ನವದೆಹಲಿ: 2025ರ ಮಹಿಳಾ ಕಬ್ಬಡ್ಡಿ ಫೈನಲ್ ಪಂದ್ಯದಲ್ಲಿ ಭಾರತ ಚೈನೀಸ್ ತೈಪೆ ವಿರುದ್ಧ ಭರ್ಜರಿ ಗೆಲುವು ಸಾಧಿಸಿದ್ದು, ಈ ಹಿನ್ನೆಲೆಯಲ್ಲಿ ಭಾರತೀಯ ತಂಡಕ್ಕೆ ಪ್ರಧಾನಮಂತ್ರಿ ನರೇಂದ್ರ ಮೋದಿ, ಕೇಂದ್ರ ಸಚಿವ ಅಮಿತ್ ಶಾ ಅವರು ಶ್ಲಾಘನೆ ವ್ಯಕ್ತಪಡಿಸಿದ್ದಾರೆ.
ಸಾಮಾಜಿಕ ಜಾಲತಾಣ ಎಕ್ಸ್ ನಲ್ಲಿ ಪೋಸ್ಟ್ ಮಾಡಿರುವ ಪ್ರಧಾನಮಂತ್ರಿ ನರೇಂದ್ರ ಮೋದಿಯವರು, ಈ ಗೆಲುವು ದೇಶಕ್ಕೆ ಹೆಮ್ಮೆ ತಂದಿದೆ ಎಂದು ಅವರು ಹೇಳಿದ್ದಾರೆ.
ತಂಡವು ಅತ್ಯುತ್ತಮ ಧೈರ್ಯ, ಕೌಶಲ್ಯ ಮತ್ತು ಸಮರ್ಪಣೆಯನ್ನು ಪ್ರದರ್ಶಿಸಿದೆ. ಈ ವಿಜಯವು ಅನೇಕ ಯುವಕರಿಗೆ ಕಬಡ್ಡಿ ಆಡಲು, ದೊಡ್ಡ ಕನಸು ಕಾಣಲು ಮತ್ತು ಉನ್ನತ ಗುರಿಗಳನ್ನು ತಲುಪಲು ಸ್ಫೂರ್ತಿ ನೀಡುತ್ತದೆ ಎಂದು ತಿಳಿಸಿದ್ದಾರೆ.
2025 ರ ಕಬಡ್ಡಿ ವಿಶ್ವಕಪ್ ಗೆಲ್ಲುವ ಮೂಲಕ ದೇಶ ಹೆಮ್ಮೆಪಡುವಂತೆ ಮಾಡಿದ್ದಕ್ಕಾಗಿ ನಮ್ಮ ಭಾರತೀಯ ಮಹಿಳಾ ಕಬಡ್ಡಿ ತಂಡಕ್ಕೆ ಅಭಿನಂದನೆಗಳು! ಅವರು ಅತ್ಯುತ್ತಮ ಧೈರ್ಯ, ಕೌಶಲ್ಯ ಮತ್ತು ಸಮರ್ಪಣೆಯನ್ನು ಪ್ರದರ್ಶಿಸಿದ್ದಾರೆ. ಅವರ ಗೆಲುವು ಅಸಂಖ್ಯಾತ ಯುವಕರಿಗೆ ಕಬಡ್ಡಿಯನ್ನು ಮುಂದುವರಿಸಲು, ದೊಡ್ಡ ಕನಸು ಕಾಣಲು ಮತ್ತು ಉನ್ನತ ಗುರಿಯನ್ನು ಸಾಧಿಸಲು ಸ್ಫೂರ್ತಿ ನೀಡುತ್ತದೆ ಎಂದಿದ್ದಾರೆ.
ಕೇಂದ್ರ ಸಚಿವ ಅಮಿತ್ ಶಾ ಅವರು ಕೂಡ ಪೋಸ್ಟ್ ಮಾಡಿದ್ದು, ನಮ್ಮ ಮಹಿಳಾ ಕಬಡ್ಡಿ ತಂಡವು ಇತಿಹಾಸ ಬರೆದಿದ್ದು, ಇದು ಹೆಮ್ಮೆಯ ಕ್ಷಣವಾಗಿದೆ ಎಂದು ತಿಳಿಸಿದ್ದಾರೆ.
ಕಬಡ್ಡಿ ವಿಶ್ವಕಪ್ 2025 ಅನ್ನು ಎತ್ತಿ ಹಿಡಿದಿದ್ದಕ್ಕಾಗಿ ಇಡೀ ತಂಡಕ್ಕೆ ಅಭಿನಂದನೆಗಳು. ನಿಮ್ಮ ಅದ್ಭುತ ಗೆಲುವು ಭಾರತದ ಕ್ರೀಡಾ ಪ್ರತಿಭೆ ಏಕೆ ಅತ್ಯುತ್ತಮವಾದುದು ಎಂಬುದನ್ನು ಪುನರುಚ್ಚರಿಸುತ್ತದೆ. ನಿಮ್ಮ ಭವಿಷ್ಯದ ಪ್ರಯತ್ನಗಳಿಗೆ ನನ್ನ ಶುಭಾಶಯಗಳು ಎಂದು ಹೇಳಿದ್ದಾರೆ.