ನವದೆಹಲಿ: ಮೋದಿಜೀ, ದೇಶದ ಮಕ್ಕಳು ನಮ್ಮ ಮುಂದೆ ಉಸಿರು ಕಟ್ಟುತ್ತಿದ್ದಾರೆ. ನೀವು ಹೇಗೆ ಮೌನವಾಗಿರಲು ಸಾಧ್ಯ? ಎಂದು ಲೋಕಸಭೆ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಪ್ರಶ್ನಿಸಿದ್ದಾರೆ.
ಹೌದು. ರಾಷ್ಟ್ರ ರಾಜಧಾನಿಯಲ್ಲಿನ ವಾಯು ಮಾಲಿನ್ಯದ ವಿಷಯದ ಬಗ್ಗೆ ಸಂಸತ್ತಿನಲ್ಲಿ ವಿವರವಾದ ಚರ್ಚೆಗೆ ಒತ್ತಾಯಿಸಿದ್ದು, ಈ "ಆರೋಗ್ಯ ತುರ್ತುಸ್ಥಿತಿ" ಕುರಿತು ಪ್ರಧಾನಿ ನರೇಂದ್ರ ಮೋದಿ ಅವರ ಮೌನದ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.
ವಾಯುಮಾಲಿನ್ಯ ಸಮಸ್ಯೆ ನಿವಾರಣೆಗೆ ಸೂಕ್ತ ಕ್ರಮಕ್ಕೆ ಒತ್ತಾಯಿಸಿದ್ದು, ಮೋದಿ ಸರ್ಕಾರ ಈ ವಿಷಯದ ಬಗ್ಗೆ ನಿರ್ಲಕ್ಷ್ಯ ವಹಿಸಿದೆ ಎಂದು ಆರೋಪಿಸಿದ್ದಾರೆ. ತಮ್ಮ ನಿವಾಸದಲ್ಲಿ ಕೆಲವು ತಾಯಂದಿರನ್ನು ಭೇಟಿಯಾಗಿರುವ ರಾಹುಲ್ ಗಾಂಧಿ, ಅವರೊಂದಿಗೆ ಸಂಭಾಷಣೆಯ ವಿಡಿಯೋವೊಂದನ್ನು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡಿದ್ದಾರೆ.
ನಾನು ಭೇಟಿಯಾದ ಪ್ರತಿಯೊಬ್ಬ ತಾಯಿಯೂ ನನಗೆ ಇದೇ ಮಾತನ್ನು ಹೇಳುತ್ತಿದ್ದಾರೆ. ಆಕೆಯ ಮಗು ವಿಷಕಾರಿ ಗಾಳಿಯನ್ನು ಸೇವಿಸುತ್ತಾ ಬೆಳೆಯುತ್ತಿದ್ದು, ಅವರು ಹೆದರುತ್ತಿದ್ದಾರೆ ಮತ್ತು ಕೋಪಗೊಂಡಿದ್ದಾರೆ. ಮೋದಿ ಜೀ, ಭಾರತದ ಮಕ್ಕಳು ನಮ್ಮ ಮುಂದೆ ಉಸಿರು ಕಟ್ಟುತ್ತಿದ್ದಾರೆ. ನೀವು ಹೇಗೆ ಮೌನವಾಗಿರಲು ಸಾಧ್ಯ? ನಿಮ್ಮ ಸರ್ಕಾರ ಯಾಕೆ ಯಾವುದೇ ತುರ್ತು, ಯೋಜನೆ, ಹೊಣೆಗಾರಿಕೆಯನ್ನು ತೋರಿಸುತ್ತಿಲ್ಲ? ಎಂದು ಪ್ರಶ್ನಿಸಿದ್ದಾರೆ.
ವಾಯು ಮಾಲಿನ್ಯದ ಕುರಿತು ಸಂಸತ್ತಿನಲ್ಲಿ ವಿವರವಾದ ಚರ್ಚೆ ನಡೆಯಬೇಕಾಗಿದೆ.ಈ ಆರೋಗ್ಯ ತುರ್ತು ಪರಿಸ್ಥಿತಿಯನ್ನು ನಿಭಾಯಿಸಲು ಕಠಿಣ ಯೋಜನೆ ಅಗತ್ಯವಿದೆ. ನಮ್ಮ ಮಕ್ಕಳು ಶುದ್ಧ ಗಾಳಿಗೆ ಅರ್ಹರು. ನೆಪಗಳು ಮತ್ತು ಗೊಂದಲಗಳಲ್ಲ" ಎಂದು ಅವರು ಪ್ರತಿಪಾದಿಸಿದ್ದಾರೆ.
ಕಳೆದ 15 ದಿನಗಳಿಂದ ದೆಹಲಿಯಲ್ಲಿ ವಾಯುಗುಣಮಟ್ಟ ತೀವ್ರಗತಿಯಲ್ಲಿ ಹದಗೆಟ್ಟಿದೆ. ಮುಂಬರುವ ವಾರದಲ್ಲಿ ಗಾಳಿಯ ಗುಣಮಟ್ಟ ಮತ್ತಷ್ಟು ಹದಗೆಡುವ ಸಾಧ್ಯತೆಯಿದೆ. ಇದರಿಂದಾಗಿ ವಿಶೇಷವಾಗಿ ಧೂಮಪಾನಿಗಳು, ಆಸ್ತಮಾ ರೋಗಿಗಳು, ಮಕ್ಕಳು ಮತ್ತು ಹೃದಯ ಅಥವಾ ಉಸಿರಾಟದ ಕಾಯಿಲೆಗಳಿರುವ ಜನರು ಅನಾರೋಗ್ಯಕ್ಕೀಡಾಗುವ ಸಾಧ್ಯತೆಯಿದೆ ಎಂದು ತಜ್ಞರು ಎಚ್ಚರಿಕೆ ನೀಡಿದ್ದಾರೆ.