ಚಿತ್ತೂರು: ಇಂದು ರೀಲ್ಸ್ ಎನ್ನುವ ಹುಚ್ಚು ಬಹುತೇಕರನ್ನು ಆವರಿಸಿಕೊಂಡು ಬಿಟ್ಟಿದೆ. ದಿಢೀರ್ ಎಂದು ಫೇಮಸ್ ಆಗಲು ಕಾಣುವ ಮಾರ್ಗ ಇದೊಂದೇ ಆಗಿ ಬಿಟ್ಟಿದೆ. ಇದರಿಂದ ರೀಲ್ಸ್ ಮಾಡುವವರ ಸಂಖ್ಯೆ ಹೆಚ್ಚುತ್ತಿದ್ದಂತೆಯೇ, ಕಾಂಪಿಟೇಷನ್ ಕೂಡ ಜಾಸ್ತಿಯಾಗುತ್ತಿದೆ.
ಅದಕ್ಕಾಗಿಯೇ ಕೆಲವರು ವಿಭಿನ್ನ ರೀತಿಯಲ್ಲಿ ರೀಲ್ಸ್ ಮಾಡುವ ತವಕದಲ್ಲಿ ಇರುತ್ತಾರೆ. ಇದೇ ಕಾರಣಕ್ಕೆ ಎಷ್ಟೋ ಮಂದಿ ಅಪಾಯಕಾರಿ ಎನ್ನುವ ರೀಲ್ಸ್ ಮಾಡಿ ಜೀವ ಕಳೆದುಕೊಂಡವರಿದ್ದಾರೆ, ಕೈ-ಕಾಲು ಮುರಿದುಕೊಂಡು ನರಳುತ್ತಿರುವವರೂ ಇದ್ದಾರೆ. ಇಂಥವರ ಬಗ್ಗೆ ಪ್ರತಿನಿತ್ಯ ಸುದ್ದಿಯಾಗುತ್ತಲೇ ಇರುತ್ತದೆ.
ರೈಲು ಹಳಿಗಳ ಮೇಲೆ ನಿಲ್ಲುವುದು, ಬೆಟ್ಟದ ತುದಿಯಲ್ಲಿ ಹೋಗುವುದು... ಹೀಗೆ ರೀಲ್ಸ್ ಹುಚ್ಚಿಗೆ ಬಲಿಯಾಗಿ ಪ್ರಾಣ ಕಳೆದುಕೊಳ್ಳುವವರು ಒಂದೆಡೆಯಾದರೆ, ಚಿತ್ರ-ವಿಚಿತ್ರವಾಗಿ ರೀಲ್ಸ್ ಮಾಡಲು ಹೋಗಿ ಥಳಿತಕ್ಕೆ ಒಳಗಾಗುವವರೂ ಇದ್ದಾರೆ.
ಇದೀಗ ಅಂಥದ್ದೇ ಒಂದು ಭಯಾನಕ ವಿಡಿಯೋ ವೈರಲ್ ಆಗಿದೆ. ಯುವಕನೊಬ್ಬ ಜಲಪಾತಕ್ಕೆ ಬೀಳುವ ವಿಡಿಯೋ ಇದಾಗಿದೆ. ಜಲಪಾತಕ್ಕೆ ಬಿದ್ದ ಯುವಕ ಸಾವನ್ನಪ್ಪಿದ್ದಾರೆ. ಯುವಕ ಜಲಪಾತಕ್ಕೆ ಬೀಳುತ್ತಿದ್ದಂತೆಯೇ ಮುಳುಗಿ ಸಾವನ್ನಪ್ಪಿದ್ದಾರೆ.
ಚಿತ್ತೂರು ಜಿಲ್ಲೆಯ ಪಲಮನೇರು ಗ್ರಾಮೀಣ ಮಂಡಲದಲ್ಲಿರುವ ರೇವು ಜಲಪಾತದಲ್ಲಿ ಈ ದುರ್ಘಟನೆ ಸಂಭವಿಸಿದೆ ಎನ್ನಲಾಗಿದೆ.
ಮೃತ ಯುವಕನನ್ನು ಯೂನಿಸ್ (23) ಎಂದು ಗುರ್ತಿಸಲಾಗಿದೆ. ವೀಡಿಯೊ ಚಿತ್ರೀಕರಣ ಮಾಡುವಾಗ ಯುವಕ ತನ್ನ ಸ್ನೇಹಿತರ ಮುಂದೆಯೇ ನೀರಿನಲ್ಲಿ ಮುಳುಗಿ ಸಾವನ್ನಪ್ಪಿದ್ದಾನೆ. ಗುರುವಾರ ಸಂಜೆ ಯುವಕ ನಾಪತ್ತೆಯಾಗಿದ್ದು, ಮೂರು ದಿನಗಳು ಕಳೆದರೂ ಇನ್ನೂ ಮೃತದೇಹ ಪತ್ತೆಯಾಗಿಲ್ಲ ಎಂದು ತಿಳಿದುಬಂದಿದೆ.