ಭೂಪಾಲ್: ಮೂಲಭೂತ ಸೌಕರ್ಯ ಕಲ್ಪಿಸುವಂತೆ ಒತ್ತಾಯಿಸಿ ವಿದ್ಯಾರ್ಥಿಗಳು ನಡೆಸುತ್ತಿದ್ದ ಪ್ರತಿಭಟನೆ ಹಿಂಸಾತ್ಮಕ ರೂಪ ಪಡೆದಿದ್ದು, ಭೂಪಾಲ್ ವಿಐಟಿ ಕ್ಯಾಂಪಸ್ ಧ್ವಂಸಗೊಳಿಸಿ ಹಲವು ವಾಹನಗಳಿಗೆ ಬೆಂಕಿ ಹಚ್ಚಲಾಗಿದೆ.
ಮಧ್ಯಪ್ರದೇಶದ ಸೆಹೋರ್ ಜಿಲ್ಲೆಯ ವಿಐಟಿ ಭೋಪಾಲ್ ವಿಶ್ವವಿದ್ಯಾಲಯದಲ್ಲಿ ಮಂಗಳವಾರ ಮತ್ತು ಬುಧವಾರ ಮಧ್ಯರಾತ್ರಿಯಿಂದ ವಿದ್ಯಾರ್ಥಿಗಳು ಹೋರಾಟ ನಡೆಸುತ್ತಿದ್ದಾರೆ. ಹಿಂಸಾಚಾರ ಭುಗಿಲೆದ್ದಿದೆ ಈ ಹಿನ್ನೆಲೆಯಲ್ಲಿ ನವೆಂಬರ್ 30 ರವರೆಗೆ ವಿಶ್ವವಿದ್ಯಾಲಯವು ರಜೆ ಘೋಷಿಸಬೇಕಾಯಿತು ಎಂದು ಅಧಿಕೃತ ಮೂಲವೊಂದು ತಿಳಿಸಿದೆ.
ಶುದ್ದವಿಲ್ಲದ ಕುಡಿಯುವ ನೀರು, ಗುಣಮಟ್ಟವಿಲ್ಲದ ಆಹಾರ ಮತ್ತು ಕೊಳಕು ಶೌಚಾಲಯಗಳಿಂದ ಬೇಸತ್ತ ಸುಮಾರು 4,000 ವಿದ್ಯಾರ್ಥಿಗಳು ಮಂಗಳವಾರ ತಡರಾತ್ರಿ ಅಷ್ಟಾ-ಪ್ರದೇಶದ ಕ್ಯಾಂಪಸ್‌ನಲ್ಲಿ ಪ್ರತಿಭಟನೆ ನಡೆಸಿದರು.
ಪರಿಸ್ಥಿತಿಯನ್ನು ನಿಯಂತ್ರಿಸಲು ವಿಶ್ವವಿದ್ಯಾಲಯದ ಭದ್ರತಾ ಸಿಬ್ಬಂದಿಯ ಆರಂಭಿಕ ಪ್ರಯತ್ನಗಳು ವಿಫಲವಾದವು, ಮತ್ತು ಬಾಲಕರ ಹಾಸ್ಟೆಲ್‌ನ ಹೊರಗೆ ಭದ್ರತಾ ಸಿಬ್ಬಂದಿ ಕೆಲವು ಪ್ರಥಮ ವರ್ಷದ ವಿದ್ಯಾರ್ಥಿಗಳ ಮೇಲೆ ಹಲ್ಲೆ ನಡೆಸುತ್ತಿರುವುದನ್ನು ತೋರಿಸುವ ವೀಡಿಯೊಗಳು ಅಶಾಂತಿಯನ್ನು ಹೆಚ್ಚಿಸಿವೆ.
ಕುಡಿಯಲು ಯೋಗ್ಯವಲ್ಲದ ನೀರಿನಿಂದಾಗಿ ಕಾಮಾಲೆ ಪ್ರಕರಣಗಳು ಹೆಚ್ಚಾಗಿದೆ ಎಂದು ವಿದ್ಯಾರ್ಥಿಗಳು ಆರೋಪಿಸಿದರು, ಕೆಲವರು ಸಾವುನೋವುಗಳಾಗಿರುವ ಬಗ್ಗೆ ಸಹ ವಿದ್ಯಾರ್ಥಿಗಳು ತಿಳಿಸಿದ್ದಾರೆ. ಆದರೆ ವಿಶ್ವವಿದ್ಯಾಲಯದ ಅಧಿಕಾರಿಗಳು ಯಾವುದೇ ಸಾವುನೋವುಗಳನ್ನು ನಿರಾಕರಿಸಿದ್ದಾರೆ.
ಪ್ರತಿಭಟನೆ ಹೆಚ್ಚಾಗಿ ವಿದ್ಯಾರ್ಥಿಗಳು ಮೋಟಾರ್‌ಸೈಕಲ್‌ಗಳು, ಕಾರುಗಳು ಮತ್ತು ವಿಶ್ವವಿದ್ಯಾಲಯದ ಬಸ್ ಸೇರಿದಂತೆ ಆರರಿಂದ ಏಳು ವಾಹನಗಳಿಗೆ ಬೆಂಕಿ ಹಚ್ಚಿದರು. ಕುಲಪತಿ ನಿವಾಸದಲ್ಲಿ ಧ್ವಂಸ ಕೃತ್ಯಗಳು ನಡೆದಿವೆ ಎಂದು ವರದಿಗಳು ತಿಳಿಸಿವೆ.
ಶಾಂತಿಯನ್ನು ಪುನಃಸ್ಥಾಪಿಸಲು ಐದು ಸೆಹೋರ್ ಜಿಲ್ಲಾ ಠಾಣೆಗಳಿಂದ ಪೊಲೀಸರನ್ನು ಕ್ಯಾಂಪಸ್‌ಗೆ ನಿಯೋಜಿಸಲಾಗಿತ್ತು. "ದೀಪಾವಳಿಯ ನಂತರ ಶಂಕಿತ ಕಾಮಾಲೆ ಪ್ರಕರಣಗಳ ಬಗ್ಗೆ ವಿದ್ಯಾರ್ಥಿಗಳಲ್ಲಿ ಕಳವಳ ಹೆಚ್ಚುತ್ತಿದೆ. ಆದರೆ ಕ್ಯಾಂಪಸ್‌ನಲ್ಲಿ ಯಾವುದೇ ಸಾವುಗಳು ಸಂಭವಿಸಿಲ್ಲ" ಎಂದು ಹೆಸರು ಬಹಿರಂಗಪಡಿಸಲು ಬಯಸದ ವಿಶ್ವವಿದ್ಯಾಲಯದ ಅಧಿಕಾರಿಯೊಬ್ಬರು TNIE ಗೆ ತಿಳಿಸಿದ್ದಾರೆ.
ಕ್ಯಾಂಪಸ್ ಮತ್ತು ಸುತ್ತಮುತ್ತ ಭಾರೀ ಪಡೆಯನ್ನು ನಿಯೋಜಿಸಲಾಗಿದೆ ಎಂದು ಹಿರಿಯ ಪೊಲೀಸ್ ಅಧಿಕಾರಿಗಳು ದೃಢಪಡಿಸಿದರು, ಸುರಕ್ಷತೆ ಮತ್ತು ಪರಿಸ್ಥಿತಿಯನ್ನು ಮೇಲ್ವಿಚಾರಣೆ ಮಾಡುತ್ತಿದ್ದಾರೆ.