ಚೆನ್ನೈ: ಕರೂರು ಕಾಲ್ತುಳಿತ ಪ್ರಕರಣದ ನಂತರ ತಮಿಳುನಾಡಿನಾದ್ಯಂತ ಯೋಜಿಸಿದ್ದ ಸಾರ್ವಜನಿಕ ಸಭೆಗಳನ್ನು ತಾತ್ಕಾಲಿಕವಾಗಿ ಮುಂದೂಡಲಾಗಿದೆ ಎಂದು ವಿಜಯ್ ನೇತೃತ್ವದ ತಮಿಳಗ ವೆಟ್ರಿ ಕಳಗಂ ಪಕ್ಷ (TVK) ಬುಧವಾರ ಘೋಷಿಸಿದೆ.
ತಮಿಳುನಾಡು ವಿಧಾನಸಭಾ ಚುನಾವಣೆ ಹಿನ್ನೆಲೆಯಲ್ಲಿ ಸೆಪ್ಟೆಂಬರ್ 13 ರಂದು ವಿಜಯ್ ಅವರು ರಾಜ್ಯಾದ್ಯಂತ ಪ್ರವಾಸ ಕಾರ್ಯಕ್ರಮವನ್ನು ಆರಂಭಿಸಿದ್ದರು. ಜನರನ್ನು ಭೇಟಿ ಮಾಡಲು ಹಲವು ಕಡೆಗಳಲ್ಲಿ ರ‍್ಯಾಲಿ ನಡೆಸಲು ಉದ್ದೇಶಿಸಿದ್ದರು. ಇಲ್ಲಿಯವರೆಗೂತಿರುಚಿರಾಪಳ್ಳಿ, ನಾಮಕ್ಕಲ್ ಮತ್ತು ಕರೂರಿಗೆ ಭೇಟಿ ನೀಡಿದ್ದಾರೆ.
ಸೆಪ್ಟೆಂಬರ್ 27 ರಂದು ಕರೂರಿನಲ್ಲಿ ಟಿವಿಕೆ ರ‍್ಯಾಲಿ ವೇಳೆ ಉಂಟಾದ ಕಾಲ್ತುಳಿತದಲ್ಲಿ41 ಮಂದಿ ಮೃತಪಟ್ಟಿದ್ದು, ಹಲವು ಮಂದಿ ಗಾಯಗೊಂಡು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಮೃತರ ಕುಟುಂಬಗಳಿಗೆ ಟಿವಿಕೆ ಪಕ್ಷ ತಲಾ ರೂ.20 ಲಕ್ಷ ಪರಿಹಾರ ಘೋಷಿಸಿತ್ತು. ಈ ಕಾಲ್ತುಳಿತ ಘಟನೆ ಹಿನ್ನೆಲೆಯಲ್ಲಿ ಮುಂದಿನ ಎರಡು ವಾರ ಯೋಜಿಸಲಾಗಿದ್ದ ಸಾರ್ವಜನಿಕ ಸಭೆಗಳನ್ನು ತಾತ್ಕಾಲಿಕವಾಗಿ ಮುಂದೂಡಲಾಗಿದೆ.
ನಮ್ಮ 41 ಸಹೋದರನ್ನು ಕಳೆದುಕೊಂಡಿದ್ದಕ್ಕೆ ನಾವು ದು:ಖ ಮತ್ತು ವಿಷಾದದಲ್ಲಿದ್ದೇವೆ. ಈ ಪರಿಸ್ಥಿತಿಯಲ್ಲಿ ನಮ್ಮ ನಾಯಕ ವಿಜಯ್ ಅವರ ಮುಂದಿನ ಎರಡು ವಾರಗಳ ಜನರ ಭೇಟಿ ಕಾರ್ಯಕ್ರಮಗಳನ್ನು ತಾತ್ಕಾಲಿಕವಾಗಿ ಮುಂದೂಡಲಾಗುತ್ತಿದೆ. ಇವುಗಳ ಪರಿಷ್ಕೃತ ವಿವರಗಳನ್ನು ನಂತರ ಪ್ರಕಟಿಸಲಾಗುವುದು ಎಂದು ಟಿವಿಕೆ ತಿಳಿಸಿದೆ.