ಚೆನ್ನೈ: ಕರೂರು ಕಾಲ್ತುಳಿತ(Karur Stampede) ಸಂಭವಿಸಿದ ನಂತರ ನಟ-ರಾಜಕಾರಣಿ ಮತ್ತು ತಮಿಳಗ ವೆಟ್ರಿ ಕಳಗಂ (TVK) ಮುಖ್ಯಸ್ಥ ವಿಜಯ್ ಅವರ ಚೆನ್ನೈ ನಿವಾಸಕ್ಕೆ ಬಾಂಬ್ ಬೆದರಿಕೆ ಕರೆ ಬಂದಿದೆ. ಕರೂರ್ ಜಿಲ್ಲೆಯಲ್ಲಿ ನಡೆದ ಟಿವಿಕೆ ರ್ಯಾಲಿಯಲ್ಲಿ ನಡೆದ ಕಾಲ್ತುಳಿತದಲ್ಲಿ 41 ಮಂದಿ ಮೃತಪಟ್ಟು, ಹಲವರು ಗಾಯಗೊಂಡ ನಂತರ ವಿಜಯ್ ವಿರುದ್ಧ ಟೀಕೆಗಳು ಕೇಳಿಬರುತ್ತಿರುವ ನಡುವೆಯೇ ಈ ಕರೆ ಬಂದಿದೆ.
ಮುನ್ನೆಚ್ಚರಿಕೆ ಕ್ರಮವಾಗಿ ವಿಜಯ್ ಅವರ ನೀಲಂಕರೈ ನಿವಾಸದ ಸುತ್ತ ಭದ್ರತೆಯನ್ನು ಬಲಪಡಿಸಲಾಗಿದೆ. ಯಾವುದೇ ಸ್ಫೋಟಕಗಳು ಪತ್ತೆಯಾಗಿಲ್ಲ, ಅಧಿಕಾರಿಗಳು ಇದೊಂದು ಹುಸಿ ಕರೆ ಎಂದು ದೃಢಪಡಿಸಿದ್ದಾರೆ. ಹುಸಿ ಕರೆ ಮಾಡಿದ ಮೂಲವನ್ನು ಪತ್ತೆಹಚ್ಚಲು, ವ್ಯಕ್ತಿ ಅಥವಾ ಗುಂಪನ್ನು ಗುರುತಿಸಲು ಪೊಲೀಸರು ತನಿಖೆ ಪ್ರಾರಂಭಿಸಿದ್ದಾರೆ.
ಕರೂರ್ ಕಾಲ್ತುಳಿತ ಘಟನೆ ನಂತರ ಅನೇಕ ದುಃಖಿತ ಕುಟುಂಬಗಳಿಗೆ ವೀಡಿಯೊ ಕರೆಗಳನ್ನು ಅವರೇ ಸ್ವತಃ ಮಾಡಿ ಸಾಂತ್ವನ ಮಾಡಿದ್ದಾರೆ. ಅವರಿಗೆ ಸಹಾಯದ ಭರವಸೆ ನೀಡಿದರು ಮತ್ತು ಶೀಘ್ರದಲ್ಲೇ ಅವರನ್ನು ವೈಯಕ್ತಿಕವಾಗಿ ಭೇಟಿಯಾಗುವುದಾಗಿ ಹೇಳಿದರು.
ಈ ಮಧ್ಯೆ ಘಟನೆಗೆ ಸಂಬಂಧಪಟ್ಟ ವಿವಾದಗಳು ಮತ್ತು ಕಾನೂನು ಸವಾಲುಗಳು ಹೆಚ್ಚಿವೆ. ಘಟನೆಯ ನಂತರ ವಿಜಯ್ ಸ್ಥಳದಿಂದ ಕಾಲ್ಕಿತ್ತಿದ್ದರು ಎಂದು ವರದಿಯಾಗಿದ್ದಕ್ಕಾಗಿ ಮದ್ರಾಸ್ ಹೈಕೋರ್ಟ್ ತರಾಟೆಗೆ ತೆಗೆದುಕೊಂಡಿತ್ತು.
ವಿಜಯ್ ಅವರ ಪಕ್ಷವಾದ ಟಿವಿಕೆ, ನ್ಯಾಯಾಲಯದ ಆದೇಶದ ವಿಶೇಷ ತನಿಖಾ ತಂಡ (SIT) ಪಕ್ಷಪಾತದಿಂದ ವರ್ತಿಸುತ್ತಿದೆ ಎಂದು ಆರೋಪಿಸಿ ಸ್ವತಂತ್ರ ತನಿಖೆಯನ್ನು ಕೋರಿ ಸುಪ್ರೀಂ ಕೋರ್ಟ್‌ಗೆ ಅರ್ಜಿ ಸಲ್ಲಿಸಿದೆ. 13 ವರ್ಷದ ಮೃತ ಬಾಲಕನ ತಂದೆ ಕೂಡ ಕರೂರ್ ಕಾಲ್ತುಳಿತದ ಬಗ್ಗೆ ಸಿಬಿಐ ತನಿಖೆಗೆ ಅರ್ಜಿ ಸಲ್ಲಿಸಿದ್ದಾರೆ.