ಇಂಫಾಲ್: ಮಣಿಪುರದ ಭದ್ರತಾ ಪಡೆಗಳು ವಿವಿಧ ನಿಷೇಧಿತ ಸಂಘಟನೆಗಳಿಗೆ ಸೇರಿದ ನಾಲ್ವರು ಉಗ್ರರನ್ನು ಬಂಧಿಸಿವೆ ಎಂದು ಪೊಲೀಸರು ಭಾನುವಾರ ತಿಳಿಸಿದ್ದಾರೆ.
ಕಕ್ಚಿಂಗ್ ಜಿಲ್ಲೆಯ ಚೆಕ್‌ಪಾಯಿಂಟ್‌ನಿಂದ ನಿಷೇಧಿತ ಪೀಪಲ್ಸ್ ಲಿಬರೇಶನ್ ಆರ್ಮಿಯ ಸದಸ್ಯನನ್ನು ಬಂಧಿಸಲಾಗಿದೆ. ಮತ್ತೊಂದೆಡೆ ಬಿಷ್ಣುಪುರ ಜಿಲ್ಲೆಯ ಮೊಯಿರಾಂಗ್ ಕೊಂಜೆಂಗ್‌ಬಾಮ್‌ನಿಂದ ಸಂಘಟನೆಯ ಮತ್ತೋರ್ವ ಸದಸ್ಯನನ್ನು ಬಂಧಿಸಲಾಗಿದೆ ಎಂದು ಅವರು ತಿಳಿಸಿದ್ದಾರೆ.
ಇದಕ್ಕೂ ಮುನ್ನ ತೆಂಗ್ನೌಪಾಲ್ ಜಿಲ್ಲೆಯ ಮೊರೆಹ್ ಗೇಟ್‌ನಿಂದ ನಿಷೇಧಿತ ಪ್ರೆಪಾಕ್ (PRO) ಸಂಘಟನೆಯ ಸದಸ್ಯನನ್ನು ಭದ್ರತಾ ಪಡೆಗಳು ಬಂಧಿಸಿವೆ.
ಇಂಫಾಲ್ ಪಶ್ಚಿಮ ಜಿಲ್ಲೆಯ ಯುಮ್ನಾಮ್ ಹುಯಿಡ್ರೋಮ್‌ನಲ್ಲಿರುವ KCP (PWG) ಸಂಘಟನೆಯ ಮತ್ತೋರ್ವ ಸದಸ್ಯನನ್ನು ಆತನ ನಿವಾಸದಿಂದ ಬಂಧಿಸಲಾಗಿದೆ ಎಂದು ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ನಿಷೇಧಿತ ಸಂಘಟನೆಗಳಿಗೆ ಸೇರಿದ ಉಗ್ರರ ಬಳಿಯಿಂದ ರೈಫಲ್‌ಗಳು ಮತ್ತು ಪಿಸ್ತೂಲ್‌ಗಳು ಸೇರಿದಂತೆ ಅಪಾರ ಶಸ್ತ್ರಾಸ್ತ್ರಗಳು ಮತ್ತು ಮದ್ದುಗುಂಡುಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಅವರು ಹೇಳಿದರು.
ರಾಜ್ಯದಲ್ಲಿ ಸುಲಿಗೆ ಮತ್ತು ಅಪರಾಧ ಚಟುವಟಿಕೆಗಳಲ್ಲಿ ಭಾಗಿಯಾಗಿರುವವರನ್ನು ಬಂಧಿಸಲು ವ್ಯಾಪಕವಾಗಿ ಶೋಧ ಕಾರ್ಯ ನಡೆಸಲಾಗುತ್ತಿದೆ. ಇದರ ಭಾಗವಾಗಿ ನಡೆದ ಗುಪ್ತಚಾರ ಆಧಾರಿತ ಶೋಧ ಕಾರ್ಯಚಾರಣೆ ವೇಳೆಯಲ್ಲಿ ನಾಲ್ವರು ಉಗ್ರರನ್ನು ಬಂಧಿಸಲಾಗಿದೆ ಎಂದು ಅವರು ತಿಳಿಸಿದ್ದಾರೆ.