ನವದೆಹಲಿ: ಆಡಳಿತಾರೂಢ ಬಿಜೆಪಿ ಭಾರತದ ಪ್ರಜಾಪ್ರಭುತ್ವದ ರಚನೆಯನ್ನು ನಾಶಪಡಿಸುತ್ತಿದೆ ಎಂದು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಮತ್ತೊಮ್ಮೆ ಆರೋಪಿಸಿದ್ದಾರೆ.
ಕೊಲಂಬಿಯಾದ ಇಐಎ ವಿಶ್ವವಿದ್ಯಾಲಯದಲ್ಲಿ ವಿದ್ಯಾರ್ಥಿಗಳನ್ನು ಉದ್ದೇಶಿಸಿ ಮಾತನಾಡಿದ ಅವರು, ಭಾರತದ ಸಾಂಸ್ಕೃತಿಕ ವೈವಿಧ್ಯತೆ, ತಾಂತ್ರಿಕ ಶಕ್ತಿ ಮತ್ತು ಆರೋಗ್ಯ ವ್ಯವಸ್ಥೆಯಿಂದಾಗಿ 'ಭಾರತದ ಬಗ್ಗೆ ತುಂಬಾ ಆಶಾವಾದಿಯಾಗಿಯೇ ಉಳಿದಿದ್ದೇನೆ'. ಆದರೆ, ದೇಶವು ಗಂಭೀರ ಅಪಾಯಗಳನ್ನು ಎದುರಿಸುತ್ತಿದೆ ಎಂದು ಅವರು ಎಚ್ಚರಿಸಿದರು.
'ಭಾರತದಲ್ಲಿ ನಡೆಯುತ್ತಿರುವ ಪ್ರಜಾಪ್ರಭುತ್ವದ ಮೇಲಿನ ದಾಳಿಯೇ ಏಕೈಕ ದೊಡ್ಡ ಅಪಾಯ. ವಾಸ್ತವವಾಗಿ ಭಾರತವು ತನ್ನ ಎಲ್ಲ ಜನರ ನಡುವಿನ ಸಂಭಾಷಣೆಯಾಗಿದೆ... ವಿಭಿನ್ನ ಸಂಪ್ರದಾಯಗಳು, ಧರ್ಮಗಳು, ವಿಚಾರಗಳಿಗೆ ಸ್ಥಳಾವಕಾಶ ಬೇಕಾಗುತ್ತದೆ. ಮತ್ತು ಆ ಜಾಗವನ್ನು ಸೃಷ್ಟಿಸಲು ಉತ್ತಮ ಮಾರ್ಗವೆಂದರೆ ಪ್ರಜಾಪ್ರಭುತ್ವ ವ್ಯವಸ್ಥೆ. ಸದ್ಯ ಈ ವ್ಯವಸ್ಥೆಯ ಮೇಲೆ ಸಂಪೂರ್ಣ ದಾಳಿ ನಡೆಯುತ್ತಿದೆ. ಆದ್ದರಿಂದ ಅದು ಅಪಾಯಕ್ಕೆ ಸಿಲುಕಿದೆ' ಎಂದರು.
'ಚೀನಾ ಮಾಡುವುದನ್ನು ನಾವು ನಮ್ಮ ದೇಶದಲ್ಲಿ ಮಾಡಲು ಸಾಧ್ಯವಿಲ್ಲ, ಅದು ಜನರ ಧ್ವನಿಯನ್ನು ದಮನಿಸುವುದು ಮತ್ತು ಸರ್ವಾಧಿಕಾರಿ ವ್ಯವಸ್ಥೆಯನ್ನು ನಡೆಸುವುದಾಗಿದೆ. ನಮ್ಮ ವಿನ್ಯಾಸವು ಅದನ್ನು ಒಪ್ಪಿಕೊಳ್ಳುವುದಿಲ್ಲ' ಎಂದು ಅವರು ಹೇಳಿದರು.
ರಾಹುಲ್ ಗಾಂಧಿಯವರ ಈ ಹಿಂದಿನ ವಾಗ್ದಾಳಿಗಳು
ಕಾಂಗ್ರೆಸ್ ಸಂಸದರು ವಿದೇಶಿ ನೆಲದಿಂದ ಆಡಳಿತ ಪಕ್ಷದ ಮೇಲೆ ದಾಳಿ ನಡೆಸುತ್ತಿರುವುದು ಇದೇ ಮೊದಲಲ್ಲ. ಕಳೆದ ಕೆಲವು ವರ್ಷಗಳಲ್ಲಿ, ರಾಹುಲ್ ಗಾಂಧಿಯವರು ಪ್ರಧಾನಿ ನರೇಂದ್ರ ಮೋದಿ ಮತ್ತು ಬಿಜೆಪಿಯನ್ನು ಟೀಕಿಸಲು ವಿದೇಶಿ ವೇದಿಕೆಗಳನ್ನು ಪದೇ ಪದೆ ಬಳಸಿದ್ದಾರೆ ಮತ್ತು ಸರ್ಕಾರದಿಂದ ತೀವ್ರ ಟೀಕೆಗೆ ಗುರಿಯಾಗಿದ್ದಾರೆ.
2024ರಲ್ಲಿ ಕೇಂಬ್ರಿಡ್ಜ್ ವಿಶ್ವವಿದ್ಯಾಲಯದಲ್ಲಿ, ರಾಹುಲ್ ಗಾಂಧಿಯವರು ಭಾರತೀಯ ಪ್ರಜಾಪ್ರಭುತ್ವವು 'ಅಪಾಯದಲ್ಲಿದೆ' ಎಂದು ಹೇಳಿದ್ದರು. ಇದರಿಂದಾಗಿ ಬಿಜೆಪಿ ನಾಯಕ ಅನುರಾಗ್ ಠಾಕೂರ್ ಅವರು 'ಸುಳ್ಳು ಹೇಳುವ ಮತ್ತು ಭಾರತವನ್ನು ದೂಷಿಸುವ ಅಭ್ಯಾಸ' ಹೊಂದಿದ್ದಾರೆ ಎಂದು ಆರೋಪಿಸಿದರು.
ಮೇ 2022 ರಲ್ಲಿ, ಲಂಡನ್‌ನಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ, 'ಭಾರತದ ಆತ್ಮದ ಮೇಲೆ ದಾಳಿ ನಡೆಯುತ್ತಿದೆ' ಮತ್ತು ಸಿಬಿಐ ಮತ್ತು ಇ.ಡಿಯಂತಹ ಸಂಸ್ಥೆಗಳನ್ನು ದುರುಪಯೋಗಪಡಿಸಿಕೊಳ್ಳಲಾಗುತ್ತಿದೆ ಎಂದು ಆರೋಪಿಸಿದ್ದರು. ಅವರು ಪರಿಸ್ಥಿತಿಯನ್ನು ಪಾಕಿಸ್ತಾನಕ್ಕೆ ಹೋಲಿಸಿದರು.
ಇದಕ್ಕೂ ಮೊದಲು, 2018 ರಲ್ಲಿ, ಯುಕೆ ಮತ್ತು ಜರ್ಮನಿಗೆ ಭೇಟಿ ನೀಡಿದ ಸಂದರ್ಭದಲ್ಲಿ, ರಾಹುಲ್ ಗಾಂಧಿ ಅವರು ಪ್ರಧಾನಿ ಮೋದಿಯನ್ನು ಅಂದಿನ ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್‌ಗೆ ಹೋಲಿಸಿದರು. ನಿರುದ್ಯೋಗದ ಮೇಲಿನ ಜನರ ಕೋಪವನ್ನು ರಾಜಕೀಯ ಲಾಭಕ್ಕಾಗಿ ಬಳಸಿಕೊಂಡ ಅವರು 'ದೇಶಭಕ್ತರಲ್ಲ' ಎಂದು ಆರೋಪಿಸಿದರು.