ನವದೆಹಲಿ: 'ಆಪರೇಷನ್ ಸಿಂಧೂರ್' ನಂತರ, ಪಾಕಿಸ್ತಾನ ಆಕ್ರಮಿತ ಕಾಶ್ಮೀರ (PoK) ಮತ್ತು ಸುತ್ತಮುತ್ತಲಿನ ಪ್ರದೇಶಗಳಲ್ಲಿ ನಿಯಂತ್ರಣ ರೇಖೆಯ (LOC) ಇನ್ನೊಂದು ಬದಿಯಲ್ಲಿ ಭಯೋತ್ಪಾದಕ ತರಬೇತಿ ಮತ್ತು ಉಡಾವಣಾ ಪ್ಯಾಡ್ ಶಿಬಿರಗಳನ್ನು ಮತ್ತೆ ಮರು ಸಂಘಟಿಸಲಾಗುತ್ತಿದೆ. ಈ ಶಿಬಿರಗಳನ್ನು ಈಗ ಗಮನಾರ್ಹವಾಗಿ ಸಣ್ಣ ಪ್ರಮಾಣದಲ್ಲಿ ಆಯೋಜಿಸಲಾಗುತ್ತಿದ್ದು ಮೊದಲಿಗಿಂತ ಹೆಚ್ಚು ತಾಂತ್ರಿಕವಾಗಿ ಮುಂದುವರಿದಿವೆ. ಅವುಗಳನ್ನು ಡ್ರೋನ್ ಕಣ್ಗಾವಲು ಮತ್ತು ವಾಯುಪಡೆಯ ದಾಳಿಗಳನ್ನು ತಪ್ಪಿಸಲು ವಿನ್ಯಾಸಗೊಳಿಸಲಾಗಿದೆ ಎಂದು ಗುಪ್ತಚರ ಸಂಸ್ಥೆಗಳ ಮೂಲಗಳು ತಿಳಿಸಿವೆ.
ಹೊಸ ಶಿಬಿರಗಳಲ್ಲಿ 100ಕ್ಕಿಂತ ಕಡಿಮೆ ಭಯೋತ್ಪಾದಕರಿದ್ದಾರೆ. ಆದ್ದರಿಂದ ಯಾವುದೇ ಒಂದು ಸೌಲಭ್ಯದ ನಾಶವು ಅವರ ಯೋಜನೆಯ ಮೇಲೆ ಗಮನಾರ್ಹವಾಗಿ ಪರಿಣಾಮ ಬೀರುವುದಿಲ್ಲ ಎಂದು ಗುಪ್ತಚರ ಸಂಸ್ಥೆಗಳು ಕೇಂದ್ರ ಗೃಹ ಸಚಿವಾಲಯಕ್ಕೆ (MHA) ನೀಡಿದ ವರದಿಯಲ್ಲಿ ತಿಳಿಸಿದೆ. ಗುಪ್ತಚರ ವರದಿಯ ನಂತರ ಗಡಿಯುದ್ದಕ್ಕೂ ಭಯೋತ್ಪಾದನೆಯನ್ನು ಹರಡುವುದು ಇನ್ನೂ ನಿಜವಾದ ಸಾಧ್ಯತೆಯಾಗಿರುವುದರಿಂದ, ಗೃಹ ಸಚಿವಾಲಯವು ಭದ್ರತಾ ಸಂಸ್ಥೆಗಳಿಗೆ ಹೆಚ್ಚಿನ ಜಾಗರೂಕತೆಯಲ್ಲಿರಲು ಮತ್ತು ಅವರ ಕಾರ್ಯಾಚರಣೆಯ ಕಾರ್ಯತಂತ್ರಗಳನ್ನು ಪುನರ್ರಚಿಸಲು ಎಚ್ಚರಿಸಿದೆ ಎಂದು ಮೂಲಗಳು ತಿಳಿಸಿವೆ.
ಮೂಲಗಳ ಪ್ರಕಾರ, ಲುನಿ, ಪುಟ್ವಾಲ್, ಟಿಪ್ಪು ಪೋಸ್ಟ್, ಜಮಿಲ್ ಪೋಸ್ಟ್, ಉಮ್ರಾನ್ವಾಲಿ, ಚಾಪ್ರಾರ್ ಫಾರ್ವರ್ಡ್, ಛೋಟಾ ಚಕ್ ಮತ್ತು ಜಂಗ್ಲೋರಾ ಮುಂತಾದ ಪ್ರದೇಶಗಳಲ್ಲಿ ಈ ಹಿಂದೆ ನಾಶಪಡಿಸಲಾಗಿದ್ದ ಶಿಬಿರಗಳನ್ನು ಈಗ ಪುನಃ ಸಕ್ರಿಯಗೊಂಡಿವೆ. ಎಂದಿನಂತೆ, ಅಸ್ತಿತ್ವದಲ್ಲಿರುವ ಹೆಚ್ಚಿನ ಭಯೋತ್ಪಾದಕ ಸಂಘಟನೆಗಳು ಈ ಶಿಬಿರಗಳನ್ನು ಯೋಜಿಸುತ್ತಿದ್ದು ಕಾರ್ಯಗತಗೊಳಿಸುತ್ತಿವೆ. ಅವುಗಳಲ್ಲಿ ಲಷ್ಕರ್-ಎ-ತೈಬಾ (ಎಲ್‌ಇಟಿ), ಜೈಶ್-ಎ-ಮೊಹಮ್ಮದ್ (ಜೆಇಎಂ), ಹಿಜ್ಬುಲ್ ಮುಜಾಹಿದ್ದೀನ್ (ಎಚ್‌ಎಂ) ಮತ್ತು ದಿ ರೆಸಿಸ್ಟೆನ್ಸ್ ಫ್ರಂಟ್ (ಟಿಆರ್‌ಎಫ್) ಸೇರಿವೆ ಎಂದು ಮೂಲಗಳು ತಿಳಿಸಿವೆ.ಭಯೋತ್ಪಾದಕ ಸಂಘಟನೆಗಳ ಚಟುವಟಿಕೆಗಳಿಗೆ ಪಾಕಿಸ್ತಾನಿ ಸೇನೆ ಮತ್ತು ಐಎಸ್‌ಐ (ಇಂಟರ್-ಸರ್ವೀಸಸ್ ಇಂಟೆಲಿಜೆನ್ಸ್) ಸಂಪೂರ್ಣ ಬೆಂಬಲ ಸಿಗುತ್ತಿದೆ ಎಂದು ಗುಪ್ತಚರ ಮೂಲಗಳು ಮತ್ತೊಮ್ಮೆ ದೃಢಪಡಿಸಿವೆ.
ಏತನ್ಮಧ್ಯೆ, 'ಆಪರೇಷನ್ ಸಿಂಧೂರ್' ನಂತರ, ಭದ್ರತಾ ಪಡೆಗಳು ಆಧುನಿಕ ತಂತ್ರಜ್ಞಾನದ ಬಳಕೆಯನ್ನು ತೀವ್ರಗೊಳಿಸಿದ್ದು ಡ್ರೋನ್‌ಗಳು, ಉಪಗ್ರಹ ಚಿತ್ರಗಳು ಮತ್ತು ಕೃತಕ ಬುದ್ಧಿಮತ್ತೆ (AI) ಸಹಾಯದಿಂದ ಎಲ್‌ಒಸಿಯ ಉದ್ದಕ್ಕೂ ಪ್ರತಿಯೊಂದು ಚಟುವಟಿಕೆಯನ್ನು ಮೇಲ್ವಿಚಾರಣೆ ಮಾಡಲಾಗುತ್ತಿದೆ ಎಂದು ಗಡಿ ಭದ್ರತಾ ಪಡೆ (ಬಿಎಸ್‌ಎಫ್) ಯ ಹಿರಿಯ ಅಧಿಕಾರಿಗಳು ತಿಳಿಸಿದ್ದಾರೆ.