ಒಡಿಶಾದ ಬೆರ್ಹಾಂಪುರದಲ್ಲಿ ಕಳೆದ ರಾತ್ರಿ ಬಿಜೆಪಿ ನಾಯಕ ಪಿತವಾಸ್ ಪಾಂಡ ಅವರನ್ನು ದುಷ್ಕರ್ಮಿಗಳು ಗುಂಡಿಕ್ಕಿ ಹತ್ಯೆ ಮಾಡಿದ್ದಾರೆ ಎಂದು ಬೆರ್ಹಾಂಪುರ ಎಸ್ಪಿ ಡಾ. ಸರವಣ ವಿವೇಕ್ ಎಂ ಹೇಳಿದ್ದಾರೆ. ತನಿಖೆ ನಡೆಸಲು ತಂಡಗಳನ್ನು ರಚಿಸಲಾಗಿದೆ ಎಂದು ತಿಳಿಸಿದ್ದಾರೆ. ಬಿಜೆಪಿ ನಾಯಕ ಪಿತವಾಸ್ ಪಾಂಡ ಹಿರಿಯ ವಕೀಲರು ಮತ್ತು ಆರ್‌ಟಿಐ ಕಾರ್ಯಕರ್ತರಾಗಿದ್ದರು.
ನಡೆದ ಘಟನೆಯೇನು?
ಕಳೆದ ರಾತ್ರಿ 10 ಗಂಟೆ ಸುಮಾರಿಗೆ ಬೈಕ್ ನಲ್ಲಿ ಬಂದ ಇಬ್ಬರು ದುಷ್ಕರ್ಮಿಗಳು ಪಾಂಡ ಅವರ ಮನೆಯ ಬಳಿ ಬಂದು ಅವರ ಮೇಲೆ ಗುಂಡು ಹಾರಿಸಿದರು. ತಕ್ಷಣ ಅವರನ್ನು ಬೆರ್ಹಾಂಪುರ್‌ನ ಎಂಕೆಸಿಜಿ ವೈದ್ಯಕೀಯ ಕಾಲೇಜು ಆಸ್ಪತ್ರೆಗೆ ಕರೆದೊಯ್ಯಲಾಯಿತು.
ಅಲ್ಲಿ ವೈದ್ಯರು ಮೃತಪಟ್ಟಿದ್ದಾರೆ ಎಂದು ಘೋಷಿಸಿದರು. ಹಿರಿಯ ಪೊಲೀಸ್ ಅಧಿಕಾರಿಗಳು ಸ್ಥಳಕ್ಕೆ ಆಗಮಿಸಿ ದಾಳಿಕೋರರನ್ನು ಗುರುತಿಸಲು ಸಿಸಿಟಿವಿ ದೃಶ್ಯಾವಳಿಗಳನ್ನು ಪರಿಶೀಲಿಸಿದ್ದಾರೆ.
ದಾಳಿಯ ಬಗ್ಗೆ ಪ್ರತಿಪಕ್ಷಗಳು ತೀವ್ರ ಖಂಡಿಸಿದ್ದು ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಹದಗೆಟ್ಟಿದೆ ಎಂದು ಆರೋಪಿಸಿದ್ದಾರೆ.