷಕರು ಉಚಿತವಾಗಿ ಡೌನ್ಲೋಡ್ ಮತ್ತು ವೀಕ್ಷಣೆಗೆ ನೆರವಾಗುವಂತೆ ಮಾಡುತ್ತಿದ್ದ.
ಈತನ ಈ ಕೃತ್ಯದಿಂದ ನೂರಾರು ಕೋಟಿ ಹಣವನ್ನು ಬಂಡವಾಳವನ್ನಾಗಿ ಹಾಕುತ್ತಿದ್ದ ನಿರ್ಮಾಪಕರಿಗೆ ನಷ್ಟವಾಗುತ್ತಿತ್ತು. ಇದೀಗ ರವಿಯ ಬಂಧನದ ಬಳಿಕ ನಿರ್ಮಾಪಕರು ಕೊನೆಗೂ ನಿರಮ್ಮಳರಾಗಿದ್ದಾರೆ.
ಪೊಲೀಸರಿಗೇ ಸವಾಲು ಹಾಕಿದ್ದ ರವಿ
ಇನ್ನು ಇದೇ ಐಬೊಮ್ಮ ವೆಬ್ ಸೈಟ್ ಮಾಲೀಕ ರವಿ ಈ ಹಿಂದೆ ಪೊಲೀಸರಿಗೇ ಸವಾಲು ಹಾಕಿದ್ದ. ನೀವು ನನ್ನ ಬಗ್ಗೆ ಯೋಚಿಸಿದರೆ ನಾನು ನಿಮ್ಮ ಬಗ್ಗೆ ಯೋಚಿಸಬೇಕಾಗುತ್ತದೆ ಎಂದು ಹೇಳಿ ಆಗ ಇನ್ನು ಬಿಡುಗಡೆಯೇ ಆಗದ ದೊಡ್ಡ ಚಿತ್ರವೊಂದರ ಒಂದಷ್ಟು HD ಕ್ವಾಲಿಟಿಯ ವಿಡಿಯೋಗಳನ್ನು ಬಿಡುಗಡೆ ಮಾಡಿದ್ದ.
ಒಂದು ವೇಳೆ ಪೊಲೀಸರು ನನ್ನತ್ತ ಗಮನ ಹರಿಸಿದರೆ ನಾನು ಈ ಚಿತ್ರದ ಇಡೀ ವಿಡಿಯೋವನ್ನು ಬಿಡುಗಡೆ ಮಾಡುವುದಾಗಿ ಎಚ್ಚರಿಕೆ ನೀಡಿದ್ದ. ಇದನ್ನೇ ಸವಾಲಾಗಿ ಸ್ವೀಕರಿಸಿದ್ದ ಹೈದರಾಬಾದ್ ಸೈಬರ್ ಪೊಲೀಸರು ನಿರಂತರ ಕಾರ್ಯಾಚರಣೆ ನಡೆಸಿ ಕೊನೆಗೂ ರವಿಯನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಆದರೆ ಇದೀಗ ಕೊನೆಗೂ ರವಿ ಪೊಲೀಸರ ಬಲೆಗೆ ಬಿದ್ದಿದ್ದಾನೆ. ರವಿ ಮಾತ್ರವಲ್ಲದೇ ಆತನಿಗೆ ತಾಂತ್ರಿಕ ನೆರವು ನೀಡುತ್ತಿದ್ದ ಮತ್ತೋರ್ನ ವ್ಯಕ್ತಿಯನ್ನೂ ಹೈದರಾಬಾದ್ ಪೊಲೀಸರು ವಶಕ್ಕೆ ಪಡೆದಿದ್ದಾರೆ.
ನಿರ್ಮಾಪಕರ ಸಂತಸ
ಇನ್ನು ಐ ಬೊಮ್ಮ ಮ್ಯಾನೇಜರ್ ರವಿ ಬಂಧನಕ್ಕೆ ಚಲನಚಿತ್ರ ನಿರ್ದೇಶಕರು ಮತ್ತು ನಿರ್ಮಾಪಕರು ಸಂತೋಷ ವ್ಯಕ್ತಪಡಿಸುತ್ತಿದ್ದಾರೆ.