ಐಬೊಮ್ಮ ಪೈರಸಿ ವೆಬ್ ಸೈಟ್ ಮಾಲೀಕ ರವಿ  
ದೇಶ

'ವಿದೇಶದಲ್ಲಿ ವಾಸ, 20 ಕೋಟಿ ರೂ ಆದಾಯ': Piracy ಮಾಸ್ಟರ್ ಮೈಂಡ್ Ravi immadi ಸಿಕ್ಕಿಬಿದ್ದಿದ್ದೇ ರೋಚಕ; ಪತ್ನಿಯೇ ತೋಡಿದ್ದಳು ಗುಂಡಿ!

ಈ ಪೈರಸಿ ಕಾಟದಿಂದಾಗಿ ತೆಲುಗು ಚಿತ್ರೋದ್ಯಮಕ್ಕೆ ಸಾವಿರಾರು ಕೋಟಿ ನಷ್ಟವಾಗುತ್ತಿತ್ತು. ಪೊಲೀಸರ ಕ್ರಮದಿಂದ ನಿರ್ಮಾಪಕರಿಗೆ ದೊಡ್ಡ ರಿಲೀಫ್ ಸಿಕ್ಕಂತಾಗಿದೆ.

ಹೈದರಾಬಾದ್: ಪೈರಸಿ ಮಾಸ್ಟರ್ ಐಬೊಮ್ಮ ಮಾಲೀಕ ರವಿಯನ್ನು ಪೊಲೀಸರು ಬಂಧಿಸಿರುವ ವಿಚಾರ ವೈರಲ್ ಆಗುತ್ತಲೇ ಆತನ ಬಂಧನದ ಹಿಂದೆ ಆತನ ಪತ್ನಿಯ ಕೈವಾಡದ ಕುರಿತು ವ್ಯಾಪಕ ಚರ್ಚೆಯಾಗುತ್ತಿದೆ.

ಹೌದು.. ಹಲವು ವರ್ಷಗಳಿಂದ ಚಲನಚಿತ್ರೋದ್ಯಮಕ್ಕೆ ನುಂಗಲಾರದ ತುತ್ತಾಗಿದ್ದ ಪೈರಸಿ ಮಾಸ್ಟರ್ ಮೈಂಡ್ ಐಬೊಮ್ಮ ವೆಬ್ ಸೈಟ್ ಮಾಲೀಕ ಇಮ್ಮಡಿ ರವಿಯನ್ನು ಹೈದರಾಬಾದ್ ಸೈಬರ್ ಪೊಲೀಸರು ಬಂಧಿಸಿದ್ದು, ಆ ಮೂಲಕ ತೆಲುಗು ಚಲನಚಿತ್ರೋದ್ಯಮಕ್ಕೆ ದೊಡ್ಡ ರಿಲೀಫ್ ನೀಡಿದ್ದಾರೆ.

ಈ ಪೈರಸಿ ಕಾಟದಿಂದಾಗಿ ತೆಲುಗು ಚಿತ್ರೋದ್ಯಮಕ್ಕೆ ಸಾವಿರಾರು ಕೋಟಿ ನಷ್ಟವಾಗುತ್ತಿತ್ತು. ಪೊಲೀಸರ ಕ್ರಮದಿಂದ ನಿರ್ಮಾಪಕರಿಗೆ ದೊಡ್ಡ ರಿಲೀಫ್ ಸಿಕ್ಕಂತಾಗಿದೆ.

ವಿದೇಶದಲ್ಲಿ ವಾಸ

ರವಿ ವಿದೇಶಗಳಲ್ಲಿ ವಾಸವಿದ್ದು ಸಿನಿಮಾವನ್ನು ಪೈರಸಿ ಮಾಡುತ್ತಿದ್ದ, ಇದರಿಂದ ಹಲವು ಸಿನಿಮಾ ನಿರ್ಮಾಪಕರು ನಷ್ಟ ಅನುಭವಿಸಿದ್ದರು. ಅವರು ಈ ಕುರಿತು ದೂರು ನೀಡಿದ್ದರು. ಆರೋಪಿಯು ಶನಿವಾರ ಭಾರತಕ್ಕೆ ಆಗಮಿಸಿದ ವೇಳೆ ಅವನನ್ನು ಬಂಧಿಸಲಾಗಿದೆ ಎಂದು ಹೇಳಿದ್ದಾರೆ.

ಈ ರವಿ ಡಿಜಿಟಲ್‌ ಕಂಪನಿಗಳ ಸರ್ವರ್‌ಗಳನ್ನು ಹ್ಯಾಕ್‌ ಮಾಡುತ್ತಿದ್ದ. ಸಿನಿಮಾ ಬಿಡುಗಡೆಗೂ ಮುನ್ನವೇ ಅದರ ಪೈರೇಟೆಡ್‌ ಕಾಪಿಯನ್ನು ವೆಬ್‌ಸೈಟ್‌ನಲ್ಲಿ ಹರಿಬಿಡುತ್ತಿದ್ದ. ಇದರಿಂದ ಚಿತ್ರರಂಗಕ್ಕೆ ಅಪಾರ ಹಾನಿಯಾಗಿತ್ತು. ಆರೋಪಿಯ ವಿಚಾರಣೆಯ ನಂತರ ಮತ್ತಷ್ಟು ಮಾಹಿತಿಯನ್ನು ಬಹಿರಂಗಪಡಿಸುವುದಾಗಿ ಪೊಲೀಸರು ಹೇಳಿದ್ದಾರೆ.

ಪೈರಸಿಯಿಂದ 20 ಕೋಟಿ ರೂ ಸಂಪಾದನೆ

ಹೈದರಾಬಾದ್ ಆಯುಕ್ತ ವಿ.ಸಿ. ಸಜ್ಜನರ್ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, "ಪೈರಸಿ ಚಿತ್ರರಂಗಕ್ಕೆ ಸಾಕಷ್ಟು ಹಾನಿ ಉಂಟುಮಾಡಿದೆ. ಪೈರಸಿ ಮಾಸ್ಟರ್ ಮೈಂಡ್ ಮತ್ತು ಐಬೊಮ್ಮ ಆಡಳಿತಾಧಿಕಾರಿ ರವಿ ಅವರನ್ನು ಬಂಧಿಸಲಾಗಿದೆ. ರವಿ ಹೊಸ ತಂತ್ರಜ್ಞಾನ ಬಳಸಿ ಸಿನಿಮಾಗಳನ್ನು ಅಪ್‌ಲೋಡ್ ಮಾಡುತ್ತಿದ್ದ. ಈ ಮೂಲಕ ರವಿ ಇಲ್ಲಿಯವರೆಗೆ ಬರೊಬ್ಬರಿ 20 ಕೋಟಿ ರೂ. ಗಳಿಸಿದ್ದಾನೆ ಎಂದು ಅವರು ಮಾಹಿತಿ ನೀಡಿದರು.

ಅಂತೆಯೇ, 'ನಾವು ಹಲವು ದಿನಗಳಿಂದ ಐಬೊಮ್ಮ ಬಗ್ಗೆ ತನಿಖೆ ನಡೆಸುತ್ತಿದ್ದೇವೆ. ಪೈರಸಿ ತಡೆಯಲು ನಾವು ಶ್ರಮಿಸಿದ್ದೇವೆ. ನಾವು ಈಗಾಗಲೇ ಇಬ್ಬರು ಆರೋಪಿಗಳನ್ನು ಬಂಧಿಸಿದ್ದೇವೆ. ದೇಶಾದ್ಯಂತ ಪೈರಸಿ ಸಮಸ್ಯೆ ಇದೆ. ಆರೋಪಿ ರವಿ ಹೊಸ ತಂತ್ರಜ್ಞಾನ ಬಳಸಿ ಸಿನಿಮಾಗಳನ್ನು ಅಪ್‌ಲೋಡ್ ಮಾಡುತ್ತಿದ್ದ. ನಾವು ರವಿಯನ್ನು ವಿಚಾರಣೆ ನಡೆಸುತ್ತಿದ್ದೇವೆ. ಆರೋಪಿಗೆ ಅಂತರರಾಷ್ಟ್ರೀಯ ಸಂಪರ್ಕವಿದೆ. ಐಬೊಮ್ಮ ದಂಧೆಯನ್ನು ಭೇದಿಸಲು ನಾವು ರಾಷ್ಟ್ರೀಯ ಸಂಸ್ಥೆಗಳ ಬೆಂಬಲವನ್ನು ಪಡೆಯುತ್ತೇವೆ ಎಂದು ಸಜ್ಜನರ್ ಹೇಳಿದ್ದಾರೆ.

ಅಂತೆಯೇ ಪೈರಸಿ ಎಷ್ಟರ ಮಟ್ಟಿಗೆ ಕೆಲಸ ಮಾಡುತ್ತಿತ್ತು ಎಂಬುದಕ್ಕೆ ಉದಾಹರಣೆ ಕೂಡ ಕೊಟ್ಟಿರುವ ಸಜ್ಜನರ್, ಬೆಳಗ್ಗೆ ಬಿಡುಗಡೆಯಾಗುತ್ತಿದ್ದ ಚಿತ್ರವು ಸಂಜೆ ವೇಳೆಗೇ ಐಬೊಮ್ಮ ವೆಬ್ ಸೈಟ್ ನಲ್ಲಿ ಕಾಣಿಸುತ್ತಿತ್ತು.

ಪ್ರಸ್ತುತ ಐಬೊಮ್ಮ ರವಿ ವಿರುದ್ಧ ಮೂರು ಪೈರಸಿ ಪ್ರಕರಣಗಳು ದಾಖಲಾಗಿವೆ. ರವಿ ಜನರಿಗೆ ಗಂಭೀರ ಹಾನಿಯನ್ನುಂಟುಮಾಡಿದ್ದಾರೆ. ರವಿ ಪ್ರಚಾರ ಮಾಡುವ ಬೆಟ್ಟಿಂಗ್ ಆಪ್‌ಗಳಿಂದ ಅನೇಕ ಜನರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಹಲವರನ್ನು ಡಿಜಿಟಲ್ ರೂಪದಲ್ಲಿ ಬಂಧಿಸಲಾಗಿದೆ. ಐಬೊಮ್ಮ ರವಿ ಹಿಂದೆ ಡಾರ್ಕ್ ವೆಬ್‌ಸೈಟ್‌ಗಳಿವೆ ಎಂದು ಹೇಳಿದರು.

ಮನೆಯಲ್ಲಿದ್ದಾಗಲೇ ರವಿ ಬಂಧನ

ಫ್ರಾನ್ಸ್‌ನಿಂದ ಹೈದರಾಬಾದ್‌ಗೆ ಒಂದು ಪ್ರಮುಖ ಕೆಲಸದ ನಿಮಿತ್ತ ಬಂದಿದ್ದ ವೇಳೆ ಪೊಲೀಸರು ರವಿಯನ್ನು ಬಂಧಿಸಿದ್ದಾರೆ. ಹೈದರಾಬಾದ್ ನ ಕೂಕಟ್ಪಲ್ಲಿಯಲ್ಲಿರುವ ರೇನ್ ವಿಸ್ಟಾ ಅಪಾರ್ಟ್ ಮೆಂಟ್ ನಲ್ಲಿದ್ದಾಗ ರವಿಯನ್ನು ಪೊಲೀಸರು ಬಂಧಿಸಿದ್ದಾರೆ.

ಈ ವೇಳೆ ರವಿ ಮನೆ ಮೇಲೆ ದಾಳಿ ಮಾಡಿದ್ದ ಪೊಲೀಸರು ಅಲ್ಲಿದ್ದ ಹತ್ತಾರು ಹಾರ್ಡ್ ಡಿಸ್ಕ್ ಗಳು, ಲ್ಯಾಪ್‌ಟಾಪ್‌ಗಳು, ಕಂಪ್ಯೂಟರ್‌ಗಳು ಮತ್ತು ಕೆಲವು ಚಲನಚಿತ್ರಗಳ ಎಚ್‌ಡಿ ಪ್ರಿಂಟ್‌ಗಳನ್ನು ವಶಪಡಿಸಿಕೊಂಡಿದ್ದಾರೆ. ಅಲ್ಲದೆ ರವಿಯ ಐ-ಬೊಮ್ಮ ವೆಬ್‌ಸೈಟ್ ಸರ್ವರ್‌ನಿಂದ ಮಾಹಿತಿಯನ್ನು ಸಂಗ್ರಹಿಸಿದ್ದಾರೆ. ಅಪ್‌ಲೋಡ್ ಮಾಡಲು ಸಿದ್ಧವಾಗಿದ್ದ ಕೆಲವು ಹೊಸ ಚಲನಚಿತ್ರಗಳ ಹಾರ್ಡ್ ಡಿಸ್ಕ್‌ಗಳನ್ನು ಸಹ ಪೊಲೀಸರು ವಶಪಡಿಸಿಕೊಂಡಿದ್ದಾರೆ.

ಪ್ರಹ್ಲಾದ್ ಹೆಸರಿನಲ್ಲಿ ಮಹಾರಾಷ್ಟ್ರದಲ್ಲಿ ಚಾಲನಾ ಪರವಾನಗಿ ಪಡೆದಿದ್ದಾನೆ. ರವಿ ಬಳಿ 50 ಲಕ್ಷ ಚಂದಾದಾರರ ಡೇಟಾ ಇದೆ. ಈ ಡೇಟಾವನ್ನು ದುರುಪಯೋಗಪಡಿಸಿಕೊಳ್ಳುವ ಸಾಧ್ಯತೆಯಿದೆ. ಅವರು ಅಮೆರಿಕ ಮತ್ತು ನೆದರ್‌ಲ್ಯಾಂಡ್ಸ್‌ನಲ್ಲಿ ಸರ್ವರ್‌ಗಳನ್ನು ಸ್ಥಾಪಿಸಿದ್ದಾರೆ. ರವಿ ಅವರ ಹಾರ್ಡ್ ಡಿಸ್ಕ್‌ನಲ್ಲಿ ಎಲ್ಲಾ ಸಿನಿಮಾಗಳಿವೆ. ಟೆಲಿಗ್ರಾಮ್ ಆ್ಯಪ್‌ನಲ್ಲಿ ಪೈರೇಟೆಡ್ ಸಿನಿಮಾಗಳನ್ನು ಸಹ ಅಪ್‌ಲೋಡ್ ಮಾಡಿದ್ದಾನೆ. ಇದು ಗಂಭೀರ ಪ್ರಕರಣವಾಗಿದೆ ಎಂದರು.

ಪೈರಸಿ ಮೂಲಕ ಸಿನಿಮಾ ನೋಡುವವರ ಮೇಲೆ ಕಣ್ಗಾವಲು

ಅಂತೆಯೇ ಆರೋಪಿಗಳು ಎಲ್ಲಿದ್ದರೂ ಪೊಲೀಸರು ಅವರನ್ನು ಹಿಡಿಯುತ್ತಾರೆ. ಪೈರಸಿ ಮೂಲಕ ಸಿನಿಮಾ ನೋಡುವವರ ಮೇಲೆ ಕಣ್ಗಾವಲು ಹಾಕಿದ್ದೇವೆ ಎಂದು ಸಜ್ಜನರ್ ಹೇಳಿದರು. ರವಿ ಮಾಡಿದ ಬೆಟ್ಟಿಂಗ್ ಆ್ಯಪ್ ಪ್ರಚಾರದಿಂದಾಗಿ ಅನೇಕ ಜನರು ಹಣ ಕಳೆದುಕೊಂಡಿದ್ದಾರೆ. ರವಿ ವಿರುದ್ಧ ನಾವು ಐದು ಪ್ರಕರಣಗಳನ್ನು ದಾಖಲಿಸಿದ್ದೇವೆ.

ಹಾರ್ಡ್ ಡಿಸ್ಕ್ ನಲ್ಲಿ 21 ಸಾವಿರ ಸಿನಿಮಾಗಳು

21 ಸಾವಿರ ಸಿನಿಮಾಗಳು ಹಾರ್ಡ್ ಡಿಸ್ಕ್‌ನಲ್ಲಿವೆ. ರವಿಯಿಂದಾಗಿ ಚಿತ್ರೋದ್ಯಮಕ್ಕೆ ಅಪಾರ ಹಾನಿಯಾಗಿದೆ. ಆರೋಪಿಗಳ ವಿರುದ್ಧ ಐಟಿ ವಿಭಾಗಗಳ ಅಡಿಯಲ್ಲಿ ಪ್ರಕರಣಗಳನ್ನು ದಾಖಲಿಸಿದ್ದೇವೆ. ಇಲ್ಲಿಯವರೆಗೆ, ನಾವು ಇಬ್ಬರು ಆರೋಪಿಗಳನ್ನು ಬಂಧಿಸಿದ್ದೇವೆ.

1970 ರ ಚಲನಚಿತ್ರಗಳ ಎಲ್ಲಾ ಚಲನಚಿತ್ರಗಳು ಇಲ್ಲಿಯವರೆಗೆ ರವಿ ಬಳಿ ಇವೆ. ಹಾಲಿವುಡ್, ಬಾಲಿವುಡ್, ಟಾಲಿವುಡ್‌ನ ಇನ್ನೂ ಅನೇಕ ಚಲನಚಿತ್ರಗಳಿವೆ. ಇಬೊಮ್ಮ ರವಿಯನ್ನು ಹಿಡಿಯಲು ಪೊಲೀಸರು ಶ್ರಮಿಸಿದ್ದಾರೆ. ಇಬೊಮ್ಮನ ಹಿಂದೆ ದೊಡ್ಡ ಜಾಲವಿದೆ.

ರವಿ ವಿವಿಧ ಹೆಸರುಗಳಲ್ಲಿ ಪರವಾನಗಿಗಳು ಮತ್ತು ಪ್ಯಾನ್ ಕಾರ್ಡ್‌ಗಳನ್ನು ಪಡೆದಿದ್ದಾನೆ. ಆರೋಪಿಗಳು ಎಲ್ಲಿಂದ ಡೇಟಾವನ್ನು ಸಂಗ್ರಹಿಸಿದ್ದಾರೆ ಎಂಬುದನ್ನು ನಾವು ತನಿಖೆ ಮಾಡುತ್ತಿದ್ದೇವೆ, 'ಎಂದು ಅವರು ಹೇಳಿದರು.

ಸಿಕ್ಕಿಬಿದ್ದಿದ್ದೇ ರೋಚಕ, ಪತ್ನಿಯೇ ತೋಡಿದ್ದಳು ಗುಂಡಿ

ಮೂಲಗಳ ಪ್ರಕಾರ ಇಮ್ಮಡಿ ರವಿಯ ಬಂಧನದಲ್ಲಿ ಆತನ ಪತ್ನಿಯೇ ಪ್ರಮುಖ ಪಾತ್ರವಹಿಸಿದ್ದರು ಎನ್ನಲಾಗಿದೆ. ಕಳೆದ ಕೆಲ ವರ್ಷಗಳಿಂದ ರವಿ ಮತ್ತು ಆತನ ಪತ್ನಿ ಜೊತೆ ಭಿನ್ನಾಭಿಪ್ರಾಯಗಳಿದ್ದವು. ಇಬ್ಬರೂ ಪರಸ್ಪರ ಒಪ್ಪಿಗೆಯೊಂದಿಗೆ ವಿಚ್ಛೇದನಕ್ಕೆ ಸಿದ್ಧರಾಗಿದ್ದರು.

ವಿದೇಶದಲ್ಲಿರುವ ರವಿ, ಪತ್ನಿಯಿಂದ ವಿಚ್ಛೇದನ ಪಡೆಯಲು ಫ್ರಾನ್ಸ್ ನಿಂದ ಹೈದರಾಬಾದ್ ಗೆ ಬಂದಿದ್ದಾನೆ ಎನ್ನಲಾಗಿದೆ. ರವಿ ಹೈದರಾಬಾದ್ ಗೆ ಬರುತ್ತಿರುವ ಬಗ್ಗೆ ಅವರ ಪತ್ನಿಯೇ ಸೈಬರ್ ಕ್ರೈಂ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ ಎಂದು ಹೇಳಲಾಗಿದೆ. ರವಿ ಪತ್ನಿ ನೀಡಿದ ಮಾಹಿತಿ ಮೇರೆಗೆ ಕಾರ್ಯಾಚರಣೆ ನಡೆಸಿದ ಪೊಲೀಸರು ಆತನ ಅಪಾರ್ಟ್ ಮೆಂಟ್ ನಲ್ಲೇ ರವಿಯನ್ನು ಬಂಧಿಸಿದ್ದಾರೆ. ಪೊಲೀಸರು ರವಿಯ ಚಲನವಲನಗಳ ಮೇಲೆ ನಿಗಾ ಇರಿಸಿ ನಿರ್ದಿಷ್ಟ ಯೋಜನೆಯ ಪ್ರಕಾರ ಬಂಧಿಸಿದ್ದಾರೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ದೆಹಲಿ ಸ್ಫೋಟದ ಅಪರಾಧಿಗಳು ಎಲ್ಲೇ ಅಡಗಿದ್ದರೂ ಹಿಡಿದು ಅವರಿಗೆ ಕಠಿಣ ಶಿಕ್ಷೆ ಕೊಡಿಸುತ್ತೇವೆ: ಅಮಿತ್ ಶಾ

ಪ್ರಧಾನಿ ಮೋದಿ ಭೇಟಿಯಾದ ಸಿಎಂ; ರಾಯಚೂರಿಗೆ ಏಮ್ಸ್, ಪ್ರವಾಹ ಪರಿಹಾರಕ್ಕೆ ಮನವಿ

ದೆಹಲಿ ಸ್ಫೋಟಕ್ಕೂ ಮುನ್ನ ಹಮಾಸ್ ಮಾದರಿಯ ಭೀಕರ ದಾಳಿಗೆ ಯೋಜನೆ ರೂಪಿಸಿದ್ದ ಉಗ್ರರು!

ಸಿಎಂ ಸಿದ್ದರಾಮಯ್ಯ ಪತ್ನಿ ಪಾರ್ವತಿ ಆರೋಗ್ಯದಲ್ಲಿ ಏರುಪೇರು, ICU ನಲ್ಲಿ ಚಿಕಿತ್ಸೆ!

ವಿದ್ಯಾರ್ಥಿಗಳನ್ನು ಕ್ರೂರವಾಗಿ ಥಳಿಸುತ್ತಿರುವ ಮದರಸಾ ಶಿಕ್ಷಕ: ಸಿಸಿಟಿವಿ ವಿಡಿಯೋ ವೈರಲ್!

SCROLL FOR NEXT