ದೆಹಲಿ: ದೆಹಲಿಯ ಸ್ವಯಂ ಘೋಷಿತ ದೇವಮಾನವ ಚೈತನ್ಯಾನಂದ ಸರಸ್ವತಿ ಮಹಿಳೆಯರಿಗೆ ಲೈಂಗಿಕ ಕಿರುಕುಳ ನೀಡಿರುವ ಕೇಸ್ ಗೆ ಸಂಬಂಧಿಸಿದಂತೆ ಒಂದೊಂದೇ ಅಘಾತಕಾರಿ ಅಂಶಗಳು ಬಹಿರಂಗವಾಗತೊಡಗಿವೆ.
ಎನ್ ಡಿಟಿವಿ ಪ್ರಕಟಿಸಿರುವ ಇತ್ತೀಚಿನ ವರದಿಯ ಪ್ರಕಾರ, ಮಹಿಳೆಯರಿಗೆ ಚೈತನ್ಯಾನಂದ ಸರಸ್ವತಿ ಲೈಂಗಿಕ ಕಿರುಕುಳ ನೀಡುವುದಕ್ಕೆ ಆತನ ಸಹಚರರ ಪೈಕಿ ಇದ್ದ ಮಹಿಳೆಯರೂ ಸಾಥ್ ನೀಡುತ್ತಿದ್ದರು.
ಚೈತನ್ಯಾನಂದ ಸರಸ್ವತಿ ಯಾರನ್ನು ಹೇಳುತ್ತಿದ್ದನೋ ಆ ಮಹಿಳೆಯರಿಗೆ ಹೊಟೆಲ್ ರೂಮ್ ಗಳಿಗೆ ಹೋಗುವಂತೆ ಆತನ ಜೊತೆಗಿದ್ದ ಒಂದಷ್ಟು ಮಹಿಳೆಯರೇ ಒತ್ತಾಯಿಸುತ್ತಿದ್ದರು. ಈ ಕುರಿತ ಸಂಭಾಷಣೆಗಳ ಆಡಿಯೋ ಲಭ್ಯವಾಗಿರುವುದನ್ನು ಎನ್ ಡಿಟಿವಿ ವರದಿಯಲ್ಲಿ ಬಹಿರಂಗಪಡಿಸಿದೆ.
"ನನಗೆ ಋತುಸ್ರಾವವಾಗುತ್ತಿದೆ, ಚೈತನ್ಯಾನಂದರನ್ನು ಭೇಟಿ ಮಾಡುವ ಸ್ಥಿತಿಯಲ್ಲಿ ಇಲ್ಲ" ಎಂದು ಕೆಲವು ಮಹಿಳೆಯರು ಹೇಳುತ್ತಿದ್ದರೂ, ಕಾರಣ ಹೇಳಬೇಡಿ..." ಎಂದು ಆತನ ಸಹವರ್ತಿ ಮಹಿಳೆಯರು ಬೆದರಿಕೆ ಹಾಕುತ್ತಿರುವುದು ಆಡಿಯೋದಲ್ಲಿ ದಾಖಲಾಗಿದೆ.
ದೆಹಲಿಯ ವಸಂತ್ ಕುಂಜ್‌ನಲ್ಲಿರುವ ಶ್ರೀ ಶಾರದಾ ಇನ್‌ಸ್ಟಿಟ್ಯೂಟ್ ಆಫ್ ಇಂಡಿಯನ್ ಮ್ಯಾನೇಜ್‌ಮೆಂಟ್-ರಿಸರ್ಚ್‌ನ ಮುಖ್ಯಸ್ಥರಾಗಿದ್ದ 67 ವರ್ಷದ ಚೈತನ್ಯಾನಂದ ಎಂಬಾತನನ್ನು ಕಳೆದ ತಿಂಗಳು ಬಂಧಿಸಲಾಗಿದೆ. ಸಂಸ್ಥೆಯ ವಿದ್ಯಾರ್ಥಿಗಳ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ್ದಾರೆ ಎಂಬ ಆಘಾತಕಾರಿ ಆರೋಪಗಳು ಹೊರಬಿದ್ದ ನಂತರ ಆತನೊಂದಿಗೆ ಸಂಸ್ಥೆಯ ಮಾಜಿ ಅಸೋಸಿಯೇಟ್ ಡೀನ್ ಶ್ವೇತಾ ಶರ್ಮಾ ಸೇರಿದಂತೆ ಅವರ ಮೂವರು ಮಹಿಳಾ ಸಹಾಯಕಿಯರನ್ನು ಸಹ ಬಂಧಿಸಲಾಗಿದೆ. ಶ್ವೇತಾ ಶರ್ಮಾ ಅವರ ಮೇಲೆ ಮಹಿಳಾ ವಿದ್ಯಾರ್ಥಿಗಳನ್ನು ಹೋಟೆಲ್ ಕೋಣೆಗಳಲ್ಲಿ ಚೈತನ್ಯಾನಂದ ಅವರನ್ನು ಭೇಟಿ ಮಾಡಲು ಒತ್ತಾಯಿಸಿದ ಆರೋಪವಿದೆ.
ಸ್ವಯಂ ಘೋಷಿತ ದೇವಮಾನವನ ಮನವಿಗೆ ಸ್ಪಂದಿಸದಿದ್ದರೆ ತಮ್ಮ ಶೈಕ್ಷಣಿಕ ದಾಖಲೆಗಳು ಮತ್ತು ಪದವಿಗಳನ್ನು ತಡೆಹಿಡಿಯಲಾಗುವುದು ಎಂದು ಮಹಿಳೆಯರು ಬೆದರಿಕೆ ಹಾಕಿದ್ದಾರೆ ಎಂದು ಆರೋಪಿಸಿದ್ದಾರೆ.
ಪಂಚತಾರಾ ಹೋಟೆಲ್‌ಗಳಲ್ಲಿ ನೆಲೆಸುತ್ತಿದ್ದ ಚೈತನ್ಯಾನಂದ ಮತ್ತು ಆತನ ಸಹಾಯಕರು ಟಾರ್ಗೆತ್ ಗಳನ್ನು ಗುರುತಿಸಿ ಮನವೊಲಿಸುತ್ತಿದ್ದರು ಎಂದು ತಿಳಿದುಬಂದಿದೆ. ಬಾಬಾ ನಿನಗಾಗಿ ಅದ್ಭುತವಾದ ಕೋಣೆಯನ್ನು ಕಾಯ್ದಿರಿಸಿದ್ದಾನೆ ಮತ್ತು ಅಲ್ಲಿ ಅವನೊಂದಿಗೆ ರಾತ್ರಿ ಕಳೆಯಬೇಕಾಗಿದೆ ಎಂದು ಮಹಿಳೆಗೆ ಹೇಳಲಾಗುತ್ತಿತ್ತು. ವಿದ್ಯಾರ್ಥಿಗಳನ್ನು ಚೈತನ್ಯಾನಂದರೊಂದಿಗೆ ಹೋಗಲು ಒತ್ತಾಯಿಸಲಾದ ಪ್ರವಾಸಗಳ ಸಮಯದಲ್ಲಿ ಟಾರ್ಗೆಟ್ ಗಳಿಗೆ ಈ ರೀತಿ ಹೇಳಲಾಗುತ್ತಿತ್ತು. ಆಕೆ ನಿರಾಕರಿಸಿದರೆ, ನಿಮ್ಮ ಹೋಟೆಲ್ ಬುಕಿಂಗ್ ನ್ನು ರದ್ದುಗೊಳಿಸಲಾಗುತ್ತದೆ ಮತ್ತು ನಿಮ್ಮದೇ ಸ್ವಂತ ವೆಚ್ಚದಲ್ಲಿ ಹೋಟೆಲ್ ಬುಕ್ ಮಾಡಬೇಕಾಗುತ್ತದೆ ಎಂದು ಬೆದರಿಕೆಯೊಡ್ಡಲಾಗುತ್ತಿತ್ತು. ಬಾಬಾ ಲೈಂಗಿಕ ಕಿರುಕುಳಕ್ಕೆ ಬಲಿಯಾದವರಲ್ಲಿ ಹೆಚ್ಚಿನವರು ಬಡ ಕುಟುಂಬಗಳ ಹಿನ್ನೆಲೆ ಹೊಂದಿದ್ದಾರೆ. ಇಂತಹ ಬೆದರಿಕೆಗಳಿಂದಾಗಿ ಮಹಿಳೆಯರು ಅಪಾರ ಒತ್ತಡ ಎದುರಿಸುತ್ತಿದ್ದರು.
ಈ ಹೇಳಿಕೆಗಳಲ್ಲಿ ಹಲವು ನಕಲಿ ಎಂದು ದೆಹಲಿ ಪೊಲೀಸ್ ಮೂಲಗಳು ಶಂಕಿಸಿವೆ ಮತ್ತು ಅವುಗಳನ್ನು ಬಯಲು ಮಾಡಲು ಸಂಪೂರ್ಣ ತನಿಖೆ ನಡೆಯುತ್ತಿದೆ ಎಂದು ಹೇಳಿದ್ದಾರೆ.