ಚೆನ್ನೈ: ಕಳೆದ ಸೆಪ್ಟೆಂಬರ್ 27 ರಂದು ತಮಿಳುನಾಡಿನ ಕರೂರಿನ ವೇಲುಸಾಮಿಪುರಂನಲ್ಲಿ ಟಿವಿಕೆ ನಾಯಕ ಮತ್ತು ನಟ ವಿಜಯ್ ಅವರ ರೋಡ್ ಶೋ ವೇಳೆ ಸಂಭವಿಸಿದ ಕಾಲ್ತುಳಿತದಲ್ಲಿ 41 ಜನ ಸಾವನ್ನಪ್ಪಿದ ಪ್ರಕರಣದ ತನಿಖೆಗೆ ಮದ್ರಾಸ್ ಹೈಕೋರ್ಟ್ ಶುಕ್ರವಾರ ವಿಶೇಷ ತನಿಖಾ ತಂಡ(ಎಸ್ಐಟಿ) ರಚನೆ ಮಾಡಿದೆ.
ರಾಜ್ಯವನ್ನು ಮಾತ್ರವಲ್ಲದೆ ಇಡೀ ರಾಷ್ಟ್ರವನ್ನೇ ಬೆಚ್ಚಿಬೀಳಿಸಿದ ದುರಂತ ಘಟನೆಗೆ ಕಾರಣರಾದವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲು ತಮಿಳುನಾಡು ಸರ್ಕಾರ ವಿಫಲವಾದ ಬಗ್ಗೆ ಮದ್ರಾಸ್ ಹೈಕೋರ್ಟ್ ತೀವ್ರ ಅಸಮಾಧಾನ ವ್ಯಕ್ತಪಡಿಸಿದೆ ಮತ್ತು ರಾಜ್ಯ ಸರ್ಕಾರ, ವಿಜಯ್ ಅವರ ಬಗ್ಗೆ ಮೃದು ಧೋರಣೆ ತೋರುತ್ತಿದೆ ಎಂದು ನ್ಯಾಯಾಲಯ ಆತಂಕ ವ್ಯಕ್ತಪಡಿಸಿದೆ.
ತಮಿಳುನಾಡು ಉತ್ತರ ವಲಯದ ಪೊಲೀಸ್ ಮಹಾನಿರ್ದೇಶಕಿ ಆಸ್ರಾ ಗಾರ್ಗ್ ಅವರನ್ನು ಎಸ್‌ಐಟಿಯ ಮುಖ್ಯಸ್ಥರನ್ನಾಗಿ ಹೈಕೋರ್ಟ್ ನೇಮಿಸಿದ್ದು, ತನಿಖೆಯನ್ನು ತಕ್ಷಣ ಪ್ರಾರಂಭಿಸುವಂತೆ ಸೂಚಿಸಿದೆ.
ಚೆನ್ನೈನ ಪಿಎಚ್ ದಿನೇಶ್ ಅವರು ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಎನ್. ಸೆಂಥಿಲ್‌ಕುಮಾರ್ ಅವರು ಎಸ್ಐಟಿ ರಚನೆ ಮಾಡಿ ಆದೇಶ ಹೊರಡಿಸಿದ್ದಾರೆ.
ದುರಂತಕ್ಕೆ ಕಾರಣರಾದವರ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳುವಂತೆ ಮತ್ತು ಅಂತಹ ಕಾರ್ಯಕ್ರಮಗಳನ್ನು ನಿಯಂತ್ರಿಸಲು ಎಸ್‌ಒಪಿ ರೂಪಿಸುವವರೆಗೆ ರಾಜಕೀಯ ಪಕ್ಷಗಳ ರೋಡ್ ಶೋಗಳಿಗೆ ಅನುಮತಿ ನೀಡುವುದನ್ನು ತಡೆಯುವಂತೆ ಅರ್ಜಿದಾರರು ಕೋರಿದ್ದಾರೆ.
ವಿಚಾರಣೆ ವೇಳೆ, "ನ್ಯಾಯಾಲಯವು ಕಣ್ಣು ಮುಚ್ಚಿಕೊಳ್ಳಲು ಅಥವಾ ಮೂಕ ಪ್ರೇಕ್ಷಕರಾಗಿ ಉಳಿಯಲು ಅಥವಾ ತನ್ನ ಜವಾಬ್ದಾರಿಯಿಂದ ನುಣುಚಿಕೊಳ್ಳಲು ಸಾಧ್ಯವಿಲ್ಲ" ಎಂದು ಹೈಕೋರ್ಟ್ ಹೇಳಿದೆ.
ಸ್ಥಳದಿಂದ ಓಡಿ ಹೋದ ವಿಜಯ್ ಗೆ ತರಾಟೆ
ಕಾರ್ಯಕ್ರಮಕ್ಕೆ ವಿಧಿಸಿದ್ದ ಷರತ್ತುಗಳನ್ನು ಉಲ್ಲಂಘಿಸಿದ್ದಕ್ಕಾಗಿ ಟಿವಿಕೆಯನ್ನು ಹೈಕೋರ್ಟ್ "ಬಲವಾಗಿ ಖಂಡಿಸಿದೆ". "ಜನರು ಅಪಾಯದಲ್ಲಿದ್ದಾಗ ಅವರನ್ನು ರಕ್ಷಿಸುವುದು ಅವರ ಜವಾಬ್ದಾರಿ; ಮಕ್ಕಳು ಮತ್ತು ಮಹಿಳೆಯರು ಪ್ರಾಣ ಕಳೆದುಕೊಂಡರು. ಆದರೆ ಅವರು ಸ್ಥಳದಿಂದ ಓಡಿ ಹೋದರು ಮತ್ತು ಘಟನೆ ಬಗ್ಗೆ ಅವರಿಗೆ ಯಾವುದೇ ಪಶ್ಚಾತ್ತಾಪವಿಲ್ಲ" ಎಂದು ನ್ಯಾಯಾಧೀಶ ಸೆಂಥಿಲ್‌ಕುಮಾರ್ ಅವರು, ಟಿವಿಕೆ ಸಂಸ್ಥಾಪಕ, ನಟ ವಿಜಯ್ ಅವರನ್ನು ತರಾಟೆಗೆ ತೆಗೆದುಕೊಂಡರು.
ವಿಶೇಷವಾಗಿ ಮಹಿಳೆಯರು ಮತ್ತು ಮಕ್ಕಳು ಸಾವನ್ನಪ್ಪಿದಾಗ ಇಂತಹ ವರ್ತನೆ ಸರಿಯಲ್ಲ. ಇದು ನಟ, ರಾಜಕಾರಣಿ ವಿಜಯ್ ಅವರ ಮಾನಸಿಕ ಸ್ಥಿತಿಯನ್ನು ಪ್ರತಿಬಿಂಬಿಸುತ್ತದೆ ಎಂದು ಹೈಕೋರ್ಟ್ ಕಿಡಿ ಕಾರಿದೆ.