ನವದೆಹಲಿ: ಭಾರತದ ಸ್ವಾತಂತ್ರ್ಯ ಚಳವಳಿಯಲ್ಲಿ ರಾಷ್ಟ್ರೀಯ ಸ್ವಯಂಸೇವಕ ಸಂಘ (RSS)ಪಾತ್ರವಿದೆ ಎಂಬ ಪ್ರಧಾನಿ ನರೇಂದ್ರ ಮೋದಿಯವರ ಹೇಳಿಕೆಯನ್ನು AIMIM ಮುಖ್ಯಸ್ಥ ಅಸಾದುದ್ದೀನ್ ಓವೈಸಿ ಗುರುವಾರ ತಿರುಗೇಟು ನೀಡಿದ್ದಾರೆ. ಸಂಘದ ಯಾವುದೇ ಸದಸ್ಯರು ದೇಶದ ಸ್ವಾತಂತ್ರ್ಯಕ್ಕಾಗಿ ತಮ್ಮ ಪ್ರಾಣವನ್ನು ಅರ್ಪಿಸಿಲ್ಲ ಎಂದು ಅವರು ಹೇಳಿದ್ದಾರೆ.
ಹೈದರಾಬಾದ್‌ನ ಶೇಕ್‌ಪೇಟ್‌ನಲ್ಲಿ ನಡೆದ ಅಭಿವೃದ್ಧಿ ಕಾಮಗಾರಿಗಳ ಉದ್ಘಾಟನಾ ಸಮಾರಂಭದಲ್ಲಿ ಮಾತನಾಡಿದ ಓವೈಸಿ, “ಸ್ವಾತಂತ್ರ್ಯ ಹೋರಾಟದಲ್ಲಿ ಆರ್‌ಎಸ್‌ಎಸ್ ಭಾಗವಹಿಸಿದೆ ಎಂದು ಪ್ರಧಾನಿ ಹೇಳಿಕೊಂಡಿದ್ದಾರೆ. ಈ ಕಥೆ ಎಲ್ಲಿಂದ ಬಂತು ಎಂದು ನನಗೆ ಆಶ್ಚರ್ಯ ಮತ್ತು ಕಳವಳವಾಯಿತು. ಒಬ್ಬ ಆರ್‌ಎಸ್‌ಎಸ್ ಸದಸ್ಯನೂ ದೇಶಕ್ಕಾಗಿ ಹೋರಾಡಿ ಪ್ರಾಣ ಕಳೆದುಕೊಂಡಿಲ್ಲ ಎಂದು ಇತಿಹಾಸ ತೋರಿಸುತ್ತದೆ. ಯಾರಾದರೂ ಅಂತಹವರ ಹೆಸರು ಹೇಳಿದರೆ ನಾನು ಅದನ್ನು ಕೇಳಲು ಸಿದ್ಧನಿದ್ದೇನೆ” ಎಂದರು.
ಆರ್ ಎಸ್ಎಸ್ ಸಂಸ್ಥಾಪಕ ಕೆಬಿ ಹೆಡ್ಗೆವಾರ್ ಅವರು ಸಂಘ ಸ್ಥಾಪನೆಗೂ ಮುನ್ನ ಸ್ವಾತಂತ್ರ್ಯ ಹೋರಾಟದ ಭಾಗವಾಗಿದ್ದರು ಎಂಬುದನ್ನು ಪರಿಗಣಿಸಿದ ಓವೈಸಿ, "ಹೆಡ್ಗೆವಾರ್ ಅವರು RSS ಸ್ಥಾಪಿಸುವ ಮುನ್ನಾ ಬ್ರಿಟಿಷರನ್ನು ವಿರೋಧಿಸಿದ್ದರು. ಖಿಲಾಫತ್ ಚಳುವಳಿಯನ್ನು ಬೆಂಬಲಿಸಿದ್ದರು. ಅಲ್ಲದೇ ಒಂದು ವರ್ಷ ಜೈಲುವಾಸ ಅನುಭವಿಸಿದ್ದರು. ಅವರು ಆರ್ ಎಸ್ ಎಸ್ ಸ್ಥಾಪನೆಗೂ ಮುಂಚೆಯೇ ಸ್ವಾತಂತ್ರ್ಯ ಹೋರಾಟದಲ್ಲಿ ತೊಡಗಿಸಿಕೊಂಡಿದ್ದರು" ಎಂದು ಅವರು ವಿವರಿಸಿದರು.
ಯಾವುದೇ ಐತಿಹಾಸಿದ ದಾಖಲೆಗಳಿಲ್ಲ: 1942ರ ಕ್ವಿಟ್ ಇಂಡಿಯಾ ಚಳವಳಿಯಂತಹ ಸ್ವಾತಂತ್ರ್ಯ ಹೋರಾಟದಲ್ಲಿಆರ್ ಎಸ್ ಎಸ್ ಭಾಗವಹಿಸಿತ್ತು ಎಂಬ ಹೇಳಿಕೆ ಬೆಂಬಲಿಸುವ ಯಾವುದೇ ಐತಿಹಾಸಿದ ದಾಖಲೆಗಳಿಲ್ಲ. ಸ್ವಾತಂತ್ರ್ಯ ಹೋರಾಟದಲ್ಲಿ ಆರ್ ಎಸ್ ಎಸ್ ಸದಸ್ಯರು ಭಾಗಿಯಾಗಿರಲಿಲ್ಲ ಎಂದು ಬ್ರಿಟಿಷ್ ದಾಖಲೆಗಳು ಹೇಳುತ್ತವೆ ಎಂದು ಓವೈಸಿ ತಿಳಿಸಿದರು.
ಕ್ರಿಶ್ಚಿಯನ್ನರು, ಮುಸ್ಲಿಂರು ಆಂತರಿಕ ಬೆದರಿಕೆಗಳು:
ಕ್ರಿಶ್ಚಿಯನ್ನರು, ಮುಸ್ಲಿಂರು ಮತ್ತು ಎಡ ಪಂಥೀಯರು ಆಂತರಿಕ ಬೆದರಿಕೆಗಳು ಎಂದು ಗೋಳ್ವಾಲ್ಕರ್ ಬರೆದಿದ್ದಾರೆ ಎಂದು ಸಂಘದ ಸಿದ್ಧಾಂತವನ್ನು ಟೀಕಿಸಿದ ಓವೈಸಿ, ಆರಂಭಿಕ ವರ್ಷಗಳಲ್ಲಿ ಆರ್ ಎಸ್ ಎಸ್ ಭಾರತದ ಸಂವಿಧಾನವನ್ನು ವಿರೋಧಿಸಿತ್ತು. ಈ ಸಿದ್ಧಾಂತವನ್ನು ಪ್ರಧಾನಿ ಹೊಗಳಿದರೆ, ಅದು ಸಂವಿಧಾನ ಮತ್ತು ಸಮಾನತೆ, ಜಾತ್ಯತೀತ ತತ್ವಕ್ಕೆ ವಿರೋಧವಾದದ್ದು ಎಂದು ಅವರು ಹೇಳಿದರು.
ಸ್ವಾತಂತ್ರ್ಯ ಹೋರಾಟದಲ್ಲಿ ಅನೇಕ ಮುಸ್ಲಿಂರು ತ್ಯಾಗ:
ಮೌಲ್ವಿ ಅಲ್ಲಾವುದ್ದೀನ್, ತುರಿಬಾಜ್ ಖಾನ್ ನಂತಹ ಮುಸ್ಲಿಂರು ಸ್ವಾತಂತ್ರ್ಯ ಹೋರಾಟಕ್ಕಾಗಿ ತ್ಯಾಗ ಮಾಡಿದ್ದಾರೆ. ನಾನು ಸಂಪೂರ್ಣ ಇತಿಹಾಸವನ್ನು ವಿವರಿಸಿದರೆ ಅನೇಕರು ನಾಚಿಕೆಪಡುತ್ತಾರೆ. ಆದರೂ, ಪ್ರಧಾನಿಯವರ ಹೇಳಿಕೆಯು ಸಂವಿಧಾನ ವಿರೋಧಿಸುವ ಮತ್ತು ಅಸಂಖ್ಯಾತ ಭಾರತೀಯರ ತ್ಯಾಗವನ್ನು ಕಡೆಗಣಿಸುವ ಸಂಘದ ಪ್ರಾಮುಖ್ಯತೆಯನ್ನು ಎತ್ತಿ ಹಿಡಿಯುತ್ತದೆ" ಎಂದು ಅವರು ಹೇಳಿದರು.