ನವದೆಹಲಿ: ಛತ್ತೀಸ್‌ಗಢದ ಸೂರಜ್‌ಪುರದ ಖಾಸಗಿ ಶಾಲೆಯ ಶಿಕ್ಷಕಿಯೊಬ್ಬರು ತಮ್ಮ ಐದು ವರ್ಷದ ವಿದ್ಯಾರ್ಥಿಯನ್ನು ಶಿಸ್ತಿನಲ್ಲಿರಿಸುವುದಕ್ಕಾಗಿ ಮರಕ್ಕೆ ನೇತುಹಾಕಿರುವ ಘಟನೆ ವರದಿಯಾಗಿದೆ.
ಟಿ-ಶರ್ಟ್ ನ್ನು ಹಗ್ಗದಿಂದ ಕಟ್ಟಿ ಮರಕ್ಕೆ ನೇತುಹಾಕುವ ಮೂಲಕ "ಶಿಸ್ತಿನಲ್ಲಿರಿಸಲು" ಪ್ರಯತ್ನಿಸಿದ್ದಾರೆ. ಘಟನೆಯ ಹಿನ್ನೆಲೆಯಲ್ಲಿ ಸಂಸ್ಥೆಯ ಆಡಳಿತ ಮಂಡಳಿಗೆ ಶೋ-ಕಾಸ್ ನೋಟಿಸ್ ಜಾರಿ ಮಾಡಲಾಗಿದೆ ಎಂದು ಅಧಿಕಾರಿಗಳು ಮಂಗಳವಾರ ತಿಳಿಸಿದ್ದಾರೆ.
ಕಳೆದ ವಾರ ರಾಮಾನುಜ್ ನಗರ ಬ್ಲಾಕ್‌ನ ನಾರಾಯಣಪುರ ಗ್ರಾಮದ ಶಾಲೆಯಲ್ಲಿ ನಡೆದ ಘಟನೆಯಲ್ಲಿ ಭಾಗಿಯಾಗಿರುವ ಮಹಿಳಾ ಶಿಕ್ಷಕಿಯನ್ನು ವಜಾಗೊಳಿಸಲಾಗಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ.
ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆದ ಘಟನೆಯ ವೀಡಿಯೊದಲ್ಲಿ, ಕಿಂಡರ್‌ಗಾರ್ಟನ್‌ನ ವಿದ್ಯಾರ್ಥಿನಿಯಾಗಿರುವ ಮಗು ತನ್ನ ಟಿ-ಶರ್ಟ್ ನಿಂದ ಕೊಂಬೆಗೆ ಹಗ್ಗ ಕಟ್ಟಿ ಮರಕ್ಕೆ ನೇತಾಡುತ್ತಿರುವುದನ್ನು ಕಾಣಬಹುದಾಗಿದೆ. ಆದರೆ ಸ್ಥಳದಲ್ಲಿದ್ದ ಇಬ್ಬರು ಮಹಿಳೆಯರು ಕೃತ್ಯವನ್ನು ರೆಕಾರ್ಡ್ ಮಾಡಿದ ವ್ಯಕ್ತಿಯನ್ನು ಖಂಡಿಸುತ್ತಿರುವುದು ಕೇಳಿಬರುತ್ತಿದೆ.
ಸೋಮವಾರ ಸಾಮಾಜಿಕ ಮಾಧ್ಯಮದಲ್ಲಿ ವೀಡಿಯೊ ಕಾಣಿಸಿಕೊಂಡ ನಂತರ, ಶಿಕ್ಷಣ ಇಲಾಖೆಯ ತಂಡವನ್ನು ಶಾಲೆಗೆ ಕಳುಹಿಸಲಾಗಿದೆ ಎಂದು ಸೂರಜ್‌ಪುರ ಜಿಲ್ಲಾ ಶಿಕ್ಷಣ ಅಧಿಕಾರಿ ಅಜಯ್ ಮಿಶ್ರಾ ತಿಳಿಸಿದ್ದಾರೆ.
ಪ್ರಾಥಮಿಕ ವರದಿಯ ಆಧಾರದ ಮೇಲೆ, ಶಾಲಾ ಆಡಳಿತ ಮಂಡಳಿಗೆ ಶೋಕಾಸ್ ನೋಟಿಸ್ ನೀಡಲಾಗಿದ್ದು, ಎರಡು ದಿನಗಳಲ್ಲಿ ಪ್ರತಿಕ್ರಿಯೆ ನೀಡುವಂತೆ ಕೋರಲಾಗಿದೆ ಎಂದು ಅವರು ಹೇಳಿದರು. ಶಾಲೆಯು ತನ್ನ ಪ್ರತಿಕ್ರಿಯೆಯನ್ನು ಸಲ್ಲಿಸಿದ ನಂತರ ನಿಯಮಗಳ ಪ್ರಕಾರ ಮುಂದಿನ ಕ್ರಮ ಕೈಗೊಳ್ಳಲಾಗುವುದು ಎಂದು ಅವರು ಹೇಳಿದರು.