ಖಾಂಡ್ವಾ: ವಿಜಯದಶಮಿ ದಿನವಾದ ಗುರುವಾರ ಮಧ್ಯ ಪ್ರದೇಶದಲ್ಲಿ ದುರ್ಗಾದೇವಿ ಮೂರ್ತಿಗಳ ವಿಸರ್ಜನೆಗೆ ವೇಳೆ ಭಾರಿ ದುರಂತ ಸಂಭವಿಸಿದೆ.
ಖಾಂಡ್ವಾ ಮತ್ತು ಶಹದೋಲ್ ಜಿಲ್ಲೆಗಳಲ್ಲಿ ಸಂಭವಿಸಿದ ಪ್ರತ್ಯೇಕ ಘಟನೆಗಳಲ್ಲಿ ಮಹಿಳೆಯರು, ಮಕ್ಕಳು ಸೇರಿದಂತೆ ಕನಿಷ್ಠ 14 ಜನರು ಸಾವನ್ನಪ್ಪಿದ್ದಾರೆ. ಖಾಂಡ್ವಾದ ಪಂಧನಾ ಪ್ರದೇಶದಲ್ಲಿ ದುರ್ಗಾ ಮೂರ್ತಿ ಸಾಗಿಸುತ್ತಿದ್ದ ಟ್ರ್ಯಾಕ್ಟರ್-ಟ್ರಾಲಿಯು ಕೆರೆಗೆ ಉರುಳಿದ ಪರಿಣಾಮ 11 ಜನರು ಜಲಸಮಾಧಿಯಾಗಿದ್ದಾರೆ.
ಮತ್ತೊಂದು ಘಟನೆಯಲ್ಲಿ ಖಾಂಡ್ವಾದಲ್ಲಿರುವ ಅಂಜನಗಾಂವ್ ಗ್ರಾಮದಲ್ಲಿ ದುರ್ಗಾದೇವಿ ನಿಮಜ್ಜನ ಮೆರವಣಿಗೆಯ ಮೇಲೆ ನಿಯಂತ್ರಣ ತಪ್ಪಿದ ಡಿಜೆ ವಾಹನವು ಹರಿದು ಓರ್ವ ವ್ಯಕ್ತಿ ಸಾವನ್ನಪ್ಪಿದ್ದು, ಇತರ ನಾಲ್ವರು ಗಾಯಗೊಂಡಿದ್ದಾರೆ.
ಶಹದೋಲ್ ಜಿಲ್ಲೆಯಿಂದ ಸುಮಾರು 800 ಕಿ.ಮೀ ದೂರದ ಗೋಹಪಾರುವಿನ ಸೋನ್ ನದಿಯಲ್ಲಿ ದುರ್ಗಾದೇವಿ ವಿಗ್ರಹ ವಿಸರ್ಜನೆ ವೇಳೆಯಲ್ಲಿ 16 ವರ್ಷದ ಬಾಲಕ ಮತ್ತು 22 ವರ್ಷದ ಯುವಕ ನೀರಿನಲ್ಲಿ ಕೊಚ್ಚಿಕೊಂಡು ಹೋಗಿದ್ದಾರೆ.
ಖಾಂಡ್ವಾ ಜಿಲ್ಲೆಯ ಪಂಧನಾ ಪ್ರದೇಶದಲ್ಲಿ ವಿಸರ್ಜನೆಗಾಗಿ ದುರ್ಗಾದೇವಿ ಮೂರ್ತಿ ಸಾಗಿಸುತ್ತಿದ್ದ ಟ್ರ್ಯಾಕ್ಟರ್-ಟ್ರಾಲಿಯು ಕೆರೆಗೆ ಉರುಳಿದ ಪರಿಣಾಮ ಕನಿಷ್ಠ 11 ಭಕ್ತರು ಸಾವನ್ನಪ್ಪಿದ್ದಾರೆ ಎಂದು ಪೊಲೀಸ್ ಇಂದೋರ್ ಗ್ರಾಮಾಂತರ ವ್ಯಾಪ್ತಿಯ ಮಹಾನಿರೀಕ್ಷಕ ಅನುರಾಗ್ ತಿಳಿಸಿದ್ದಾರೆ. ನಿಮಜ್ಜನಕ್ಕಾಗಿ ವಿವಿಧ ಗ್ರಾಮಗಳಲ್ಲಿ ಪ್ರತಿಷ್ಠಾಪಿಸಲಾದ ದುರ್ಗಾದೇವಿ ಮೂರ್ತಿ ಸಾಗಿಸುತ್ತಿದ್ದ ಟ್ರ್ಯಾಕ್ಟರ್‌ನಲ್ಲಿ ಭಕ್ತರು ತೆರಳುತ್ತಿದ್ದರು ಎಂದು ಅವರು ಸುದ್ದಿಸಂಸ್ಥೆ ಪಿಟಿಐಗೆ ತಿಳಿಸಿದರು.
ಇದುವರೆಗೆ 11 ಮೃತದೇಹಗಳನ್ನು ರಾಜ್ಯ ವಿಪತ್ತು ನಿರ್ವಹಣಾ ಪಡೆ ಮತ್ತು ಸ್ಥಳೀಯ ಮುಳುಗು ತಜ್ಞರ ಸಹಾಯದಿಂದ ಹೊರತೆಗೆಯಲಾಗಿದೆ ಎಂದು ಅವರು ಹೇಳಿದರು. ಹೆಚ್ಚುವರಿಯಾಗಿ ಎಸ್‌ಡಿಆರ್‌ಎಫ್ ತಂಡವನ್ನು ಸ್ಥಳಕ್ಕೆ ಕಳುಹಿಸಲಾಗಿದೆ. ಐದರಿಂದ ಆರು ಭಕ್ತರು ಬದುಕುಳಿದಿದ್ದಾರೆ ಎಂಬುದು ತಿಳಿದುಬಂದಿದೆ. ಅಪಘಾತದ ಬಗ್ಗೆ ತನಿಖೆಯನ್ನು ಪ್ರಾರಂಭಿಸಲಾಗಿದೆ ಎಂದು ಅವರು ತಿಳಿಸಿದರು.