ಲಖನೌ: ಉತ್ತರ ಪ್ರದೇಶದ ಮೊರಾದಾಬಾದ್‌ನಲ್ಲಿರುವ ಮದರಸಾ ಆಡಳಿತ ಮಂಡಳಿಯು ಏಳನೇ ತರಗತಿಯ ವಿದ್ಯಾರ್ಥಿನಿಯೊಬ್ಬಳಿಂದ ಕನ್ಯತ್ವ ಪ್ರಮಾಣಪತ್ರವನ್ನು ಕೇಳಿದ್ದು, ತೀವ್ರ ಆಕ್ರೋಶಕ್ಕೆ ಕಾರಣವಾಗಿದೆ.
ವಿದ್ಯಾರ್ಥಿನಿಯ ತಂದೆ ಹೇಳುವಂತೆ, ತನ್ನ ಮಗಳು ಕನ್ಯತ್ವ ಪ್ರಮಾಣಪತ್ರ ನೀಡದಿದ್ದರೆ ಆಕೆಯನ್ನು ಹೊರಹಾಕಿ, ವರ್ಗಾವಣೆ ಪ್ರಮಾಣಪತ್ರವನ್ನು ನೀಡುವುದಾಗಿ ಸಂಸ್ಥೆಯ ಆಡಳಿತ ಮಂಡಳಿ ಬೆದರಿಕೆ ಹಾಕಿದೆ.
ಈ ಸಂಬಂಧ ವಿದ್ಯಾರ್ಥಿನಿಯ ಕುಟುಂಬ ದೂರು ನೀಡಿದ್ದು, ತನಿಖೆ ನಡೆಯುತ್ತಿದೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ. ಆದಾಗ್ಯೂ, ದೂರು ಸಲ್ಲಿಸಿದ ನಂತರ, ವಿದ್ಯಾರ್ಥಿನಿಯ ಕುಟುಂಬ ಸದಸ್ಯರು ತನಿಖೆಯಲ್ಲಿ ಬಾಗಿಯಾಗಿಲ್ಲ ಎಂದು ಪೊಲೀಸ್ ಮೂಲಗಳು ತಿಳಿಸಿವೆ.
ಮೂಲಗಳ ಪ್ರಕಾರ, ಸಂತ್ರಸ್ತೆ ಚಂಡೀಗಢದವರಾಗಿದ್ದು, ಮೊರಾದಾಬಾದ್ ನಗರದ ಪಕ್ಬರಾ ಪ್ರದೇಶದಲ್ಲಿರುವ ಜಾಮಿಯಾ ಅಸಾನುಲ್ ಬನಾತ್ ಬಾಲಕಿಯರ ಕಾಲೇಜಿನಲ್ಲಿ(ಮದರಸಾ) ಅಧ್ಯಯನ ಮಾಡುತ್ತಿದ್ದಾರೆ.
ಮದರಸಾ ಆಡಳಿತ ಮಂಡಳಿಯ ವಿರುದ್ಧ ವಿದ್ಯಾರ್ಥಿನಿಯ ತಂದೆ ಅಕ್ಟೋಬರ್ 14 ರಂದು ಪೊಲೀಸರಿಗೆ ದೂರು ನೀಡಿದ್ದಾರೆ. ಮದರಸಾ ಆಡಳಿತ ಮಂಡಳಿಯು ತಮ್ಮ ಮಗಳ ಚಾರಿತ್ರ್ಯಕ್ಕೆ ಅವಮಾನ ಮಾಡಿದೆ ಎಂದು ವಿದ್ಯಾರ್ಥಿನಿಯ ಕುಟುಂಬ ಪೊಲೀಸರಿಗೆ ತಿಳಿಸಿದೆ.
ನೊಂದ ತಂದೆ ಪೊಲೀಸರು ಈ ಬಗ್ಗೆ ತನಿಖೆ ನಡೆಸಬೇಕು ಮತ್ತು ಸಂಸ್ಥೆಯ ಆಡಳಿತ ಮಂಡಳಿಯ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದ್ದಾರೆ.
ವಿದ್ಯಾರ್ಥಿಯನ್ನು 8ನೇ ತರಗತಿಗೆ ಬಡ್ತಿ ನೀಡಲು ಕುಟುಂಬವು ಮದರಸಾವನ್ನು ಸಂಪರ್ಕಿಸಿದಾಗ, ಆಡಳಿತ ಮಂಡಳಿಯು ಹುಡುಗಿಯ ಕನ್ಯತ್ವ ಪ್ರಮಾಣಪತ್ರವನ್ನು ಸಲ್ಲಿಸುವಂತೆ ಸೂಚಿಸಿದೆ.
ಈ ಘಟನೆಯಿಂದ ನೊಂದ ಕುಟುಂಬವು ಮಗುವಿನೊಂದಿಗೆ ಮನೆಗೆ ಮರಳಿದ್ದು, ನಂತರ, ಮಗುವಿನ ತಂದೆ, ಚಂಡೀಗಢ ನಿವಾಸಿ ಮೊಹಮ್ಮದ್ ಯೂಸುಫ್ ಪೊಲೀಸರಿಗೆ ದೂರು ನೀಡಿದ್ದಾರೆ. ಅಲ್ಲದೆ "ಶಾಲೆಯು ನನ್ನ ಮಗಳಿಗೆ ವೈದ್ಯಕೀಯ ಪರೀಕ್ಷೆಯ ಷರತ್ತು ವಿಧಿಸಿದೆ. ಅವರು ಟಿಸಿ(ವರ್ಗಾವಣೆ ಪ್ರಮಾಣಪತ್ರ) ನೀಡುವ ಹೆಸರಿನಲ್ಲಿ 500 ರೂ.ಗಳನ್ನು ಸಹ ಪಡೆದರು" ಎಂದು ಹೇಳುವ ವಿಡಿಯೋವನ್ನು ಸಹ ಬಿಡುಗಡೆ ಮಾಡಿದ್ದಾರೆ.
ಪಕ್ಬರಾ ಪೊಲೀಸ್ ಠಾಣೆ ಪ್ರದೇಶದ ಲೋಧಿಪುರದಲ್ಲಿರುವ ಮದರಸಾ ವಿರುದ್ಧ ಪೊಲೀಸರಿಗೆ ದೂರು ನೀಡಲಾಗಿದೆ ಎಂದು ನಗರ ಎಸ್‌ಪಿ ರಣ್ ವಿಜಯ್ ಸಿಂಗ್ ಅವರು ಹೇಳಿದ್ದಾರೆ.
“ಮದರಸಾದಲ್ಲಿ ಓದುತ್ತಿರುವ ತನ್ನ ಮಗಳ ಚ್ಯಾರಿತ್ರ್ಯದ ಬಗ್ಗೆ ಮದರಸಾ ಆಡಳಿತ ಮಂಡಳಿಯು ಆಕ್ಷೇಪಾರ್ಹ ಪ್ರಮಾಣಪತ್ರ ಕೇಳಿದೆ ಎಂದು ಚಂಡೀಗಢದ ವ್ಯಕ್ತಿಯೊಬ್ಬರು ದೂರು ನೀಡಿದ್ದಾರೆ” ಎಂದು ಎಸ್‌ಪಿ ತಿಳಿಸಿದ್ದಾರೆ.
“ನಾವು ಈ ವಿಷಯದ ಬಗ್ಗೆ ತನಿಖೆ ಮಾಡುತ್ತಿದ್ದೇವೆ. ತನಿಖೆಯಲ್ಲಿ ಹೊರಬರುವ ಯಾವುದೇ ಸಂಗತಿಗಳ ಆಧಾರದ ಮೇಲೆ ಕ್ರಮ ಕೈಗೊಳ್ಳಲಾಗುವುದು” ಎಂದು ಅವರು ಹೇಳಿದ್ದಾರೆ.