ಅಲ್ಮೋರಾ: ದೆಹಲಿ ಸ್ಫೋಟಕ್ಕೆ ಸಂಬಂಧಿಸಿದಂತೆ ಹರಿಯಾಣದಲ್ಲಿ ಸುಮಾರು 3,000 ಕೆಜಿ ಸ್ಫೋಟಕಗಳು ಪತ್ತೆಯಾದ ಕೆಲವು ದಿನಗಳ ನಂತರ ಇದೀಗ ಉತ್ತರಾಖಂಡದ ಹಳ್ಳಿಯೊಂದರ ಶಾಲೆಯ ಬಳಿ ಭಾರಿ ಪ್ರಮಾಣದ ಸ್ಫೋಟಕ ಪತ್ತೆಯಾಗಿದೆ.
ಅಲ್ಮೋರಾ ಜಿಲ್ಲೆಯ ದಬಾರಾ ಗ್ರಾಮದ ಸರ್ಕಾರಿ ಪ್ರೌಢಶಾಲೆಯ ಬಳಿ ಪೊದೆಯೊಂದರಲ್ಲಿ 20 ಕೆಜಿಗಿಂತ ಹೆಚ್ಚು ತೂಕದ 161 ಜೆಲಾಟಿನ್ ಕಡ್ಡಿಗಳು ಪತ್ತೆಯಾಗಿವೆ. ಸಮೀಪದ ಪ್ರದೇಶಗಳಲ್ಲಿ ಶೋಧ ನಡೆಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಪೊದೆಗಳಲ್ಲಿ ಅನುಮಾನಾಸ್ಪದ ಪ್ಯಾಕೆಟ್ ಗಮನಿಸಿದ ಪ್ರಾಂಶುಪಾಲ ಸುಭಾಷ್ ಸಿಂಗ್ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ತಕ್ಷಣವೇ ಎರಡು ಪೊಲೀಸ್ ತಂಡಗಳು ಸ್ಥಳಕ್ಕೆ ಧಾವಿಸಿದ್ದು, ಪರಿಶೀಲನೆ ನಡೆಸಿವೆ.
ಉಧಮ್ ಸಿಂಗ್ ನಗರ ಮತ್ತು ನೈನಿತಾಲ್ ಜಿಲ್ಲೆಗಳಿಂದ ಬಾಂಬ್ ನಿಷ್ಕ್ರಿಯ ದಳ, ಶ್ವಾನ ದಳವನ್ನು ಕರೆಸಿ ಸಂಪೂರ್ಣ ಶೋಧ ನಡೆಸಲಾಗಿದೆ. ಈ ವೇಳೆ ಪೊದೆಗಳಲ್ಲಿ ಕೆಲವು ಜಿಲೆಟನ್ ಕಡ್ಡಿಗಳ ಪ್ಯಾಕೆಟ್‌ಗಳು ಕಂಡುಬಂದಿವೆ. ಸುಮಾರು 20 ಅಡಿ ದೂರದಲ್ಲಿ ಇನ್ನೂ ಕೆಲವು ಪ್ಯಾಕೆಟ್‌ಗಳು ಕಂಡುಬಂದಿದ್ದು, ಬಾಂಬ್ ನಿಷ್ಕ್ರಿಯ ದಳ ಅವುಗಳನ್ನು ಸಂಗ್ರಹಿಸಿದೆ.
ದಾಬ್ರಾ ಗ್ರಾಮದ ಶಾಲೆಯ ಬಳಿಯ ಪೊದೆಗಳಿಂದ 161 ಜಿಲಾಟಿನ್ ಕಡ್ಡಿಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಹಿರಿಯ ಪೊಲೀಸ್ ವರಿಷ್ಠಾಧಿಕಾರಿ (ಎಸ್‌ಎಸ್‌ಪಿ) ದೇವೇಂದ್ರ ಪಿಂಚ ಹೇಳಿದ್ದಾರೆ. ಜಿಲಾಟಿನ್ ಕಡ್ಡಿಗಳು ನಿರ್ಮಾಣ ಮತ್ತು ಗಣಿಗಾರಿಕೆ ಉದ್ದೇಶಗಳಿಗಾಗಿ ಬಂಡೆಗಳನ್ನು ಸ್ಫೋಟಿಸಲು ಸಾಮಾನ್ಯವಾಗಿ ಬಳಸುವ ಸ್ಫೋಟಕ ವಸ್ತುಗಳಾಗಿವೆ. ಸ್ಪೋಟಕ ವಸ್ತುಗಳು ಎಲ್ಲಿಂದ ಬಂದಿವೆ ಎಂಬುದರ ಕುರಿತು ತನಿಖೆ ಮಾಡುತ್ತಿರುವುದಾಗಿ ಅವರು ತಿಳಿಸಿದರು.
ಪೊಲೀಸರು ಅಪರಿಚಿತ ಜನರ ವಿರುದ್ಧ ಸ್ಫೋಟಕ ವಸ್ತುಗಳ ಕಾಯ್ದೆ 1908 ರ ಸೆಕ್ಷನ್ 4 (ಎ) ಮತ್ತು ಭಾರತೀಯ ನ್ಯಾಯ ಸಂಹಿತಾ (ಬಿಎನ್‌ಎಸ್) ಸೆಕ್ಷನ್ 288 ರ ಅಡಿಯಲ್ಲಿ ಪ್ರಕರಣ ದಾಖಲಿಸಿದ್ದಾರೆ. ಹೆಚ್ಚಿನ ತನಿಖೆಗಾಗಿ ನಾಲ್ಕು ತಂಡಗಳನ್ನು ರಚಿಸಲಾಗಿದೆ ಎಂದು ಎಸ್‌ಎಸ್‌ಪಿ ಪಿಂಚ ಹೇಳಿದರು.