ಪಾಟ್ನಾ: ಬಿಹಾರ ವಿಧಾನಸಭಾ ಚುನಾವಣೆಗೆ ಕೆಲವೇ ದಿನಗಳು ಬಾಕಿಯಿರುವಂತೆಯೇ ಪುರ್ನಿಯಾ ಕ್ಷೇತ್ರದ ಮಾಜಿ ಸಂಸದ ಸಂತೋಷ್ ಕುಶ್ವಾಹ ಆರ್ ಜೆಡಿ (RJD) ಸೇರಲು ಸಜ್ಜಾಗಿದ್ದು, ಸಿಎಂ ನಿತೀಶ್ ಕುಮಾರ್ ಅವರ ಜೆಡಿಯುಗೆ ಭಾರಿ ಹೊಡೆತ ಎನ್ನಲಾಗುತ್ತಿದೆ.
ಕುಶ್ವಾಹ ಪುರ್ನಿಯಾ ಕ್ಷೇತ್ರದಲ್ಲಿ ಎರಡು ಬಾರಿ ಸಂಸದರಾಗಿ ಸೇವೆ ಸಲ್ಲಿಸಿದ್ದಾರೆ. ಬಾಂಕಾ ಕ್ಷೇತ್ರದ ಹಾಲಿ ಜೆಡಿಯು ಸಂಸದ ಗಿರ್ಧಾರಿ ಚಾಣಕ್ಯ ಅವರ ಪುತ್ರ ಪ್ರಕಾಶ್ ರಂಜನ್ ಹಾಗೂ ಜಹಾನಬಾದ್ ಮಾಡಿ ಸಂಸದ ಜಗದೀಶ್ ಶರ್ಮಾ ಅವರ ಪುತ್ರ ರಾಹುಲ್ ಶರ್ಮಾ ಕೂಡಾ ಆರ್ ಜೆಡಿ ಸೇರುತ್ತಿದ್ದಾರೆ.
ಇಂದು ನಡೆಯುವ ಸಾರ್ವಜನಿಕ ಸಮಾರಂಭದಲ್ಲಿ ಆರ್ ಜೆಡಿಯ ಹಿರಿಯ ನಾಯಕರ ಸಮ್ಮುಖದಲ್ಲಿ ಇವರೆಲ್ಲರೂ ಪಕ್ಷ ಸೇರ್ಪಡೆಯಾಗಲಿದ್ದಾರೆ ಎಂದು ಮೂಲಗಳು ತಿಳಿಸಿವೆ. ಅನುಭವಿ ನಾಯಕರು ಮತ್ತು ಸ್ಥಳೀಯ ಮಟ್ಟದಲ್ಲಿ ಪ್ರಭಾವ ಹೊಂದಿರುವವರನ್ನು ಪಕ್ಷ ಸೇರ್ಪಡೆ ಮೂಲಕ ತನ್ನ ಕಾರ್ಯಕರ್ತರನ್ನು ಬಲಪಡಿಸಲು RJD ಕಾರ್ಯತಂತ್ರ ರೂಪಿಸಿದೆ.
ಜೆಡಿಯು ಮುಂಬರುವ ಚುನಾವಣೆಗೆ ಸೀಟು ಹಂಚಿಕೆಯನ್ನು ಅಂತಿಮಗೊಳಿಸುವ ಜವಾಬ್ದಾರಿಯನ್ನು ಬಿಜೆಪಿಗೆ ವಹಿಸಿದೆ. ಇತರ ಮಿತ್ರಪಕ್ಷಗಳಾದ ಚಿರಾಗ್ ಪಾಸ್ವಾನ್, ಜಿತನ್ ರಾಮ್ ಮಾಂಝಿ ಮತ್ತು ಉಪೇಂದ್ರ ಕುಶ್ವಾಹ ಅವರೊಂದಿಗೆ ಮಾತುಕತೆ ನಡೆಸುವ ಜವಾಬ್ದಾರಿಯನ್ನು ಪಕ್ಷಕ್ಕೆ ವಹಿಸಲಾಗಿದೆ ಮತ್ತು ಚರ್ಚೆಗಳು ಸಕಾರಾತ್ಮಕ ದಿಕ್ಕಿನಲ್ಲಿ ಸಾಗುತ್ತಿವೆ ಎಂದು ಹೇಳಲಾಗಿದೆ. NDA ಅಭ್ಯರ್ಥಿಗಳ ಮೊದಲ ಪಟ್ಟಿಯನ್ನು ಅಕ್ಟೋಬರ್ 13 ರಂದು ಬಿಡುಗಡೆ ಮಾಡುವ ನಿರೀಕ್ಷೆಯಿದೆ.
ಬಿಹಾರ ವಿಧಾನಸಭೆ ಚುನಾವಣೆ ನವೆಂಬರ್ 6 ಮತ್ತು 11 ರಂದು ಎರಡು ಹಂತಗಳಲ್ಲಿ ನಡೆಯಲಿದ್ದು, ನವೆಂಬರ್ 14 ರಂದು ಫಲಿತಾಂಶ ಪ್ರಕಟವಾಗಲಿದೆ. 243 ಸದಸ್ಯ ಬಲದ ಬಿಹಾರ ವಿಧಾನಸಭೆಯ ಅವಧಿ ನವೆಂಬರ್ 22 ರಂದು ಕೊನೆಗೊಳ್ಳಲಿದೆ.