ಅಜಂಗಢ: ಉತ್ತರ ಪ್ರದೇಶದ ಅಜಂಗಢ ಜಿಲ್ಲೆಯ ಮಸೀದಿಯೊಂದರ ಮೇಲೆ ಸೌದಿ ಅರೇಬಿಯಾದ ಧ್ವಜವನ್ನು ಹಾರಿಸಲಾಗಿದೆ. ಈ ವಿಡಿಯೋ ವೈರಲ್ ಆದ ಬಳಿಕ 25 ವರ್ಷದ ಯುವಕನನ್ನು ಬಂಧಿಸಲಾಗಿದೆ ಎಂದು ಅಧಿಕಾರಿಯೊಬ್ಬರು ಶನಿವಾರ ತಿಳಿಸಿದ್ದಾರೆ.
ಬಂಧಿತ ವ್ಯಕ್ತಿಯನ್ನು ಮಸೀದಿಯ ಉಸ್ತುವಾರಿ ಹಾಗೂ ಕಡಸರ ಶಿವದಾಸ್ ಕಾ ಪುರ ಗ್ರಾಮದ ನಿವಾಸಿ ನೂರ್ ಆಲಂ (25) ಎಂದು ಗುರುತಿಸಲಾಗಿದೆ. ಅಟ್ರೌಲಿಯಾ ಪೊಲೀಸ್ ಠಾಣಾ ವ್ಯಾಪ್ತಿಯ ನೂರಿ ಮಸೀದಿಯ ಮೇಲೆ ಶುಕ್ರವಾರ ಧ್ವಜ ಹಾರಿಸಲಾಗಿತ್ತು. ಇದರ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡಿತ್ತು.
ಬಳಿಕ ಸಬ್ ಇನ್ಸ್‌ಪೆಕ್ಟರ್ ಜಾಫರ್ ಅಯೂಬ್ ತಮ್ಮ ತಂಡದೊಂದಿಗೆ ಘಟನಾ ಸ್ಥಳಕ್ಕೆ ಆಗಮಿಸಿ ಧ್ವಜವನ್ನು ತೆಗೆದಿದ್ದಾರೆ. ಗ್ರಾಮದ ಯುವಕನೊಬ್ಬ ಧ್ವಜ ಹಾರಾಟ ನಡೆಸಿರುವುದು ಪೊಲೀಸ್ ತನಿಖೆಯಿಂದ ತಿಳಿದುಬಂದಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಪೊಲೀಸ್ ವರಿಷ್ಠಾಧಿಕಾರಿ (ಗ್ರಾಮೀಣ) ಚಿರಾಗ್ ಜೈನ್ ಮಾತನಾಡಿ, ಧಾರ್ಮಿಕ ಭಾವನೆಗಳಿಗೆ ಧಕ್ಕೆ ತರಲು ಮತ್ತು ಸಮಾಜದಲ್ಲಿ ದ್ವೇಷವನ್ನು ಹರಡಲು ಈ ಕೃತ್ಯವೆಸಲಾಗಿದೆ. ಆರೋಪಿ ವಿರುದ್ಧ ಪ್ರಕರಣ ದಾಖಲಾಗಿದ್ದು, ಆತನನ್ನು ಬಂಧಿಸಲಾಗಿದೆ ಎಂದು ತಿಳಿಸಿದ್ದಾರೆ.