ಇಂದೋರ್: ಇಂದೋರ್‌ನಲ್ಲಿ ಬುಧವಾರ ರಾತ್ರಿ (ಮಂಗಳಮುಖಿ) ಟ್ರಾನ್ಸ್‌ಜೆಂಡರ್ ಸಮುದಾಯದ ಸುಮಾರು 25 ಜನರು ಫಿನಾಯಿಲ್ ಸೇವಿಸಿದ್ದು, ತಕ್ಷಣವೇ ಅವರನ್ನು ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಗಿದೆ.
ನಮ್ಮ ಆಸ್ಪತ್ರೆಗೆ ಟ್ರಾನ್ಸ್‌ಜೆಂಡರ್ ಸಮುದಾಯದ ಸುಮಾರು 25 ಜನರನ್ನು ದಾಖಲಿಸಲಾಗಿದೆ. ಅವರು ಫಿನಾಯಿಲ್ ಸೇವಿಸಿದ್ದಾರೆಂದು ಹೇಳಿಕೊಂಡಿದ್ದಾರೆ, ಆದರೆ ಇದನ್ನು ತಕ್ಷಣವೇ ದೃಢಪಡಿಸಲು ಸಾಧ್ಯವಿಲ್ಲ ಎಂದು ಸರ್ಕಾರಿ ಸ್ವಾಮ್ಯದ ಮಹಾರಾಜ ಯಶವಂತರಾವ್ ಆಸ್ಪತ್ರೆಯ (ಎಂವೈಎಚ್) ಉಸ್ತುವಾರಿ ಸೂಪರಿಂಟೆಂಡೆಂಟ್-ಇನ್-ಚಾರ್ಜ್ ಡಾ. ಬಸಂತ್ ಕುಮಾರ್ ನಿಂಗ್ವಾಲ್ ತಿಳಿಸಿದ್ದಾರೆ.
ಮಂಗಳಮುಖಿ ಸಮುದಾಯದ ವ್ಯಕ್ತಿಗಳ ಸಾಮೂಹಿಕ ಆತ್ಮಹತ್ಯೆ ಯತ್ನಕ್ಕೆ ಕಾರಣವೇನು ಎಂಬುದು ಇದುವರೆಗೂ ತಿಳಿದು ಬಂದಿಲ್ಲ. ಘಟನೆಯ ಬಗ್ಗೆ ಕೇಳಿದಾಗ, ಹೆಚ್ಚುವರಿ ಉಪ ಪೊಲೀಸ್ ಆಯುಕ್ತ ರಾಜೇಶ್ ದಂಡೋಟಿಯಾ, ತನಿಖೆಯ ನಂತರವೇ ಏಕೆ ಎಂಬುದು ಸ್ಪಷ್ಟವಾಗುತ್ತದೆ ಎಂದು ಹೇಳಿದರು.
ಘಟನೆ ಕುರಿತು ತನಿಖೆ ನಡೆಯುತ್ತಿದೆ ಎಂದು ಅವರು ತಿಳಿಸಿದ್ದಾರೆ. ಈ ಘಟನೆಯು ಮಂಗಳಮುಖಿಯರ ಸಮುದಾಯದ ಎರಡು ಸ್ಥಳೀಯ ಗುಂಪುಗಳ ನಡುವಿನ ವಿವಾದಕ್ಕೆ ಸಂಬಂಧಿಸಿರಬಹುದು ಎಂದು ಮತ್ತೊಬ್ಬ ಪೊಲೀಸ್ ಅಧಿಕಾರಿ ಹೇಳಿದ್ದಾರೆ.