ಸಿಲಿಗುರಿ: ಪಶ್ಚಿಮ ಬಂಗಾಳದ ಜಲ್ಪೈಗುರಿ ಜಿಲ್ಲೆಯಲ್ಲಿ ಬಿಜೆಪಿ ನಾಯಕರ ನಿಯೋಗದ ಮೇಲೆ ಮಾರಣಾಂತಿಕ ದಾಳಿ ನಡೆದಿದ್ದು, ಘಟನೆಯಲ್ಲಿ ಬಿಜೆಪಿ ಸಂಸದ ಖಗೆನ್ ಮುರ್ಮು ಅವರು ಗಂಭೀರವಾಗಿ ಗಾಯಗೊಂಡಿದ್ದಾರೆ.
ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಮಂಗಳವಾರ ಸಿಲಿಗುರಿಯ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಬಿಜೆಪಿ ಸಂಸದ ಖಗೆನ್ ಮುರ್ಮು ಅವರನ್ನು ಭೇಟಿ ಮಾಡಿ, ಆರೋಗ್ಯ ವಿಚಾರಿಸಿದರು.
ಖಗೆನ್ ಅವರು ರಾಜ್ಯದ ಉತ್ತರ ಭಾಗದಲ್ಲಿ ಪ್ರವಾಹ ಮತ್ತು ಭೂಕುಸಿತ ಪೀಡಿತ ಪ್ರದೇಶಗಳಿಗೆ ಭೇಟಿ ನೀಡುತ್ತಿದ್ದಾಗ ನಾಗರ್ಕಟದಲ್ಲಿ ಅವರ ಮೇಲೆ ಹಲ್ಲೆ ನಡೆಸಲಾಗಿದೆ.
ಪ್ರವಾಹ ಪೀಡಿತ ಉತ್ತರ ಬಂಗಾಳದಲ್ಲಿ ಇಬ್ಬರು ಬಿಜೆಪಿ ನಾಯಕರಾದ ಮುರ್ಮು ಮತ್ತು ಶಾಸಕ ಶಂಕರ್ ಘೋಷ್ ಅವರ ಮೇಲೆ ನಡೆದ ಒಂದು ದಿನದ ನಂತರ ಮಮತಾ ಅವರು ಆಸ್ಪತ್ರೆ ಭೇಟಿ ನೀಡಿದ್ದಾರೆ.
ಇಂದು ಆಸ್ಪತ್ರೆಗೆ ಭೇಟಿ ನೀಡಿದ ಮಮತಾ, ಗಾಯಗೊಂಡ ಸಂಸದ, ಅವರ ಪತ್ನಿ ಮತ್ತು ಮಗನೊಂದಿಗೆ ಕೆಲವು ನಿಮಿಷಗಳ ಕಾಲ ಮಾತನಾಡಿದರು. ನಂತರ ಅವರನ್ನು ನೋಡಿಕೊಳ್ಳುತ್ತಿರುವ ವೈದ್ಯರ ತಂಡವನ್ನು ಸಂಪರ್ಕಿಸಿದರು.
ಮೂಲಗಳ ಪ್ರಕಾರ, ಮಮತಾ ಬ್ಯಾನರ್ಜಿ ಅವರು, ಬಿಜೆಪಿ ಸಂಸದರಿಗೆ ಆಗಿರುವ ಗಾಯಗಳ ಬಗ್ಗೆ ಮತ್ತು ಅವರಿಗೆ ನೀಡುತ್ತಿರುವ ಕಿಚಿತ್ಸೆ ಸೇರಿದಂತೆ ಸಂಸದರ ಸ್ಥಿತಿಯ ಬಗ್ಗೆ ವಿವರವಾಗಿ ವಿಚಾರಿಸಿದರು. "ನಿಮಗೆ ಮಧುಮೇಹವಿದೆಯೇ? ನೀವು ನಿಯಮಿತವಾಗಿ ಇನ್ಸುಲಿನ್ ಮತ್ತು ಔಷಧಿಗಳನ್ನು ತೆಗೆದುಕೊಳ್ಳುತ್ತಿದ್ದೀರಾ?" ಎಂದು ದೀದಿ ಮೃದುವಾದ ಧ್ವನಿಯಲ್ಲಿ ಬಿಜೆಪಿ ಸಂಸದರ ಆರೋಗ್ಯ ವಿಚಾರಿಸಿದರು.
ಹೊರಡುವ ಮೊದಲು, ಮುಖ್ಯಮಂತ್ರಿಗಳು ವೈದ್ಯಕೀಯ ಸಲಹೆಯನ್ನು ಎಚ್ಚರಿಕೆಯಿಂದ ಪಾಲಿಸುವಂತೆ ವಿನಂತಿಸಿದರು ಮತ್ತು ಸರ್ಕಾರ ಅಗತ್ಯವಿರುವ ಎಲ್ಲಾ ಸಹಾಯವನ್ನು ನೀಡುವುದಾಗಿ ಅವರ ಕುಟುಂಬಕ್ಕೆ ತಿಳಿಸಿದರು. "ನಿಮಗೆ ಬೇರೆಡೆ ಯಾವುದೇ ಸಹಾಯ ಅಥವಾ ಹೆಚ್ಚಿನ ಚಿಕಿತ್ಸೆ ಅಗತ್ಯವಿದ್ದರೆ, ದಯವಿಟ್ಟು ನನಗೆ ತಿಳಿಸಿ" ಎಂದು ಬ್ಯಾನರ್ಜಿ ಹೇಳಿದರು ಎಂದು ವರದಿಯಾಗಿದೆ.
ಆದಾಗ್ಯೂ, ದಾಳಿಯಲ್ಲಿ ಗಾಯಗೊಂಡು ಆಸ್ಪತ್ರೆಯಲ್ಲಿ ದಾಖಲಾಗಿರುವ ಬಿಜೆಪಿ ಶಾಸಕ ಶಂಕರ್ ಘೋಷ್ ಅವರನ್ನು ಬ್ಯಾನರ್ಜಿ ಭೇಟಿಯಾಗಿದ್ದಾರೆಯೇ ಎಂಬುದು ಇನ್ನೂ ಸ್ಪಷ್ಟವಾಗಿಲ್ಲ.