ಹೈದರಾಬಾದ್: ಬೆಂಗಳೂರು ಮೂಲದ ನವೋದ್ಯಮಗಳನ್ನು ಆಂಧ್ರ ಪ್ರದೇಶಕ್ಕೆ ವಿಸ್ತರಿಸುವ ಅಥವಾ ಸ್ಥಳಾಂತರಿಸುವ ಕುರಿತು ಮಾತುಕತೆಗಳು ನಡೆಯುತ್ತಿವೆ ಎಂದು ಆಂಧ್ರ ಪ್ರದೇಶ ಐಟಿ ಸಚಿವ ನಾರಾ ಲೋಕೇಶ್ ಹೊಸ ಬಾಂಬ್ ಸಿಡಿಸಿದ್ದಾರೆ.
ಹೌದು.. ಉದ್ಯಮಗಳು ಮತ್ತು ಹೂಡಿಕೆ ವಿಚಾರವಾಗಿ ಮೊದಲಿನಿಂದಲೂ ಕರ್ನಾಟಕದೊಂದಿಗೆ ತೀವ್ರ ಪೈಪೋಟಿ ನಡೆಸುತ್ತಿರುವ ನೆರೆಯ ಆಂಧ್ರ ಪ್ರದೇಶ ಇದೀಗ ಬೆಂಗಳೂರು ಮೂಲದ ನವೋದ್ಯಮಗಳನ್ನು ತನ್ನಲ್ಲಿಗೆ ಸ್ಥಳಾಂತರಿಸಿಕೊಳ್ಳಲು ಮುಂದಾಗಿದೆ.
ಹೌದು.. ಈ ಕುರಿತು ಆಂಧ್ರ ಪ್ರದೇಶ ಐಟಿ ಸಚಿವ ನಾರಾ ಲೋಕೇಶ್ ಮಾತನಾಡಿದ್ದು, ಖಾಸಗಿ ವಾಹಿನಿಯೊಂದರ ಸಂದರ್ಶನದಲ್ಲಿ ಮಾತನಾಡಿರುವ ಅವರು, "ನಾವು ಪ್ರತಿ ರೂಪಾಯಿ ಹೂಡಿಕೆಗೂ ಸ್ಪರ್ಧಿಸುತ್ತೇವೆ" ಎಂದು ಹೇಳಿದ್ದಾರೆ.
'ನಾವು ಉದ್ಯೋಗ ಸೃಷ್ಟಿ ಮತ್ತು ಉತ್ತಮ ವ್ಯಾಪಾರ ಪರಿಸರ ವ್ಯವಸ್ಥೆಯನ್ನು ನಿರ್ಮಿಸುವತ್ತ ಗಮನ ಹರಿಸಿದ್ದೇವೆ. ಬಲವಾದ ಮೂಲಭೂತ ಸೌಕರ್ಯ, 24x7 ವಿದ್ಯುತ್ ಸರಬರಾಜು ಅನಂತಪುರದಲ್ಲಿರುವ ಕಿಯಾ ಕೇಂದ್ರದಂತಹ ಅಭಿವೃದ್ಧಿ ಹೊಂದುತ್ತಿರುವ ಕ್ಲಸ್ಟರ್‌ಗಳಿಂದ ಬೆಂಬಲಿತವಾಗಿದೆ. ಆಂಧ್ರಕ್ಕೆ ವಿಸ್ತರಣೆ ಅಥವಾ ಸ್ಥಳಾಂತರವನ್ನು ಅನ್ವೇಷಿಸುವ ಬೆಂಗಳೂರು ಮೂಲದ ಸ್ಟಾರ್ಟ್‌ಅಪ್‌ಗಳೊಂದಿಗೆ ಮಾತುಕತೆ ನಡೆಯುತ್ತಿದೆ ಎಂದು ನಾರಾ ಲೋಕೇಶ್ ಹೇಳಿದ್ದಾರೆ.
'ಅವರು ಅಸಮರ್ಥರಾದರೆ ನಾವೇನು ಮಾಡಲು ಸಾಧ್ಯ..'!
ಇನ್ನು ಬೆಂಗಳೂರಿನಲ್ಲಿ ಗುಂಡಿಗಳಿಂದ ಕೂಡಿದ ರಸ್ತೆಗಳು ಮತ್ತು ಕಸದ ರಾಶಿಯಿಂದ ಕೂಡಿದ ಬೀದಿಗಳು ಮತ್ತು ಅದರ ಪರಿಣಾಮವಾಗಿ ಹೂಡಿಕೆ ಅವಕಾಶಗಳಿಗಾಗಿ ಕರ್ನಾಟಕ ಮತ್ತು ಆಂಧ್ರಪ್ರದೇಶಗಳು ಪೈಪೋಟಿಯನ್ನು ಮುಂದುವರೆಸಿವೆ. ಈಗಾಗಲೇ ಇಂಟರ್ನೆಟ್ ದೈತ್ಯ ಗೂಗಲ್ ಮೆಗಾ ಡೇಟಾ ಮತ್ತು AI ಹಬ್‌ಗಾಗಿ 15 ಬಿಲಿಯನ್ ಡಾಲರ್ ಹೂಡಿಕೆ ಮಾಡಲು ಆಂಧ್ರ ಪ್ರದೇಶದ ವಿಶಾಖಪಟ್ಟಣವನ್ನು ಆಯ್ಕೆ ಮಾಡಿದ ನಂತರ ಮತ್ತಷ್ಟು ಉದ್ಯಮಗಳ ಆಕರ್ಷಿಸುವ ಕೆಲಸ ಕೂಡ ಭರದಿಂದ ಸಾಗಿದೆ.
ಈ ಬಗ್ಗೆಯೂ ಮಾತನಾಡಿದ ನಾರಾ ಲೋಕೇಶ್, 'ಅವರು (ಕರ್ನಾಟಕ ಸರ್ಕಾರ) ಅಸಮರ್ಥರಾಗಿದ್ದರೆ, ನಾನು ಏನು ಮಾಡಲು ಸಾಧ್ಯ? ಅವರ ಸ್ವಂತ ಕೈಗಾರಿಕೋದ್ಯಮಿಗಳು ಮೂಲಸೌಕರ್ಯ ಕೆಟ್ಟದಾಗಿದೆ ಎಂದು ಹೇಳುತ್ತಿದ್ದಾರೆ. ವಿದ್ಯುತ್ ಕಡಿತ, ಮೂಲಭೂತ ಸೌಕರ್ಯ ಕೊರತೆಗಳಂತಹ ಸಮಸ್ಯೆಗಳನ್ನು ಸರಿಪಡಿಸಬೇಕು" ಎಂದು ಅವರು ಹೇಳಿದರು.
ಅಲ್ಲದೆ ತಮ್ಮ ರಾಜ್ಯವು ಈಗಾಗಲೇ $120 ಬಿಲಿಯನ್ ಹೂಡಿಕೆಯನ್ನು ಆಕರ್ಷಿಸಿದ್ದು, ಆಂಧ್ರ ಪ್ರದೇಶದಲ್ಲಿನ ಸುಧಾರಣೆಗಳ ತ್ವರಿತ ವೇಗವು ಕರ್ನಾಟಕದೊಂದಿಗೆ ಸ್ಪರ್ಧಿಸುವಂತೆ ಮಾಡಿದೆ. ಆದಾಗ್ಯೂ, ಈ ವೇಗದಿಂದ ಚಿಂತಿತರಾಗಿರುವ ರಾಜ್ಯಗಳು ಪ್ರತಿಕ್ರಿಯಿಸಬೇಕಾಯಿತು. ಅದು ಅವರ ಸವಾಲು.. ಎಂದು ನಾರಾ ಲೋಕೇಶ್ ಕರ್ನಾಟಕ ಸಚಿವ ಪ್ರಿಯಾಂಕ್ ಖರ್ಗೆ ಅವರ ಹೆಸರು ಉಲ್ಲೇಖಿಸದೇ ಹೇಳಿದರು.
'ರಾಜ್ಯವು ಹೂಡಿಕೆದಾರರಿಗೆ ಹೆಚ್ಚು ಆಕರ್ಷಕವಾಗಿದೆ. ನಮ್ಮ "ಡಬಲ್-ಎಂಜಿನ್" ಸರ್ಕಾರ, ತ್ವರಿತ ಕಾರ್ಮಿಕ ಸುಧಾರಣೆಗಳು ಮತ್ತು "ಬುಲೆಟ್ ಟ್ರೈನ್" ವೇಗದಲ್ಲಿ ಅಭಿವೃದ್ಧಿಯನ್ನು ಚಾಲನೆ ಮಾಡುವ ಬಲವಾದ ಕೇಂದ್ರ-ರಾಜ್ಯ ಸಮನ್ವಯಕ್ಕೆ ಮನ್ನಣೆ ನೀಡುತ್ತಿದೆ. ವಿಶಾಖಪಟ್ಟಣಂನಲ್ಲಿರುವ ಗೂಗಲ್‌ನ 15 ಬಿಲಿಯನ್ ಡಾಲರ್ ಡೇಟಾ ಸೆಂಟರ್ ಅಮೆರಿಕದ ಹೊರಗೆ ಭಾರತದ ಅತಿದೊಡ್ಡ ಯೋಜನೆಯಾಗಿದೆ ಮತ್ತು 1.8 ಲಕ್ಷಕ್ಕೂ ಹೆಚ್ಚು ಉದ್ಯೋಗಗಳನ್ನು ಸೃಷ್ಟಿಸುತ್ತದೆ ಎಂದು ಹೇಳಿದರು.