ಕಾನ್ಪುರ: ಉತ್ತರ ಪ್ರದೇಶದ ಪಟಾಕಿ ಮಾರುಕಟ್ಟೆಯಲ್ಲಿ ಭೀಕರ ಅಗ್ನಿ ಅವಘಡ ಸಂಭವಿಸಿದ್ದು ಬರೊಬ್ಬರಿ 70 ಪಟಾಕಿ ಅಂಗಡಿಗಳು ಸುಟ್ಟು ಭಸ್ಮವಾಗಿವೆ.
ಉತ್ತರ ಪ್ರದೇಶದ ಫತೇಪುರ ಜಿಲ್ಲೆಯ ಎಂಜಿ ಕಾಲೇಜು ಮೈದಾನದಲ್ಲಿರುವ ತಾತ್ಕಾಲಿಕ ಪಟಾಕಿ ಮಾರುಕಟ್ಟೆಯಲ್ಲಿ ಭಾನುವಾರ ಸಂಭವಿಸಿದ ಭಾರಿ ಬೆಂಕಿ ಅವಘಡದಲ್ಲಿ 70ಕ್ಕೂ ಹೆಚ್ಚು ಅಂಗಡಿಗಳು ಸುಟ್ಟು ಭಸ್ಮವಾಗಿದ್ದು, ಡಜನ್ಗಟ್ಟಲೆ ದ್ವಿಚಕ್ರ ವಾಹನಗಳು ಸುಟ್ಟು ಕರಕಲಾಗಿವೆ.
ಬೆಂಕಿಯಲ್ಲಿ ಹಲವಾರು ಕೋಟಿ ರೂಪಾಯಿ ಮೌಲ್ಯದ ಪಟಾಕಿಗಳು ಸುಟ್ಟು ಭಸ್ಮವಾಗಿವೆ, ಹಲವಾರು ಜನರಿಗೆ ಸಣ್ಣಪುಟ್ಟ ಸುಟ್ಟ ಗಾಯಗಳಾಗಿವೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಪ್ರತ್ಯಕ್ಷದರ್ಶಿಗಳ ಪ್ರಕಾರ, ಮಧ್ಯಾಹ್ನ 12.30 ರ ಸುಮಾರಿಗೆ ಒಂದು ಪಟಾಕಿ ಅಂಗಡಿಯಲ್ಲಿ ಶಾರ್ಟ್ ಸರ್ಕ್ಯೂಟ್ ನಿಂದ ಬೆಂಕಿ ಕಾಣಿಸಿಕೊಂಡಿದೆ. ಬಳಿಕ ಬೆಂಕಿಯು ಪಕ್ಕದ ಅಂಗಡಿಗಳಿಗೆ ಹರಡಿದ್ದು ನೋಡ ನೋಡುತ್ತಲೇ ಎಲ್ಲ ಅಂಗಡಿಗಳಿಗೂ ಬೆಂಕಿಯ ಕೆನ್ನಾಲಿಗೆ ವೇಗವಾಗಿ ಹರಡಿದೆ.
ಎಲ್ಲ ಅಂಗಡಿಗಳೂ ಪಟಾಕಿಗಳಿಂದ ತುಂಬಿತ್ತು, ಇದರಿಂದಾಗಿ ಸರಣಿ ಸ್ಫೋಟಗಳು ಸಂಭವಿಸಿದವು. ವ್ಯಾಪಾರಿಗಳು ಮತ್ತು ಗ್ರಾಹಕರು ಸುರಕ್ಷಿತ ಸ್ಥಳಕ್ಕೆ ಹೋಗಲು ಪರದಾಡುತ್ತಿದ್ದಂತೆ ಮಾರುಕಟ್ಟೆಯಲ್ಲಿ ಭೀತಿ ಆವರಿಸಿತು ಎಂದು ಹೇಳಿದ್ದಾರೆ.
2 ಕಿ.ಮೀ ದೂರಕ್ಕೆ ವ್ಯಾಪಿಸಿದ ಹೊಗೆ, ಸ್ಫೋಟದ ಶಬ್ಧ
ಬೆಂಕಿ ತೀವ್ರತೆ ಎಷ್ಟಿತ್ತು ಎಂದರೆ ಸ್ಫೋಟದ ಶಬ್ದ ಬರೊಬ್ಬರಿ 2 ಕಿ.ಮೀ ದೂರದವರೆಗೂ ಕೇಳಿಸುತ್ತಿತ್ತು. ಆಗಸದಲ್ಲಿ ಭಾರಿ ಪ್ರಮಾಣದ ಹೊಗೆ ಆವರಿಸಿತ್ತು. ಸುತ್ತಮುತ್ತಲ ಜನರು ಭಯಭೀತರಾಗಿ ಹೊರಗೆ ಬಂದ ದೃಶ್ಯ ಸಾಮಾನ್ಯವಾಗಿತ್ತು.
ಬೆಂಕಿ ನಂದಿಸುವುದು ಮೊದಲ ಆದ್ಯತೆ
ಇನ್ನು ಈ ಕುರಿತು ಮಾತನಾಡಿರುವ ಫತೇಪುರ ಎಸ್ಪಿ ಅನೂಪ್ ಕುಮಾರ್ ಸಿಂಗ್ ಅವರು ಇಲ್ಲಿಯವರೆಗೆ ಯಾವುದೇ ಸಾವುನೋವುಗಳು ವರದಿಯಾಗಿಲ್ಲ ಎಂದು ಹೇಳಿದ್ದಾರೆ. ಅಂತೆಯೇ "ಬೆಂಕಿಯನ್ನು ಸಂಪೂರ್ಣವಾಗಿ ನಿಯಂತ್ರಣಕ್ಕೆ ತರುವುದು ನಮ್ಮ ಮೊದಲ ಆದ್ಯತೆಯಾಗಿದೆ. ಬೆಂಕಿಯ ಕಾರಣವನ್ನು ತನಿಖೆ ಮಾಡಲಾಗುತ್ತಿದೆ. ನಿರ್ಲಕ್ಷ್ಯ ವಹಿಸಿದವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು" ಎಂದು ಹೇಳಿದರು.
ಮುಖ್ಯ ಅಗ್ನಿಶಾಮಕ ಅಧಿಕಾರಿ (ಸಿಎಫ್‌ಒ) ಜೈವೀರ್ ಸಿಂಗ್ ಮಾತನಾಡಿ, ಬೆಂಕಿಯು 15 ರಿಂದ 20 ನಿಮಿಷಗಳಲ್ಲಿ ಇಡೀ ಮಾರುಕಟ್ಟೆಯನ್ನು ಆವರಿಸಿತು. ಸುಮಾರು 65-70 ಅಂಗಡಿಗಳು ಮತ್ತು ಎರಡು ಡಜನ್‌ಗೂ ಹೆಚ್ಚು ದ್ವಿಚಕ್ರ ವಾಹನಗಳು ಸಂಪೂರ್ಣವಾಗಿ ಸುಟ್ಟುಹೋಗಿವೆ.
ಅದೃಷ್ಟವಶಾತ್, ಇಲ್ಲಿಯವರೆಗೆ ಯಾವುದೇ ಸಾವುನೋವುಗಳು ವರದಿಯಾಗಿಲ್ಲ. ಅಗ್ನಿಶಾಮಕ ದಳದವರು ಬೆಂಕಿಯನ್ನು ನಂದಿಸಲು ಮರಳು, ಬಕೆಟ್ ನೀರು ಮತ್ತು ನಂದಕಗಳನ್ನು ಬಳಸಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಕೂಗಳತೆ ದೂರದಲ್ಲಿದ್ದ ಅಗ್ನಿಶಾಮಕ ಠಾಣೆ
ಆದಾಗ್ಯೂ, ಅಗ್ನಿಶಾಮಕ ಠಾಣೆ ಕೇವಲ 200 ಮೀಟರ್ ದೂರದಲ್ಲಿದ್ದರೂ, ಬೆಂಕಿ ಸಂಭವಿಸಿದ ಸುಮಾರು 20 ನಿಮಿಷಗಳ ನಂತರ ಅಗ್ನಿಶಾಮಕ ದಳದವರು ಸ್ಥಳಕ್ಕೆ ತಲುಪಿದ್ದಾರೆ ಎಂದು ಮಾರಾಟಗಾರರು ಮತ್ತು ಅಂಗಡಿಯವರು ಆರೋಪಿಸಿದ್ದಾರೆ.
"ತಾತ್ಕಾಲಿಕ ಮಾರುಕಟ್ಟೆ ಕೇವಲ ಅರ್ಧ ಗಂಟೆ ಮೊದಲು ಕಾರ್ಯನಿರ್ವಹಿಸಲು ಪ್ರಾರಂಭಿಸಿತ್ತು. 15 ನಿಮಿಷಗಳಲ್ಲಿ ಎಲ್ಲವೂ ನಾಶವಾಯಿತು. ನಾವು ಪ್ರಾಣಾಪಾಯದಿಂದ ಪಾರಾಗುವಲ್ಲಿ ಯಶಸ್ವಿಯಾಗಿದ್ದೇವೆ" ಎಂದು ಸ್ಥಳೀಯ ವ್ಯಾಪಾರಿ ಸತೀಶ್ ಹೇಳಿದರು.
ಮತ್ತೊಬ್ಬ ಅಂಗಡಿಯವರು ತಮ್ಮ ಅಂಗಡಿಯಲ್ಲಿ 8 ಲಕ್ಷ ಹೂಡಿಕೆ ಮಾಡಿದ್ದೆವು. ಈಗ, ಎಲ್ಲಾ ಸರಕುಗಳು ಸುಟ್ಟು ಹೋಗಿವೆ. ನಾವು ಶೂನ್ಯರಾಗಿದ್ದಾವೆ ಎಂದು ಅಳಲು ತೋಡಿಕೊಂಡಿದ್ದಾರೆ.
ದುರಂತದ ತನಿಖೆಗೆ ಆದೇಶ
ಇನ್ನು ಎಸ್ಪಿ ಜೊತೆ ಸ್ಥಳಕ್ಕೆ ಧಾವಿಸಿದ ಜಿಲ್ಲಾ ಮ್ಯಾಜಿಸ್ಟ್ರೇಟ್ ರವೀಂದ್ರ ಸಿಂಗ್, "ಅಗ್ನಿ ದುರಂತದ ನಿಖರವಾದ ಕಾರಣವನ್ನು ನಿರ್ಧರಿಸಲು ಮತ್ತು ನಷ್ಟವನ್ನು ನಿರ್ಣಯಿಸಲು ತನಿಖೆಗೆ ಆದೇಶಿಸಲಾಗಿದೆ. ನಿರ್ಲಕ್ಷ್ಯ ವಹಿಸಿದವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು" ಎಂದು ಹೇಳಿದರು.
ಏತನ್ಮಧ್ಯೆ, ಬಿಜೆಪಿ ಜಿಲ್ಲಾಧ್ಯಕ್ಷ ಮುಖ್ಲಾಲ್ ಪಾಲ್ ಈ ಘಟನೆಯನ್ನು "ದುರದೃಷ್ಟಕರ" ಎಂದು ಕರೆದರು ಮತ್ತು ಪ್ರತಿಕ್ರಿಯೆಯಲ್ಲಿನ ವಿಳಂಬಕ್ಕೆ ಹೊಣೆಗಾರಿಕೆಯನ್ನು ಒತ್ತಾಯಿಸಿದರು. ಅಧಿಕಾರಿಗಳು ಪೀಡಿತ ಅಂಗಡಿಯವರಿಗೆ ಸಾಧ್ಯವಿರುವ ಎಲ್ಲ ಸಹಾಯವನ್ನು ಮಾಡುತ್ತೇವೆ ಭರವಸೆ ನೀಡಿದ್ದಾರೆ.