ನವದೆಹಲಿ: ಕೋರ್ಟ್ ಕಲಾಪದ ವೇಳೆಯಲ್ಲಿ ಸುಪ್ರೀಂಕೋರ್ಟ್ ಮುಖ್ಯ ನ್ಯಾಯಾಧೀಶ ಬಿರ್.ಆರ್. ಗವಾಯಿ ವಿರುದ್ಧ ಶೂ ಎಸೆಯಲು ಪ್ರಯತ್ನಿಸಿದ ಆಘಾತಕಾರಿ ಘಟನೆ ನಂತರ ಹಿರಿಯ ವಕೀಲ ರಾಕೇಶ್ ಕಿಶೋರ್ ಅವರನ್ನು ಅಭ್ಯಾಸದಿಂದ ಬಾರ್ ಕೌನ್ಸಿಲ್ ಆಫ್ ಇಂಡಿಯಾ ವಜಾಗೊಳಿಸಿದೆ. ರಾಷ್ಟ್ರದ ಅತ್ಯುನ್ನತ ನ್ಯಾಯಾಂಗ ಕಚೇರಿಯ ಘನತೆಗೆ ಧಕ್ಕೆ ತರುವ ವಕೀಲರ ದುಷ್ಕೃತ್ಯದ ಗಂಭೀರ ಕೃತ್ಯಕ್ಕೆ ಪ್ರತಿಕ್ರಿಯೆಯಾಗಿ ಶಿಸ್ತು ಕ್ರಮವನ್ನು ತೆಗೆದುಕೊಳ್ಳಲಾಗಿದೆ.
ಸೋಮವಾರ ಬೆಳಗ್ಗೆ ಮುಖ್ಯ ನ್ಯಾಯಮೂರ್ತಿ ಬಿ.ಆರ್. ಗವಾಯಿ ಅವರು ಕೋರ್ಟ್ ರೂಂ ನಂ.1ರಲ್ಲಿ 71 ವರ್ಷದ ವಕೀಲ ರಾಕೇಶ್ ಕಿಶೋರ್ ಗಲಾಟೆ ಮಾಡಿದ್ದು, ವೇದಿಕೆಯ ಬಳಿಗೆ ಬಂದು ತಮ್ಮ ಶೂ ತೆಗೆದು ಮುಖ್ಯ ನ್ಯಾಯಮೂರ್ತಿಯತ್ತ ಎಸೆಯಲು ಪ್ರಯತ್ನಿಸಿರುವುದಾಗಿ ಪ್ರತ್ಯಕ್ಷದರ್ಶಿಗಳು ವರದಿ ಮಾಡಿದ್ದಾರೆ.
ನ್ಯಾಯಾಲಯದಲ್ಲಿ ಹಾಜರಿದ್ದ ಭದ್ರತಾ ಸಿಬ್ಬಂದಿ ಅವರನ್ನು ಬಂಧಿಸುತ್ತಿದ್ದಂತೆ, ಸನಾತನ ಧರ್ಮದ ಅವಮಾನವನ್ನು ನಾವು ಸಹಿಸುವುದಿಲ್ಲ ಎಂದು ಕಿಶೋರ್ ಕೂಗುವುದು ಕೇಳಿಸಿತು. ತಕ್ಷಣ ಅವರನ್ನು ನ್ಯಾಯಾಲಯದ ಕೊಠಡಿಯಿಂದ ಹೊರಕ್ಕೆ ಕರೆದೊಯ್ದು ಸುಪ್ರೀಂ ಕೋರ್ಟ್‌ನ ಭದ್ರತಾ ಘಟಕಕ್ಕೆ ಹಸ್ತಾಂತರಿಸಲಾಯಿತು. ಅಡೆತಡೆಗಳ ಹೊರತಾಗಿಯೂ, ಸಿಜೆಐ ಗವಾಯಿ ದಿನದ ಕಲಾಪವನ್ನು ಮುಂದುವರೆಸಿದರು. "ಇದರಿಂದ ವಿಚಲಿತರಾಗಬೇಡಿ. ನಾವು ವಿಚಲಿತರಾಗುವುದಿಲ್ಲ. ಈ ವಿಷಯಗಳು ನನ್ನ ಮೇಲೆ ಪರಿಣಾಮ ಬೀರುವುದಿಲ್ಲ" ಎಂದು ಅವರು ಹೇಳಿದರು.
ಮಧ್ಯಪ್ರದೇಶದ ಯುನೆಸ್ಕೋ ವಿಶ್ವ ಪರಂಪರೆಗೆ ಸೇರ್ಪಡೆಯಾಗಿರುವ ಖಜುರಾಹೊ ದೇವಾಲಯ ಸಂಕೀರ್ಣದ ಭಾಗವಾಗಿರುವ ಜವಾರಿ ದೇವಾಲಯದಲ್ಲಿ ಏಳು ಅಡಿ ಎತ್ತರದ ವಿಷ್ಣುವಿನ ವಿಗ್ರಹವನ್ನು ಪುನರ್ನಿರ್ಮಿಸಲು ಮತ್ತು ಮರುಸ್ಥಾಪಿಸಲು ನಿರ್ದೇಶನಗಳನ್ನು ಕೋರಿ ಸಲ್ಲಿಸಲಾದ ಅರ್ಜಿಯನ್ನು ಸಿಜೆಐ ಗವಾಯಿ ನೇತೃತ್ವದ ಪೀಠ ವಜಾಗೊಳಿಸಿತ್ತು. ಈ ಪ್ರಕರಣ ಭಾರತೀಯ ಪುರಾತತ್ವ ಸರ್ವೇಕ್ಷಣಾ ಸಮೀಕ್ಷೆಯ (ASI) ವ್ಯಾಪ್ತಿಗೆ ಬರುತ್ತದೆಯೇ ಹೊರತು ನ್ಯಾಯಾಲಯದ ವ್ಯಾಪ್ತಿಗೆ ಬರುವುದಿಲ್ಲ. ಏನೇ ಮಾಡುವುದರಿದ್ದರೂ ಎಎಸ್‌ಐ ಅನುಮತಿ ನೀಡಬೇಕಾಗಿದೆ. ಕ್ಷಮಿಸಿ ಎಂದು ತಿಳಿಸಿದ್ದರು.
ಸಂಪೂರ್ಣವಾಗಿ ಪ್ರಚಾರ ಹಿತಾಸಕ್ತಿಗಾಗಿ ಈ ಅರ್ಜಿಯನ್ನು ನೀವು ಸಲ್ಲಿಕೆ ಮಾಡಿದ್ದೀರಿ. ಹೋಗಿ ದೇವರಲ್ಲೇ ಏನಾದರೂ ಮಾಡುವಂತೆ ಬೇಡಿಕೊಳ್ಳಿ. ನೀವು ವಿಷ್ಣುವಿನ ಕಟ್ಟಾ ಭಕ್ತ ಎಂದು ಹೇಳುತ್ತೀರಿ. ಆದ್ದರಿಂದ ಈಗಲೇ ಹೋಗಿ ಪ್ರಾರ್ಥಿಸಿ ಮತ್ತು ಸ್ವಲ್ಪ ಧ್ಯಾನ ಮಾಡಿ ಎಂದು ಸಿಜೆಐ ಗವಾಯಿ ಹೇಳಿದ್ದರು. ಇದು ಸಾಮಾಜಿಕ ಮಾಧ್ಯಮಗಳಿಗೆ ತೀವ್ರ ಟೇಕೆಗಳಿಗೆ ಗುರಿಯಾಗಿದೆ. ಬಳಿಕ ಬಹಿರಂಗ ನ್ಯಾಯಾಲಯದಲ್ಲಿ ತಮ್ಮ ನಿಲುವನ್ನು ಸ್ಪಷ್ಟಪಡಿಸಿದ ಸಿಜೆಐ, ನನ್ನ ಹೇಳಿಕೆಗಳನ್ನು ತಪ್ಪಾಗಿ ಅರ್ಥೈಹಿಸಲಾಗುತ್ತಿದೆ. ನಾನು ಎಲ್ಲಾ ಧರ್ಮಗಳನ್ನು ಗೌರವಿಸುತ್ತೇನೆ ಎಂದು ಹೇಳಿದ್ದಾರೆ.
ಸಿಐಜೆ ಅವರ ವಿರುದ್ಧ ಅನುಚಿತವಾಗಿ ವರ್ತನೆ ಹಿನ್ನೆಲೆಯಲ್ಲಿ ಬಾರ್ ಕೌನ್ಸಿಲ್ ಆಫ್ ಇಂಡಿಯಾ ಶಿಸ್ತಿನ ಕ್ರಮಗಳನ್ನು ಕೈಗೊಂಡಿದೆ. ಕಿಶೋರ್ ಅವರು ಅನಿರ್ದಿಷ್ಟಾವಧಿಯವರೆಗೆ ಕಾನೂನು ಅಭ್ಯಾಸದಿಂದ ವಜಾಗೊಳಿಸಲಾಗಿದೆ. ಈ ಕೃತ್ಯವನ್ನು ಕೌನ್ಸಿಲ್ ಖಂಡಿಸಿದ್ದು, ಇಂತಹ ನಡವಳಿಕೆಯು ವಕೀಲ ವೃತ್ತಿಯ ಸದಸ್ಯರಿಗೆ ತಕ್ಕುದಲ್ಲ ಮತ್ತು ಇಡೀ ಭ್ರಾತೃತ್ವಕ್ಕೆ ಅಪಖ್ಯಾತಿ ತರುತ್ತದೆ ಎಂದು ಒತ್ತಿ ಹೇಳಿದೆ. ಇದನ್ನು ಅನಗತ್ಯ ಮತ್ತು ಅಶಿಸ್ತಿನ" ಮತ್ತು ನ್ಯಾಯಾಂಗ ಸ್ವಾತಂತ್ರ್ಯದ ಮೇಲಿನ ದಾಳಿ ಎಂದು ಸುಪ್ರೀಂ ಕೋರ್ಟ್ ಅಡ್ವೊಕೇಟ್ಸ್-ಆನ್-ರೆಕಾರ್ಡ್ ಅಸೋಸಿಯೇಷನ್ (ಎಸ್‌ಸಿಎಒಆರ್‌ಎ) ಖಂಡಿಸಿದೆ.