ನವದೆಹಲಿ: ನೈಋತ್ಯ ದೆಹಲಿಯಲ್ಲಿ 44 ವರ್ಷದ ಮಹಿಳೆಯೊಬ್ಬಳನ್ನು ಆಕೆಯ ಲಿವ್-ಇನ್ ಪಾರ್ಟನರ್ ಕೊಲೆ ಮಾಡಿದ್ದಾನೆ ಎಂದು ಆರೋಪಿಸಲಾಗಿದೆ.
ಕುಡಿದ ಮತ್ತಿನಲ್ಲಿ ಮಹಿಳೆಯ ಕತ್ತು ಹಿಸುಕಿ ಕೊಂದಿದ್ದು, ಶವವನ್ನು ಬೇರೆ ಕಡೆಗೆ ಸಾಗಿಸಲು ಕಾರಿಗೆ ಕೊಂಡೊಯ್ದಿದ್ದಾನೆ. ಆದರೆ ಕಾರನ್ನು ಓಡಿಸಲು ಸಾಧ್ಯವಾಗದ ಕಾರಣ ಅಲ್ಲಿಯೇ ಮಲಗಿ, ಬಳಿಕ ಕಾರು ಅಲ್ಲೇ ಬಿಟ್ಟು ಮನೆಗೆ ಹೋಗಿದ್ದಾನೆ ಎಂದು ಪೊಲೀಸರು ಗುರುವಾರ ತಿಳಿಸಿದ್ದಾರೆ.
ವೀರೇಂದ್ರ (35) ಎಂದು ಗುರುತಿಸಲಾದ ಆರೋಪಿಯು ತುಂಬಾ ಕುಡಿದಿದ್ದನೆಂದು ಹೇಳಲಾಗುತ್ತಿದೆ. ಆದರೆ ಮಹಿಳೆಯ ಶವ ವಿಲೇವಾರಿ ಮಾಡುವ ಉದ್ದೇಶದಿಂದ ತನ್ನ ಕಾರಿಗೆ ಕೊಂಡೊಯ್ಯುವಲ್ಲಿ ಯಶಸ್ವಿಯಾದರೂ, ಕಾರು ಚಲಾಯಿಸಲು ಸಾಧ್ಯವಾಗದೆ ಮನೆಗೆ ಮರಳಿದ್ದಾನೆ ಎಂದು ಅವರು ಹೇಳಿದ್ದಾರೆ.
ನವೆಂಬರ್ 26 ರ ಬೆಳಗ್ಗೆ ನೆರೆಹೊರೆಯವರಿಂದ ಈ ಕೊಲೆ ಬಗ್ಗೆ ಪಿಸಿಆರ್ ಕರೆ ಬಂದಿದ್ದು, ಆರೋಪಿ ಮನೆಯಲ್ಲಿದ್ದಾಗ ಕಾರಿನೊಳಗೆ ಮಹಿಳೆಯ ಶವ ಬಿದ್ದಿರುವುದನ್ನು ಅವರು ಗಮನಿಸಿದ್ದಾರೆ ಎಂದು ತನಿಖೆಯ ಬಗ್ಗೆ ಮಾಹಿತಿ ಹೊಂದಿರುವ ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ಪಿಟಿಐಗೆ ತಿಳಿಸಿದ್ದಾರೆ.
"ವಿವಾಹಿತ ಮತ್ತು ಮಕ್ಕಳಿರುವ ವೀರೇಂದ್ರ, ಕಳೆದ ಎರಡು ವರ್ಷಗಳಿಂದ ಮೃತ ಮಹಿಳೆಯೊಂದಿಗೆ ವಾಸಿಸುತ್ತಿದ್ದರು. ಆ ಮಹಿಳೆಗೆ ಮೊದಲು ಪಾಲಂನಲ್ಲಿ ಒಂದು ಮನೆ ಇತ್ತು. ಅದನ್ನು ಅವರು ಮಾರಾಟ ಮಾಡಿದ್ದರು ಮತ್ತು ಆ ಹಣ ಬಳಸಿಕೊಂಡು ವೀರೇಂದ್ರ ಕಳೆದ ಆಗಸ್ಟ್‌ನಲ್ಲಿ ಚಾವ್ಲಾದಲ್ಲಿ ತನ್ನ ಹೆಸರಿನಲ್ಲಿ ಮೂರು ಅಂತಸ್ತಿನ ಮನೆ ಖರೀದಿಸಿದ್ದರು" ಎಂದು ಅಧಿಕಾರಿ ಹೇಳಿದ್ದಾರೆ.
ಮಹಿಳೆ ಮನೆ ಮಾರಾಟದಿಂದ ಬಂದ ಹೆಚ್ಚುವರಿ 21 ಲಕ್ಷ ರೂ. ವೀರೇಂದ್ರ ಅವರ ಬಳಿಯೇ ಉಳಿದಿತ್ತು, ಇದು ಆಗಾಗ್ಗೆ ಇಬ್ಬರ ನಡುವೆ ಜಗಳಕ್ಕೆ ಕಾರಣವಾಗಿದೆ. ನವೆಂಬರ್ 25 ಮತ್ತು 26 ರ ಮಧ್ಯರಾತ್ರಿ, ಇಬ್ಬರೂ ಮದ್ಯಪಾನ ಮಾಡಿ ಮತ್ತೆ ಜಗಳ ಮಾಡಿದ್ದಾರೆ. ಜಗಳ ನಡೆಯುತ್ತಿದ್ದಾಗ, ಬಸ್ ಕಂಪನಿಯಲ್ಲಿ ಕೆಲಸ ಮಾಡುವ ವೀರೇಂದ್ರ, ಮಹಿಳೆಯ ಕುತ್ತಿಗೆ ಹಿಸುಕಿದ್ದಾನೆ ಎಂದು ಆರೋಪಿಸಲಾಗಿದೆ.
ಆಕೆಯನ್ನು ಕೊಂದ ನಂತರ, ಆರೋಪಿಯು ತನ್ನ ಇಬ್ಬರು ಸ್ನೇಹಿತರು, ಒಬ್ಬ ಪುರುಷ ಮತ್ತು ಒಬ್ಬ ಮಹಿಳೆಯನ್ನು ಸಹಾಯದಿಂದ ಶವವನ್ನು ಕಾರಿಗೆ ಸಾಗಿಸಿದ್ದಾರೆ ಎಂದು ಹೇಳಲಾಗಿದೆ.
ಪೊಲೀಸ್ ತಂಡ ಸ್ಥಳಕ್ಕೆ ತಲುಪಿ ಇನ್ನೂ ನಿದ್ದೆಯಲ್ಲಿದ್ದ ವೀರೇಂದ್ರನನ್ನು ಬಂಧಿಸಿದೆ. ಆತನ ಸಹಚರರನ್ನು ಪತ್ತೆಹಚ್ಚಲು ಮತ್ತು ಬಂಧಿಸುವ ಪ್ರಯತ್ನಗಳು ನಡೆಯುತ್ತಿವೆ ಎಂದು ಅಧಿಕಾರಿ ತಿಳಿಸಿದ್ದಾರೆ.