ನವದೆಹಲಿ: ದೆಹಲಿಯ ಕೆಂಪು ಕೋಟೆ ಬಳಿ ನಡೆದ ಸ್ಫೋಟ ಪ್ರಕರಣಕ್ಕ ಸಂಬಂಧಿಸಿದಂತೆ ಹರ್ಯಾಣ ಮೂಲದ ವೈದ್ಯೆ ಪ್ರಿಯಾಂಕಾ ಶರ್ಮಾ ಎಂಬುವವರನ್ನು ಕೂಡ ಅಧಿಕಾರಿಗಳು ವಿಚಾರಣೆಗೊಳಪಡಿಸಿದ್ದಾರೆ ಎಂದು ತಿಳಿದುಬಂದಿದೆ.
ದೆಹಲಿಯ ಕೆಂಪು ಕೋಟೆ ಬಳಿ ನಡೆದ ಸ್ಫೋಟದ ಬಳಿಕ ದೇಶದಲ್ಲಿ ‘ವೈಟ್ ಕಾಲರ್’ ಉಗ್ರ ಜಾಲ ಎಂಬುದು ಬೆಳಕಿಗೆ ಬಂದಿದ್ದು, ತನಿಖಾ ಸಂಸ್ಥೆಗಳು ಈ ಜಾಲಕ್ಕೆ ಸಂಬಂಧಿಸಿ ಹರಿಯಾಣದ ವೈದ್ಯೆ ಪ್ರಿಯಾಂಕಾ ಶರ್ಮಾ ಎಂಬಾಕೆಯನ್ನು ಜಮ್ಮು ಕಾಶ್ಮೀರದಲ್ಲಿ ವಿಚಾರಣೆಗೊಳಪಡಿಸಿವೆ ಎಂದು ವರದಿಯಾಗಿದೆ.
ದಕ್ಷಿಣ ಕಾಶ್ಮೀರದ ಸರ್ಕಾರಿ ವೈದ್ಯಕೀಯ ಕಾಲೇಜಿನಲ್ಲಿ ಕಾರ್ಯನಿರ್ವಹಿಸುತ್ತಿದ್ದ ಪ್ರಿಯಾಂಕಾ ಶರ್ಮಾ, ಆಕೆಗೆ ವೈಟ್ ಕಾಲರ್ ಉಗ್ರ ಜಾಲದ ಸಂಪರ್ಕವಿದೆ ಎಂದು ಆರೋಪಿಸಲಾಗಿತ್ತು.
ಪ್ರಿಯಾಂಕಾ ಶರ್ಮಾ ನಿನ್ನೆ ಅಧಿಕಾರಿಗಳು ವಿಚಾರಣೆಗೆ ಕರೆದೊಯ್ದಿದ್ದರು. ಬಳಿಕ ಸಂಜೆ ವೇಳೆಗೆ ವಿಚಾರಣೆ ಮುಗಿಸಿಕೊಂಡು ವಾಪಸ್ ಆಗಿದ್ದಾರೆ ಎಂದು ಅವರ ಸಹೋದರ ತಿಳಿಸಿದ್ದಾರೆ.
ಯಾರು ಈ ಪ್ರಿಯಾಂಕಾ ಶರ್ಮಾ?
ಹರಿಯಾಣದ ವೈದ್ಯೆ ಡಾ. ಪ್ರಿಯಾಂಕಾ ಶರ್ಮಾ ಎಂಬಾಕೆಯನ್ನು 'ವೈಟ್ ಕಾಲರ್' ಉಗ್ರ ಜಾಲಕ್ಕೆ ಸಂಬಂಧಿಸಿದಂತೆ ವಿಚಾರಣೆಗಾಗಿ ದಕ್ಷಿಣ ಕಾಶ್ಮೀರದ ಅನಂತ್‌ನಾಗ್‌ನಲ್ಲಿ ವಿಚಾರಣೆಗೊಳಪಡಿಸಲಾಗಿದೆ. ಜಮ್ಮು ಮತ್ತು ಕಾಶ್ಮೀರ ಪೊಲೀಸರ ತಂಡವು ಶರ್ಮಾಳ ನಿವಾಸಕ್ಕೆ ತೆರಳಿ ಆಕೆಯನ್ನು ವಶಕ್ಕೆ ಪಡೆದು ಅಜ್ಞಾತ ಸ್ಥಳಕ್ಕೆ ಕರೆದೊಯ್ದು ವಿಚಾರಣೆಗೊಳಪಡಿಸಿದ್ದರು ಎಂದು ಹೇಳಲಾಗಿದೆ.
ಈ ವೇಳೆ ಆಕೆಯ ಮೊಬೈಲ್ ಫೋನ್ ಮತ್ತು ಸಿಮ್ ಕಾರ್ಡ್ ಗಳನ್ನು ಕೂಡ ಅಧಿಕಾರಿಗಳು ವಶಪಡಿಸಿಕೊಂಡಿವೆ. ಅನಂತ್‌ನಾಗ್‌ನ ಸರ್ಕಾರಿ ವೈದ್ಯಕೀಯ ಕಾಲೇಜಿನ (ಜಿಎಂಸಿ) ಮಾಜಿ ಸಿಬ್ಬಂದಿ ಅದೀಲ್ ಬಂಧನದ ನಂತರ ಪ್ರಿಯಾಂಕಾ ಹೆಸರು ಕೇಳಿಬಂದಿದೆ. ಈ ಉಗ್ರ ಜಾಲಕ್ಕೆ ವಸತಿ ವ್ಯವಸ್ಥೆ ಮತ್ತು ಆರ್ಥಿಕ ಬೆಂಬಲವನ್ನು ಒದಗಿಸುತ್ತಿದ್ದ ಆರೋಪ ಆಕೆಯ ಮೇಲಿದೆ ಎನ್ನಲಾಗಿದೆ.
ಸಹೋದರ ಹೇಳಿದ್ದೇನು?
ಕೆಂಪು ಕೋಟೆ ಬಾಂಬ್ ಸ್ಫೋಟಕ್ಕೆ ಸಂಬಂಧಿಸಿದಂತೆ ವಿಚಾರಣೆಗಾಗಿ ಎಂಡಿ ವಿದ್ಯಾರ್ಥಿನಿ ಡಾ. ಪ್ರಿಯಾಂಕಾ ಶರ್ಮಾ ಅವರನ್ನು ವಶಕ್ಕೆ ಪಡೆದಿರುವ ಬಗ್ಗೆ ಅವರ ಸಹೋದರ ಭರತ್ ಭೂಷಣ್ ಸುದ್ದಿಸಂಸ್ಥೆಯೊಂದಿಗೆ ಮಾತನಾಡಿದ್ದು, "ಪ್ರಿಯಾಂಕ ಪ್ರಸ್ತುತ ವೈದ್ಯಕೀಯ ಅಧಿಕಾರಿಯಾಗಿ ಕೆಲಸ ಮಾಡುತ್ತಿದ್ದಾರೆ ಮತ್ತು ಅನಂತ್‌ನಾಗ್‌ನ ಸರ್ಕಾರಿ ವೈದ್ಯಕೀಯ ಕಾಲೇಜಿನಲ್ಲಿ ಜನರಲ್ ಮೆಡಿಸಿನ್‌ನಲ್ಲಿ ಎಂಡಿ ವ್ಯಾಸಂಗ ಮಾಡುತ್ತಿದ್ದಾರೆ.
ನಿನ್ನೆ ರಾತ್ರಿ, ಅವರನ್ನು ಅನಂತ್‌ನಾಗ್‌ನಲ್ಲಿ ಅಧಿಕಾರಿಗಳು ವಿಚಾರಣೆಗೆ ಕರೆದೊಯ್ದರು. ಆದರೆ ನಂತರ ಬಿಡುಗಡೆ ಮಾಡಲಾಯಿತು. ಅವರು ಅವರು ಎಂಬಿಬಿಎಸ್ ಎಲ್ಲಿ ಮುಗಿಸಿದ್ದಾರೆ. ಅವರ ಹಿನ್ನೆಲೆ, ಅವರು ಅಲ್ಲಿ ಹೇಗೆ ಓದುತ್ತಿದ್ದಾರೆ ಮತ್ತು ಅವರ ಕುಟುಂಬದ ಬಗ್ಗೆ ನಿಯಮಿತ ಪ್ರಶ್ನೆಗಳನ್ನು ಕೇಳಿದರು..." ಎಂದು ಹೇಳಿದ್ದಾರೆ.
ತನಿಖೆ ತೀವ್ರ
ಇನ್ನು ಕಾರಿನಲ್ಲಿದ್ದ ಆತ್ಮಹತ್ಯಾ ಬಾಂಬರ್ ಡಾ ಉಮರ್ ಉನ್ ನಬಿಯೊಂದಿಗೆ ಸಂಪರ್ಕದಲ್ಲಿದ್ದ ಶಂಕೆಯಲ್ಲಿ ಹರಿಯಾಣದ ನುಹ್‌ನಲ್ಲಿ ಬಂಧಿತರಾಗಿದ್ದ ಡಾ ರೆಹಾನ್, ಡಾ ಮುಹಮ್ಮದ್, ಡಾ ಮುಸ್ತಕೀಮ್ ಹಾಗೂ ರಸಗೊಬ್ಬರ ವ್ಯಾಪಾರಿ ದಿನೇಶ್ ಸಿಂಗ್ಲಾರನ್ನು ಈ ಪ್ರಕರಣದಲ್ಲಿ ಯಾವುದೇ ನಂಟಿಲ್ಲ ಎಂಬ ಕಾರಣಕ್ಕೆ ನಿನ್ನೆ ಬಿಡುಗಡೆ ಮಾಡಲಾಗಿದೆ.
ಅಲ್ಲದೆ ಭಯೋತ್ಪಾದನಾ ನಿಗ್ರಹ ದಳ (ಎಟಿಎಸ್) ಉತ್ತರ ಪ್ರದೇಶದ ಸುಮಾರು 200 ಕಾಶ್ಮೀರಿ ಮೂಲದ ವೈದ್ಯಕೀಯ ವಿದ್ಯಾರ್ಥಿಗಳು ಮತ್ತು ವೈದ್ಯರನ್ನು ತನಿಖೆ ನಡೆಸುತ್ತಿದೆ. 'ವೈಟ್ ಕಾಲರ್' ಉಗ್ರ ಜಾಲದ ತನಿಖೆಯ ಭಾಗವಾಗಿ ಎಟಿಎಸ್ ಲಕ್ನೋ, ಕಾನ್ಪುರ, ಮೀರತ್, ಸಹರಾನ್‌ಪುರ ಮತ್ತು ಇತರ ನಗರಗಳ ಕಾಲೇಜುಗಳು ಮತ್ತು ವಿಶ್ವವಿದ್ಯಾಲಯಗಳನ್ನು ತನಿಖಾ ತಂಡ ಸಂಪರ್ಕಿಸಿದೆ. ಹರಿಯಾಣದಲ್ಲಿ ಹಲವು ವೈದ್ಯರನ್ನು ಮತ್ತು ಫರಿದಾಬಾದ್‌ನ ಅಲ್-ಫಲಾಹ್ ವಿಶ್ವವಿದ್ಯಾಲಯದ ಇತರರನ್ನು ಭಯೋತ್ಪಾದಕ ಗುಂಪುಗಳೊಂದಿಗೆ ಸಂಪರ್ಕ ಹೊಂದಿರುವ ಶಂಕೆಯಿಂದ ಬಂಧಿಸಲಾಗಿದೆ.
ಏನಿದು ಘಟನೆ?
ನವೆಂಬರ್ 10ರಂದು ದೆಹಲಿಯ ಕೆಂಪು ಕೋಟೆ ಸಂಕೀರ್ಣದ ಬಳಿ ಸಂಭವಿಸಿದ ಸ್ಫೋಟದಲ್ಲಿ 12 ಮಂದಿ ಮೃತಪಟ್ಟಿದ್ದು ಹಲವು ಮಂದಿ ಗಾಯಗೊಂಡಿದ್ದಾರೆ. ದೆಹಲಿ ಪೊಲೀಸರು ಕ್ರಿಮಿನಲ್ ಪಿತೂರಿಯ ಅಡಿಯಲ್ಲಿ ಹೊಸ ಎಫ್‌ಐಆರ್ ದಾಖಲಿಸಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಸದ್ಯ ಕೆಂಪು ಕೋಟೆಯ ಸುತ್ತಲೂ ಭದ್ರತೆಯನ್ನು ಹೆಚ್ಚಿಸಲಾಗಿದೆ.