ಭೋಪಾಲ್: ಇತ್ತೀಚಿನ ದಿನಗಳಲ್ಲಿ ವ್ಯಾಪಕ ಸುದ್ದಿಗೆ ಗ್ರಾಸವಾಗುತ್ತಿರುವ ಕ್ಯಾಲ್ಸಿಯಂ ಕಾರ್ಬೈಡ್ ಗನ್ ಗಳಿಂದಾಗಿ ಬರೊಬ್ಬರಿ 60 ಮಕ್ಕಳು ಗಾಯಗೊಂಡಿದ್ದು, ಕನಿಷ್ಠ 14 ಮಕ್ಕಳು ಕಣ್ಣು ಕಳೆದುಕೊಂಡಿದ್ದಾರೆ ಎಂದು ತಿಳಿದುಬಂದಿದೆ.
ದೀಪಾವಳಿ ಹಬ್ಬದ ಸಂಭ್ರಮದಲ್ಲಿ ವ್ಯಾಪಕ ವೈರಲ್ ಆಗುತ್ತಿರುವ ಕ್ಯಾಲ್ಸಿಯಂ ಕಾರ್ಬೈಡ್ ಗನ್ ಗಳನ್ನು ಬಳಕೆ ಮಾಡಿದ್ದರಿಂದ ಮಧ್ಯ ಪ್ರದೇಶ ರಾಜಧಾನಿ ಭೋಪಾಲ್ ನಲ್ಲಿ 60ಕ್ಕೂ ಹೆಚ್ಚು ಮಕ್ಕಳು ಗಾಯಗೊಂಡಿದ್ದಾರೆ. ಈ ಪೈಕಿ ಕನಿಷ್ಛ 14 ಮಕ್ಕಳು ಕಣ್ಣುಕಳೆದುಕೊಂಡಿದ್ದಾರೆ ಎಂದು ವರದಿಯಾಗಿದೆ.
ಗಾಯಾಳು ಮಕ್ಕಳನ್ನು ಭೋಪಾಲ್ ನ ವಿವಿಧ ಆಸ್ಪತ್ರೆಗಳಿಗೆ ದಾಖಲಿಸಲಾಗಿದೆ. ಅವರಲ್ಲಿ ಹೆಚ್ಚಿನವರು 8 ರಿಂದ 14 ವರ್ಷ ವಯಸ್ಸಿನ ಮಕ್ಕಳು ಎಂದು ಸುದ್ದಿಸಂಸ್ಥೆ ವರದಿ ಮಾಡಿದೆ.
ದೀಪಾವಳಿಯ ಒಂದು ದಿನದ ನಂತರ ಭೋಪಾಲ್‌ನಾದ್ಯಂತ 150 ಕ್ಕೂ ಹೆಚ್ಚು ಕಾರ್ಬೈಡ್ ಗನ್ ಗಾಯಗಳ ಪ್ರಕರಣಗಳು ದಾಖಲಾಗಿವೆ ಎಂದು ಅಧಿಕಾರಿಗಳು ವರದಿ ಮಾಡಿದ್ದಾರೆ.
ಅನೇಕ ಸಂತ್ರಸ್ಥ ಮಕ್ಕಳನ್ನು ಪ್ರಥಮ ಚಿಕಿತ್ಸೆಯ ನಂತರ ಬಿಡುಗಡೆ ಮಾಡಲಾಗಿದ್ದರೂ, ಹಲವಾರು ಮಕ್ಕಳು ಗಂಭೀರ ಗಾಯಗಳೊಂದಿಗೆ ಆಸ್ಪತ್ರೆಗೆ ದಾಖಲಾಗುತ್ತಿದ್ದಾರೆ ಎಂದು ವೈದ್ಯರು ಆತಂಕ ವ್ಯಕ್ತಪಡಿಸಿದ್ದಾರೆ.
ಅತ್ಯಂತ ಅಪಾಯಕಾರಿ ಕಾರ್ಬೈಡ್ ಪೈಪ್ ಗನ್ ಗಳು
ಇನ್ನು ಈ ಹಿಂದೆ ತೋಟಗಳಲ್ಲಿನ ಕೋತಿಗಳನ್ನು ಓಡಿಸಲು ಈ ಕಾರ್ಬೈಡ್ ಪೈಪ್ ಗನ್ ಗಳನ್ನು ಬಳಕೆ ಮಾಡಲಾಗುತ್ತಿತ್ತು. ಇದೀಗ ಇವುಗಳ ಮಾರಾಟ ಹೆಚ್ಚಾದಂತೆ ದೀಪಾವಳಿ ಸಂದರ್ಭದಲ್ಲಿ ಮಕ್ಕಳು ಯಥೇಚ್ಚವಾಗಿ ಖರೀದಿಸುತ್ತಿದ್ದಾರೆ.
ಈ ಬಗ್ಗೆ ಮಾತನಾಡಿರುವ ಮುಖ್ಯ ವೈದ್ಯಕೀಯ ಮತ್ತು ಆರೋಗ್ಯ ಅಧಿಕಾರಿ (ಸಿಎಂಎಚ್‌ಒ) ಡಾ. ಮನೀಶ್ ಶರ್ಮಾ ಅವರು, 'ತಾತ್ಕಾಲಿಕ “ಕಾರ್ಬೈಡ್ ಪೈಪ್ ಬಂದೂಕುಗಳು” ಅತ್ಯಂತ ಅಪಾಯಕಾರಿ' ಎಂದು ಅಭಿಪ್ರಾಯಪಟ್ಟಿದ್ದಾರೆ.
'ಈ ಬಂದೂಕುಗಳಿಂದ ಗಾಯಗೊಂಡ ಸುಮಾರು 60 ಜನರು ಪ್ರಸ್ತುತ ನಗರದಾದ್ಯಂತ ವಿವಿಧ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಅವರ ಜೀವಕ್ಕೆ ಯಾವುದೇ ಅಪಾಯ ಇಲ್ಲದಿದ್ದರೂ, ಕೆಲವು ಗಾಯಗೊಂಡ ವ್ಯಕ್ತಿಗಳು ದೃಷ್ಟಿ ಕಳೆದುಕೊಂಡಿದ್ದಾರೆ, ಆದರೆ ಕೆಲವರು ಮುಖದಲ್ಲಿ ಸುಟ್ಟ ಗಾಯಗಳನ್ನು ಅನುಭವಿಸಿದ್ದಾರೆ' ಎಂದು ಅವರು ಹೇಳಿದರು.
ಪ್ಲಾಸ್ಟಿಕ್ ಪೈಪ್ ಗಳಲ್ಲಿ ತಯಾರಾಗುವ ಗನ್ ಗಳು
ಈ ವಿಶೇಷ ಗನ್ ಗಳನ್ನು ಪ್ಲಾಸ್ಟಿಕ್ ಪೈಪ್, ಗ್ಯಾಸ್ ಲೈಟರ್ ಮತ್ತು ಕ್ಯಾಲ್ಸಿಯಂ ಕಾರ್ಬೈಡ್ ಬಳಸಿ ಒರಟಾಗಿ ಜೋಡಿಸಲಾಗುತ್ತದೆ. ನೀರು ಕ್ಯಾಲ್ಸಿಯಂ ಕಾರ್ಬೈಡ್‌ನೊಂದಿಗೆ ಸಂಪರ್ಕಕ್ಕೆ ಬಂದಾಗ, ಅದು ಅಸಿಟಲೀನ್ ಅನಿಲವನ್ನು ಉತ್ಪಾದಿಸುತ್ತದೆ. ಇದು ಬೆಂಕಿ ಹೊತ್ತಿಕೊಂಡಾಗ ಸ್ಫೋಟಗೊಳ್ಳುತ್ತದೆ.
ಪರಿಣಾಮವಾಗಿ ಉಂಟಾಗುವ ಸ್ಫೋಟವು ಪ್ಲಾಸ್ಟಿಕ್ ಪೈಪ್‌ನ ತುಣುಕುಗಳನ್ನು ಹೆಚ್ಚಿನ ವೇಗದಲ್ಲಿ ಚಲಿಸುವಂತೆ ಮಾಡುತ್ತದೆ. ಈ ವೇಳೆ ಅದನ್ನು ಬಳಸುವವರಿಗೂ ಗಾಯಳಾಗುವ ಸಂಭವವಿರುತ್ತದೆ. ಪ್ರಮುಖವಾಗಿ ಮಕ್ಕಳು ಈ ಗನ್ ಗಳನ್ನು ಅವೈಜ್ಞಾನಿಕವಾಗಿ ಬಳಕೆ ಮಾಡುವುದರಿಂದ ಅವರ ಕಣ್ಣುಗಳು, ಮುಖ ಮತ್ತು ಚರ್ಮಕ್ಕೆ ಶ್ರಾಪ್ನಲ್ ತರಹದ ಗಾಯಗಳನ್ನು ಉಂಟುಮಾಡುತ್ತದೆ ಎಂದು ತಜ್ಞರು ಹೇಳಿದ್ದಾರೆ.
ಅಧಿಕಾರಿಗಳ ವಿರುದ್ಧ ಆಕ್ರೋಶ
ಇನ್ನು ಸಾಮಾನ್ಯವಾಗಿ ಅಪಾಯಕಾರಿಯಾಗುವ ಇಂತಹ ಗನ್ ಗಳ ಮಾರಾಟ ಮಾಡುತ್ತಿದ್ದರೂ ಯಾವುದೇ ಕ್ರಮ ಕೈಗೊಳ್ಳದ ಅಧಿಕಾರಿಗಳ ವಿರುದ್ಧ ಮಕ್ಕಳ ಪೋಷಕರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ. ಈ ಅಪಾಯಕಾರಿ ಸಾಧನಗಳ ಮಾರಾಟಕ್ಕೆ ಅವಕಾಶ ನೀಡಿದ್ದಕ್ಕಾಗಿ ಗಾಯಗೊಂಡ ಮಕ್ಕಳ ಕುಟುಂಬಗಳು ಅಧಿಕಾರಿಗಳನ್ನು ದೂಷಿಸುತ್ತಿದ್ದಾರೆ. ಆದಾಗ್ಯೂ ಕಾರ್ಬೈಡ್ ಗನ್‌ಗಳ ಅಕ್ರಮ ತಯಾರಿಕೆ ಮತ್ತು ಮಾರಾಟದ ಮೇಲೆ ಜಿಲ್ಲಾಡಳಿತ ಕಠಿಣ ಕ್ರಮ ಕೈಗೊಂಡಿದೆ ಎಂದು CMHO ಶರ್ಮಾ ಹೇಳಿದರು.
ಅಕ್ಟೋಬರ್ 18 ರಂದು ನಡೆದ ಸಭೆಯಲ್ಲಿ ಮುಖ್ಯಮಂತ್ರಿ ಮೋಹನ್ ಯಾದವ್, ಮಧ್ಯಪ್ರದೇಶದಾದ್ಯಂತ ಜಿಲ್ಲಾ ಮ್ಯಾಜಿಸ್ಟ್ರೇಟ್ ಮತ್ತು ಪೊಲೀಸ್ ಅಧಿಕಾರಿಗಳಿಗೆ ಅಂತಹ ಸಾಧನಗಳ ಮಾರಾಟವನ್ನು ತಡೆಯುವಂತೆ ಸೂಚನೆ ನೀಡಿದ್ದರು. ಆದಾಗ್ಯೂ, ಈ ನಿರ್ದೇಶನಗಳ ಹೊರತಾಗಿಯೂ, ದೀಪಾವಳಿಯ ಸಮಯದಲ್ಲಿ ಸ್ಥಳೀಯ ಮಾರುಕಟ್ಟೆಗಳಲ್ಲಿ ಈ ಕಾರ್ಬೈಡ್ ಬಂದೂಕುಗಳನ್ನು ವ್ಯಾಪಕವಾಗಿ ಮಾರಾಟ ಮಾಡಲಾಗುತ್ತಿದೆ ಎನ್ನಲಾಗಿದೆ.