ತಿರುಚಿ: ಕರೂರ್ ಪ್ರಚಾರ ರ್ಯಾಲಿಯಲ್ಲಿ 41 ಜೀವಗಳನ್ನು ಬಲಿ ಪಡೆದ ಕಾಲ್ತುಳಿತದಲ್ಲಿ ತಮ್ಮ ಪ್ರೀತಿಪಾತ್ರದವರನ್ನು ಕಳೆದುಕೊಂಡ ಕುಟುಂಬಸ್ಥರೊಂದಿಗೆ ತಮಿಳಗ ವೆಟ್ರಿ ಕಳಗಂ (TVK) ಮುಖ್ಯಸ್ಥ ನಟ ವಿಜಯ್ ವಿಡಿಯೊ ಕರೆ ಮಾಡಿ ಮಾತನಾಡಿದ್ದಾರೆ.
ನಿನ್ನೆ ಮತ್ತು ಇಂದು ನಟ ವಿಜಯ್ ಕರೆ ಮಾಡಿ ಕುಟುಂಬಸ್ಥರೊಂದಿಗೆ ಮಾತನಾಡಿದ್ದಾರೆ. ಮೂಲಗಳ ಪ್ರಕಾರ, ಮಾಜಿ ಐಆರ್‌ಎಸ್ ಅಧಿಕಾರಿ ಮತ್ತು ಟಿವಿಕೆಯ ಪ್ರಚಾರ ಮತ್ತು ನೀತಿ ವಿಭಾಗದ ಪ್ರಧಾನ ಕಾರ್ಯದರ್ಶಿ ಡಾ. ಕೆ.ಜಿ. ಅರುಣ್‌ರಾಜ್, ಚೆನ್ನೈನ ತಂಡದೊಂದಿಗೆ ಗಾಂಧಿಗ್ರಾಮ, ಪಶುಪತಿಪಾಳ್ಯಂ ಮತ್ತು ಹತ್ತಿರದ ಪ್ರದೇಶಗಳಲ್ಲಿ ದುಃಖತಪ್ತ ಕುಟುಂಬಸ್ಥರನ್ನು ಭೇಟಿ ಮಾಡಿ ಸಾಂತ್ವನ ಹೇಳಿದ್ದಾರೆ.
ವಿಜಯ್ ತಂಡ ನಮಗೆ ಕರೆ ಮಾಡಿ ಮಾತನಾಡಿದ್ದಾರೆ ಎಂದು ಎಮುರ್ ಪುಧೂರ್‌ನಲ್ಲಿರುವ ಕಾಲ್ತುಳಿತದಲ್ಲಿ ಮೃತಪಟ್ಟವರ ಕುಟುಂಬಸ್ಥರೊಬ್ಬರು ಹೇಳಿದ್ದಾರೆ.
ವಿಜಯ್ ಅವರು ನಮ್ಮ ಕುಟುಂಬಕ್ಕೆ ಸಹೋದರನಂತೆ ನಿಲ್ಲುವುದಾಗಿ ಹೇಳಿದರು ಎಂದು ಮೃತ ಚಂದ್ರ ಅವರ ಸಂಬಂಧಿ ಪಿ. ಸೆಲ್ವರಾಜ್ ಇಂದು ಟಿಎನ್‌ಐಇಗೆ ತಿಳಿಸಿದರು.
ಸುಮಾರು ಐದು ನಿಮಿಷಗಳ ಕಾಲ ನಡೆದ ವಿಡಿಯೊ ಕರೆಯಲ್ಲಿ, ವಿಜಯ್ ತೀವ್ರ ದುಃಖ ವ್ಯಕ್ತಪಡಿಸಿ, ಈ ಘಟನೆ ಸಂಭವಿಸಬಾರದಿತ್ತು. ಇದು ತುಂಬಲಾಗದ ನಷ್ಟ ಎಂದು ಹೇಳಿದ್ದಾರೆ ಎಂದು ವರದಿಯಾಗಿದೆ.
ಕರೆಯ ಸಮಯದಲ್ಲಿ ಫೋಟೋಗಳನ್ನು ತೆಗೆಯಬೇಡಿ ಎಂದು ತಂಡವು ಕುಟುಂಬಗಳಿಗೆ ತಿಳಿಸಿದೆ. ವಿಜಯ್ ಕುಟುಂಬಗಳನ್ನು ವೈಯಕ್ತಿಕವಾಗಿ ಭೇಟಿ ಮಾಡುವ ಯೋಜನೆಗಳ ಬಗ್ಗೆ ಅವರಿಗೆ ಭರವಸೆ ನೀಡಿದರು. ಪರಿಹಾರ ನೆರವು ನೀಡುವ ಬಗ್ಗೆ ಮಾತನಾಡಿದರು ಎಂದು ಮೂಲಗಳು ತಿಳಿಸಿವೆ.
ಡಾ. ಅರುಣ್‌ರಾಜ್ ಅವರನ್ನು ಸಂಪರ್ಕಿಸಿದಾಗ, ಅವರು ಪ್ರತಿಕ್ರಿಯೆಗೆ ಲಭ್ಯವಿರಲಿಲ್ಲ. ಇಂದು ಕೂಡ ವಿಜಯ್ ಅವರ ತಂಡವು ಸಂತ್ರಸ್ತ ಕುಟುಂಬಗಳ ಭೇಟಿ ಮುಂದುವರಿಸಲಿದೆ.