ಪಾಟ್ನಾ: ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್ ಅವರು ಸಚಿವರಿಗೆ ಖಾತೆಗಳನ್ನು ಹಂಚಿಕೆ ಮಾಡಿದ ಒಂದು ದಿನದ ನಂತರ, ವಿಧಾನಸಭೆಯಲ್ಲಿ ಸ್ಪೀಕರ್ ಹುದ್ದೆಗೆ ಲಾಬಿ ತೀವ್ರಗೊಂಡಿದೆ ಎಂದು ಆಡಳಿತಾರೂಢ ಎನ್‌ಡಿಎ ಮೂಲಗಳು ಶನಿವಾರ ತಿಳಿಸಿವೆ.
ಗಯಾ ಟೌನ್ ವಿಧಾನಸಭಾ ಕ್ಷೇತ್ರದಿಂದ ಸತತ ಒಂಬತ್ತನೇ ಬಾರಿಗೆ ಶಾಸಕರಾಗಿ ಆಯ್ಕೆಯಾಗಿರುವ ಬಿಜೆಪಿಯ ಪ್ರೇಮ್ ಕುಮಾರ್ ಅವರನ್ನು ಸ್ಪೀಕರ್ ಹುದ್ದೆಗೆ ಮುಂಚೂಣಿಯಲ್ಲಿ ಪರಿಗಣಿಸಲಾಗಿದೆ. ಜೆಡಿ(ಯು)ನ ಝಾಝಾ ಶಾಸಕ ದಾಮೋದರ್ ರಾವತ್ ಅವರ ಹೆಸರೂ ಕೂಡ ಕೇಳಿಬರುತ್ತಿದೆ ಎನ್ನಲಾಗಿದೆ.
ಎಲ್ಲ 243 ಚುನಾಯಿತ ಸದಸ್ಯರು ಪ್ರಮಾಣ ವಚನ ಸ್ವೀಕರಿಸಲು ಮತ್ತು ಸ್ಪೀಕರ್ ಅನ್ನು ಆಯ್ಕೆ ಮಾಡಲು ಶೀಘ್ರದಲ್ಲೇ ವಿಧಾನಸಭೆಯ ವಿಶೇಷ ಅಧಿವೇಶನ ಕರೆಯಲಾಗುವುದು. ವಿಶೇಷ ಅಧಿವೇಶನ ಆರಂಭವಾಗುವ ದಿನಾಂಕವನ್ನು ನವೆಂಬರ್ 25 ರಂದು ನಡೆಯಲಿರುವ ರಾಜ್ಯ ಸಚಿವ ಸಂಪುಟ ಸಭೆಯಲ್ಲಿ ನಿರ್ಧರಿಸಲಾಗುವುದು ಎಂದು ಮೂಲಗಳು ತಿಳಿಸಿವೆ.
'ರಾಜ್ಯಪಾಲರು ಮೊದಲು ಹಂಗಾಮಿ ಸ್ಪೀಕರ್ ಅವರನ್ನು ನೇಮಿಸುತ್ತಾರೆ. ಅವರು ಹೊಸದಾಗಿ ಆಯ್ಕೆಯಾದ ಸದಸ್ಯರಿಗೆ ಪ್ರಮಾಣ ವಚನ ಬೋಧಿಸುತ್ತಾರೆ. ಪ್ರಮಾಣ ವಚನ ಸ್ವೀಕರಿಸಿದ ನಂತರ, ಸ್ಪೀಕರ್ ಚುನಾವಣೆ ನಡೆಯಲಿದೆ' ಎಂದು ಎನ್‌ಡಿಎ ಮಿತ್ರಪಕ್ಷದ ಹಿರಿಯ ನಾಯಕರೊಬ್ಬರು ಹೇಳಿದರು.
ಎನ್‌ಡಿಎಯ ಎರಡು ಪ್ರಮುಖ ಮಿತ್ರಪಕ್ಷಗಳಾದ ಬಿಜೆಪಿ ಮತ್ತು ಜೆಡಿ(ಯು) ಸ್ಪೀಕರ್ ಹುದ್ದೆಯ ಮೇಲೆ ಕಣ್ಣಿಟ್ಟಿವೆ ಎಂದು ಮೂಲಗಳು ತಿಳಿಸಿದ್ದು, ಈಗ ಮೈತ್ರಿಕೂಟದ ಪಾಲುದಾರರಲ್ಲಿ ಸ್ಪೀಕರ್ ಹುದ್ದೆಗಾಗಿ ಲಾಬಿ ತೀವ್ರಗೊಂಡಿದೆ ಎಂದು ಜೆಡಿ(ಯು) ನಾಯಕರೊಬ್ಬರು ತಿಳಿಸಿದ್ದಾರೆ.
'ಲಾಬಿ ನಡೆಯುತ್ತಿದೆ. ನಮ್ಮ ಅತ್ಯಂತ ಹಿರಿಯ ಶಾಸಕ ಪ್ರೇಮ್ ಕುಮಾರ್ ಸ್ಪೀಕರ್ ಹುದ್ದೆಗೆ ಮುಂಚೂಣಿಯಲ್ಲಿದ್ದಾರೆ' ಬಿಜೆಪಿ ನಾಯಕರೊಬ್ಬರು ತಿಳಿಸಿದ್ದಾರೆ.
ಹಿಂದಿನ ಎನ್‌ಡಿಎ ಸರ್ಕಾರದಲ್ಲಿ ಸಹಕಾರಿ ಸಚಿವರಾಗಿದ್ದ ಪ್ರೇಮ್ ಕುಮಾರ್, ಈ ಬಾರಿ ಕಾಂಗ್ರೆಸ್ ಅಭ್ಯರ್ಥಿ ಅಖೌರಿ ಓಂಕಾರ್ ನಾಥ್ ಅವರನ್ನು 26,423 ಮತಗಳ ಅಂತರದಿಂದ ಸೋಲಿಸಿದ್ದಾರೆ. ಅವರು 2015 ಮತ್ತು 2017ರ ನಡುವೆ ಬಿಹಾರ ವಿಧಾನಸಭೆಯಲ್ಲಿ ವಿರೋಧ ಪಕ್ಷದ ನಾಯಕರಾಗಿದ್ದರು.
ಜೆಡಿಯು ಮೂಲಗಳು ಹೇಳುವಂತೆ ಝಾಝಾ ಶಾಸಕ ದಾಮೋದರ್ ರಾವತ್ ಕೂಡ ಈ ಹುದ್ದೆಗೆ ಮುಂಚೂಣಿಯಲ್ಲಿದ್ದಾರೆ.
ಕಳೆದ ವಿಧಾನಸಭೆಯಲ್ಲಿ ಬಿಜೆಪಿ ನಾಯಕ ನಂದ ಕಿಶೋರ್ ಯಾದವ್ ಸ್ಪೀಕರ್ ಆಗಿ ಸೇವೆ ಸಲ್ಲಿಸಿದರೆ, ಜೆಡಿಯುನ ನರೇಂದ್ರ ನಾರಾಯಣ್ ಯಾದವ್ ಉಪ ಸ್ಪೀಕರ್ ಹುದ್ದೆಯನ್ನು ಅಲಂಕರಿಸಿದ್ದರು.