ನವದೆಹಲಿ: ಕೇಂದ್ರ ಸರ್ಕಾರ ಕೇಂದ್ರಾಡಳಿತ ಪ್ರದೇಶವಾದ ಚಂಡೀಗಢವನ್ನು ಸಂವಿಧಾನದ 240 ನೇ ವಿಧಿಯ ವ್ಯಾಪ್ತಿಗೆ ಸೇರಿಸಲು ಪ್ರಸ್ತಾಪಿಸಿದ್ದು, ರಾಜಧಾನಿಯನ್ನು ಕಸಿದುಕೊಳ್ಳಲು ಪ್ರಯತ್ನಿಸುತ್ತಿದೆ ಎಂದು ಪಂಜಾಬ್ ನ ವಿವಿಧ ಪಕ್ಷಗಳ ನಾಯಕರು ಆರೋಪಿಸಿದ್ದಾರೆ.
ಈ ಕುರಿತು ಕೇಂದ್ರ ಗೃಹ ಸಚಿವಾಲಯ ಸ್ಪಷ್ಟನೆ ನೀಡಿದ್ದು, ಚಂಡೀಗಢ ಕೇಂದ್ರಾಡಳಿತ ಪ್ರದೇಶಕ್ಕೆ ಕಾನೂನು ರಚಿಸುವ ಪ್ರಕ್ರಿಯೆಗೆ ಸಂಬಂಧಿಸಿದ ಪ್ರಸ್ತಾವನೆ ಕುರಿತು ಯಾವುದೇ ಅಂತಿಮ ನಿರ್ಧಾರವನ್ನು ತೆಗೆದುಕೊಳ್ಳಲಾಗಿಲ್ಲ ಎಂದು ಭಾನುವಾರ ಸ್ಪಷ್ಟಪಡಿಸಿದೆ.
ಈ ಪ್ರಸ್ತಾವನೆಯು ಚಂಡೀಗಢದ ಆಡಳಿತ ಚೌಕಟ್ಟನ್ನು ಅಥವಾ ಪಂಜಾಬ್- ಹರಿಯಾಣದೊಂದಿಗಿನ ಅದರ ದೀರ್ಘಕಾಲದ ಒಪ್ಪಂದಗಳನ್ನು ಬದಲಾಯಿಸಲು ಪ್ರಯತ್ನಿಸುವುದಿಲ್ಲ ಎಂದು ಗೃಹ ಸಚಿವಾಲಯ ಹೇಳಿದೆ. ಚಂಡೀಗಢ ಎರಡೂ ರಾಜ್ಯಗಳ ಜಂಟಿ ರಾಜಧಾನಿಯಾಗಿ ಕಾರ್ಯನಿರ್ವಹಿಸುತ್ತದೆ. ಈ ಪ್ರಸ್ತಾವನೆ ಚಂಡೀಗಢ ಕೇಂದ್ರಾಡಳಿತ ಪ್ರದೇಶಕ್ಕಾಗಿ ಕೇಂದ್ರ ಸರ್ಕಾರದ ಕಾನೂನು ರಚನೆ ಪ್ರಕ್ರಿಯೆಯನ್ನು ಸರಳಗೊಳಿಸುವ ಗುರಿಯನ್ನು ಹೊಂದಿದೆ ಎಂದು ಗೃಹ ಸಚಿವಾಲಯ ಅಧಿಕೃತ ಹೇಳಿಕೆಯಲ್ಲಿ ತಿಳಿಸಿದೆ.
ಆಡಳಿತಾತ್ಮಕ ಪುನರ್ ರಚನೆ ಅಥವಾ ಪಂಜಾಬ್- ಹರಿಯಾಣದೊಂದಿಗಿನ ಸಂಬಂಧಗಳನ್ನು ದುರ್ಬಲಗೊಳಿಸಲಾಗುತ್ತದೆ ಎಂಬ ಕಳವಳ ತಪ್ಪಿನಿಂದ ಕೂಡಿದೆ ಎಂದು ಸಚಿವಾಲಯ ಹೇಳಿದೆ. ಪ್ರಸ್ತಾವನೆಯು ಚಂಡೀಗಢದ ಆಡಳಿತ ಅಥವಾ ಆಡಳಿತಾತ್ಮಕ ರಚನೆಯನ್ನು ಯಾವುದೇ ರೀತಿಯಲ್ಲಿ ಬದಲಾಯಿಸಲು ಪ್ರಯತ್ನಿಸುವುದಿಲ್ಲ ಎಂದು ಗೃಹ ಸಚಿವಾಲಯ ಹೇಳಿಕೆಯಲ್ಲಿ ತಿಳಿಸಿದೆ.
ಚಂಡೀಗಢದ ಹಿತಾಸಕ್ತಿಗಳನ್ನು ಗಮನದಲ್ಲಿಟ್ಟುಕೊಂಡು ಎಲ್ಲಾ ಪಾಲುದಾರರೊಂದಿಗೆ ಸಾಕಷ್ಟು ಸಮಾಲೋಚನೆ ನಂತರವೇ ಸೂಕ್ತ ನಿರ್ಧಾರ ತೆಗೆದುಕೊಳ್ಳಲಾಗುತ್ತದೆ. ಈ ವಿಷಯದ ಬಗ್ಗೆ ಯಾವುದೇ ಕಾಳಜಿ ಅಗತ್ಯವಿಲ್ಲ. ಮುಂಬರುವ ಸಂಸತ್ತಿನ ಚಳಿಗಾಲದ ಅಧಿವೇಶನದಲ್ಲಿ ಅಂತಹ ಯಾವುದೇ ಮಸೂದೆಯನ್ನು ಪರಿಚಯಿಸುವ ಉದ್ದೇಶ ಕೇಂದ್ರಕ್ಕೆ ಇಲ್ಲ ಎಂದು ಸಚಿವಾಲಯ ಸ್ಪಷ್ಟಪಡಿಸಿದೆ.
ಲೋಕಸಭೆ ಮತ್ತು ರಾಜ್ಯಸಭೆಯ ಕಾರ್ಯಕಲಾಪ ಪಟ್ಟಿಯಲ್ಲಿ ಚಂಡೀಗಢವನ್ನು ಸಂವಿಧಾನದ 240 ನೇ ವಿಧಿಯ ಅಡಿಯಲ್ಲಿ ತರುವ ಪ್ರಸ್ತಾಪವನ್ನು ಉಲ್ಲೇಖಿಸಿದ ನಂತರ ಪಂಜಾಬ್ ನಾಯಕರು ಕಳವಳ ವ್ಯಕ್ತಪಡಿಸಿದ್ದರು. 240ನೇ ವಿಧಿಯು ರಾಷ್ಟ್ರಪತಿಗಳಿಗೆ ಕೆಲವು ಕೇಂದ್ರಾಡಳಿತ ಪ್ರದೇಶಗಳಿಗೆ ನೇರವಾಗಿ ನಿಯಮಗಳು ಮತ್ತು ಶಾಸನಗಳನ್ನು ರೂಪಿಸಲು ಅಧಿಕಾರ ನೀಡುತ್ತದೆ. ಇದು ಜಾರಿಗೆ ಬಂದರೆ ಚಂಡೀಗಢಕ್ಕೆ ಸ್ವತಂತ್ರ ಆಡಳಿತಾಧಿಕಾರಿಯನ್ನು ನೇಮಿಸಲು ಅವಕಾಶ ನೀಡಬಹುದು.
ಈ ಪ್ರಸ್ತಾಪಕ್ಕೆ ಕಾಂಗ್ರೆಸ್, ಶಿರೋಮಣಿ ಅಕಾಲಿ ದಳ ಮತ್ತು ಆಮ್ ಆದ್ಮಿ ಪಕ್ಷ ಸೇರಿದಂತೆ ವಿವಿಧ ರಾಜಕೀಯ ಪಕ್ಷಗಳಿಂದ ತೀಕ್ಷ್ಣ ಪ್ರತಿಕ್ರಿಯೆ ವ್ಯಕ್ತವಾಗಿತ್ತು. ಪ್ರಸ್ತಾವನೆಯು ಪರಿಶೀಲನೆಯಲ್ಲಿದೆ ಎಂದು ಗೃಹ ಸಚಿವಾಲಯ ಹೇಳಿದ್ದು, ಸರಿಯಾದ ಸಮಾಲೋಚನೆ ಮತ್ತು ಪಾರದರ್ಶಕತೆಯಿಂದ ಮುಂದಿನ ಹೆಜ್ಜೆ ಇಡುವುದಾಗಿ ಕೇಂದ್ರ ಸರ್ಕಾರ ಹೇಳಿದೆ.