ನವದೆಹಲಿ: ದೆಹಲಿ ಕಾರ್ ಬಾಂಬ್ ಸ್ಫೋಟದ ಪ್ರಮುಖ ಆರೋಪಿ ಡಾ. ಉಮರ್ ಉನ್ ನಬಿಯ "ಸಕ್ರಿಯ ಸಹ-ಸಂಚುಕೋರ" ಜಾಸಿರ್ ಬಿಲಾಲ್ ನನ್ನು ದೆಹಲಿ ನ್ಯಾಯಾಲಯ ಮಂಗಳವಾರ 10 ದಿನಗಳ NIA ಕಸ್ಟಡಿಗೆ ಒಪ್ಪಿಸಿದೆ.
ಕಾರು ಸ್ಫೋಟ ಪ್ರಕರಣದ ತನಿಖೆ ನಡೆಸುತ್ತಿರುವ NIA ತಂಡ ನಿನ್ನೆ ಶ್ರೀನಗರದಲ್ಲಿ ಜಾಸಿರ್ ಬಿಲಾಲ್ ವನಿಯನ್ನು ಬಂಧಿಸಿ, ದೆಹಲಿಗೆ ಕರೆತಂದಿತ್ತು.
ಇಂದು ಆರೋಪಿಯನ್ನು ಪ್ರಧಾನ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಧೀಶೆ ಅಂಜು ಬಜಾಜ್ ಚಂದನಾ ಅವರ ಮುಂದೆ ಹಾಜರುಪಡಿಸಿ, ಹೆಚ್ಚಿನ ವಿಚಾರಣೆಗಾಗಿ ತನ್ನ ಕಸ್ಟಡಿಗೆ ನೀಡುವಂತೆ NIA ಕೋರಿತ್ತು. ವಿಚಾರಣೆ ನಡೆಸಿದ ಕೋರ್ಟ್, ಆರೋಪಿಯನ್ನು 10 ದಿನ ಎನ್ಐಎ ಕಸ್ಟಡಿಗೆ ನೀಡಿ ಆದೇಶಿಸಿದೆ.
ಆರೋಪಿಯನ್ನು ಕೋರ್ಟ್ ಹಾಜರುಪಡಿಸುವ ವೇಳೆ ನ್ಯಾಯಾಲಯದ ಆವರಣದಲ್ಲಿ ಪೊಲೀಸ್ ಮತ್ತು ಕ್ಷಿಪ್ರ ಕಾರ್ಯಪಡೆಯ ಭಾರೀ ನಿಯೋಜನೆ ಮಾಡಲಾಗಿತ್ತು.
ಅನಂತನಾಗ್ ಜಿಲ್ಲೆಯ ಖಾಜಿಗುಂಡ್ ನಿವಾಸಿ ಜಾಸಿರ್ ದಾಳಿಯಲ್ಲಿ ಭಾಗಿಯಾಗಿರುವ ಗುಂಪಿಗೆ ತಾಂತ್ರಿಕ ಸಹಾಯ ನೀಡಿದ್ದಾನೆ ಎಂದು ತನಿಖಾಧಿಕಾರಿಗಳು ತಿಳಿಸಿದ್ದಾರೆ.
ತನಿಖಾ ಸಂಸ್ಥೆಯ ಪ್ರಕಾರ, ಜಾಸಿರ್, ಕಾರು ಸ್ಫೋಟ ಯೋಜಿಸುವಲ್ಲಿ ಪ್ರಮುಖ ಪಾತ್ರ ವಹಿಸಿದ್ದಾರೆಂದು ನಂಬಲಾದ ಭಯೋತ್ಪಾದಕ ಉಮರ್ ಉನ್ ನಬಿಯ ಸಹಚರನಾಗಿದ್ದ ಎನ್ನಲಾಗಿದೆ.