ನವದೆಹಲಿ: 2025-26ನೇ ಸಾಲಿಗೆ ಕರ್ನಾಟಕ ಮತ್ತು ಮಹಾರಾಷ್ಟ್ರ ಕ್ಕೆ ಎಸ್.ಡಿ.ಆರ್.ಎಫ್ ನ ಎರಡನೇ ಕಂತಾಗಿ ರೂ.1,950.80 ಕೋಟಿ ಮುಂಗಡ ಬಿಡುಗಡೆಗೆ ಕೇಂದ್ರ ಸರ್ಕಾರ ಅನುಮೋದನೆ ನೀಡಿದೆ.
ಈ ವರ್ಷದ ನೈಋತ್ಯ ಮುಂಗಾರಿನಲ್ಲಿ ಅತಿ ಹೆಚ್ಚು ಮಳೆ ಮತ್ತು ಪ್ರವಾಹದಿಂದ ಹಾನಿಗೊಳಗಾದ ಜನರಿಗೆ ತಕ್ಷಣದ ಪರಿಹಾರ ನೆರವು ನೀಡಲು ಕರ್ನಾಟಕ ಮತ್ತು ಮಹಾರಾಷ್ಟ್ರ ರಾಜ್ಯಗಳಿಗೆ ಒಟ್ಟು ರೂ.1,950.80 ಕೋಟಿ ಬಿಡುಗಡೆಗೆ ಕೇಂದ್ರ ಗೃಹ ಮತ್ತು ಸಹಕಾರ ಸಚಿವ ಅಮಿತ್ ಶಾ ಅನುಮೋದನೆ ನೀಡಿರುವುದಾಗಿ ಕೇಂದ್ರ ಗೃಹ ವ್ಯವಹಾರಗಳ ಸಚಿವಾಲಯ ಮಾಹಿತಿ ನೀಡಿದೆ.
ಒಟ್ಟು ರೂ.1,950.80 ಕೋಟಿಯಲ್ಲಿ ಕರ್ನಾಟಕಕ್ಕೆ 384.40 ಕೋಟಿ ರೂ. ಮತ್ತು ಮಹಾರಾಷ್ಟ್ರಕ್ಕೆ 1,566.40 ಕೋಟಿ ರೂ. ಬಿಡುಗಡೆಗೆ ಅನುಮೋದಿಸಲಾಗಿದೆ.
ಪ್ರವಾಹ, ಭೂಕುಸಿತ ಮತ್ತು ಮೇಘಸ್ಫೋಟದಿಂದ ಹಾನಿಗೊಳಗಾದ ರಾಜ್ಯಗಳಿಗೆ ಸಾಧ್ಯವಿರುವ ಎಲ್ಲ ಸಹಾಯವನ್ನು ಒದಗಿಸಲು ಕೇಂದ್ರ ಸರ್ಕಾರ ಸಂಪೂರ್ಣವಾಗಿ ಬದ್ಧವಾಗಿದೆ ಎಂದು ಕೇಂದ್ರ ಗೃಹ ವ್ಯವಹಾರಗಳ ಸಚಿವಾಲಯ ಹೇಳಿದೆ.
ಈ ವರ್ಷ ಕೇಂದ್ರ ಸರ್ಕಾರವು ಈಗಾಗಲೇ ಎಸ್.ಡಿ.ಆರ್.ಎಫ್ ಅಡಿಯಲ್ಲಿ 27 ರಾಜ್ಯಗಳಿಗೆ ₹13,603.20 ಕೋಟಿ ಮತ್ತು ಎನ್.ಡಿ.ಆರ್.ಎಫ್ ಅಡಿಯಲ್ಲಿ 15 ರಾಜ್ಯಗಳಿಗೆ ₹2,189.28 ಕೋಟಿ ಬಿಡುಗಡೆ ಮಾಡಿದೆ. ಇದಲ್ಲದೆ, ರಾಜ್ಯ ವಿಪತ್ತು ತಗ್ಗಿಸುವಿಕೆ ನಿಧಿಯಿಂದ (ಎಸ್.ಡಿ.ಎಂ.ಎಫ್) 21 ರಾಜ್ಯಗಳಿಗೆ ₹4,571.30 ಕೋಟಿ ಮತ್ತು ರಾಷ್ಟ್ರೀಯ ವಿಪತ್ತು ತಗ್ಗಿಸುವಿಕೆ ನಿಧಿಯಿಂದ (ಎನ್.ಡಿ.ಎಂ.ಎಫ್) 9 ರಾಜ್ಯಗಳಿಗೆ ₹372.09 ಕೋಟಿ ಬಿಡುಗಡೆ ಮಾಡಲಾಗಿದೆ.
ಕೇಂದ್ರ ಸರ್ಕಾರವು ಪ್ರವಾಹ, ಭೂಕುಸಿತ, ಮೇಘಸ್ಫೋಟದಿಂದ ಬಾಧಿತವಾದ ರಾಜ್ಯಗಳಿಗೆ ಅಗತ್ಯವಿರುವ ಎನ್.ಡಿ.ಆರ್.ಎಫ್ ತಂಡಗಳು, ಸೇನಾ ತಂಡಗಳು ಮತ್ತು ವಾಯುಪಡೆಯ ಬೆಂಬಲ ಸೇರಿದಂತೆ ಎಲ್ಲಾ ಲಾಜಿಸ್ಟಿಕ್ ಸಹಾಯವನ್ನು ಒದಗಿಸಿದೆ. ಈ ವರ್ಷದ ಮುಂಗಾರು ಸಮಯದಲ್ಲಿ, ರಕ್ಷಣಾ ಮತ್ತು ಪರಿಹಾರ ಕಾರ್ಯಾಚರಣೆಗಳಿಗಾಗಿ 30 ರಾಜ್ಯಗಳು/ಕೇಂದ್ರಾಡಳಿತ ಪ್ರದೇಶಗಳಲ್ಲಿ ಗರಿಷ್ಠ 199 ಎನ್.ಡಿ.ಆರ್.ಎಫ್ ತಂಡಗಳನ್ನು ನಿಯೋಜಿಸಲಾಗಿತ್ತು.