ಮುಂಬೈ: ಮಹಾರಾಷ್ಟ್ರದಲ್ಲಿ ಮಹಿಳಾ ಡಾಕ್ಟರ್ ಆತ್ಮಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಪ್ರಶಾಂತ್ ಬಣಕಾರ್ ಎಂಬ ಆರೋಪಿಯನ್ನು ಸತಾರಾ ಪೊಲೀಸರು ಶುಕ್ರವಾರ ಬಂಧಿಸಿದ್ದಾರೆ. ಪ್ರಮುಖ ಆರೋಪಿ ಎನ್ನಲಾದ ಅಮಾನತುಗೊಂಡ ಪಿಎಸ್‌ಐ ಗೋಪಾಲ್ ಬದಾನೆ ತಲೆಮರೆಸಿಕೊಂಡಿದ್ದು, ಆತನಿಗಾಗಿ ಪೊಲೀಸರು ಹುಡುಕಾಟ ನಡೆಸುತ್ತಿದ್ದಾರೆ.
ಮಹಾರಾಷ್ಟ್ರದ ಸತಾರಾ ಜಿಲ್ಲೆಯ ಫಾಲ್ತಾನ್‌ನಲ್ಲಿ 26 ವರ್ಷದ ಮಹಿಳಾ ಡಾಕ್ಟರ್ ಏಳು ಸಾಲಿನ ಡೆತ್ ನೋಟ್ ಬರೆದಿಟ್ಟು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಅದರಲ್ಲಿ ಪೊಲೀಸ್ ಸಬ್ ಇನ್ಸ್‌ಪೆಕ್ಟರ್ ಗೋಪಾಲ್ ಬನಾಡೆ ತನ್ನ ಮೇಲೆ ಪದೇ ಪದೇ ಅತ್ಯಾಚಾರ ಮತ್ತು ಲೈಂಗಿಕ ಶೋಷಣೆ ಮಾಡಿದ್ದಾನೆ ಎಂದು ಆರೋಪಿಸಿದ್ದಾರೆ.
ತನ್ನ ಜಮೀನುದಾರನ ಮಗ ಪ್ರಶಾಂತ್ ಬಣಕಾರ್ ಕಿರುಕುಳ ಮತ್ತು ಚಿತ್ರಹಿಂಸೆ ನೀಡಿರುವುದಾಗಿ ಆರೋಪಿಸಿದ್ದಾರೆ. ಇಬ್ಬರೂ ನಾಲ್ಕು ತಿಂಗಳ ಕಾಲ ಮಾನಸಿಕವಾಗಿ ಹಿಂಸಿಸುತ್ತಿದ್ದರು ಎಂದೂ ಆಕೆ ಹೇಳಿಕೊಂಡಿದ್ದಾರೆ. ಆತ್ಮಹತ್ಯೆಗೂ ಮುನ್ನಾ ಆಕೆ ಪ್ರಶಾಂತ್ ಬಣಕಾರ್ ಜೊತೆ ಮಾತನಾಡಿರುವುದು ವರದಿಯಾಗಿದೆ.
ಘಟನೆ ಕುರಿತು ಸಾರ್ವಜನಿಕ ಆಕ್ರೋಶ ಭುಗಿಲೆದ್ದ ನಂತರ ಸತಾರಾ ಜಿಲ್ಲಾ ಪೊಲೀಸರು ಎರಡು ತಂಡಗಳನ್ನು ರಚಿಸಿದ್ದರು. ಅದರಲ್ಲಿ ಒಂದು ತಂಡವು ಶನಿವಾರ ಬೆಳಿಗ್ಗೆ ಸತಾರಾದಲ್ಲಿರುವ ಸ್ನೇಹಿತನ ಫಾರ್ಮ್‌ಹೌಸ್‌ನಿಂದ ಪ್ರಶಾಂತ್ ಬಣಕರ್‌ನನ್ನು ಬಂಧಿಸಿತು. ಬಣಕಾರನನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲು ನಿರ್ಧರಿಸಲಾಗಿದ್ದು, ಪ್ರಮುಖ ಆರೋಪಿ ಪಿಎಸ್ಐ ಗೋಪಾಲ್ ಬದನೆ ತಲೆಮರೆಸಿಕೊಂಡಿದ್ದಾನೆ.
ನಾಲ್ಕು ಬಾರಿ ಅತ್ಯಾಚಾರವೆಸಗಿದ್ದ PSI
ಪಿಎಸ್ಐ ಗೋಪಾಲ್ ಬದಾನೆ ತನ್ನ ಮೇಲೆ ನಾಲ್ಕು ಬಾರಿ ಅತ್ಯಾಚಾರವೆಸಗಿರುವುದಾಗಿ ಸೂಸೈಡ್ ನೋಟ್ ನಲ್ಲಿ ಬರೆದಿಟ್ಟಿದ್ದಾರೆ. ಪೊಲೀಸ್ ಅಧಿಕಾರಿಯಿಂದ ಲೈಂಗಿಕ ದೌರ್ಜನ್ಯವಲ್ಲದೆ ಆರೋಪಿಗಳಿಗೆ ನಕಲಿ ವೈದ್ಯಕೀಯ ಪ್ರಮಾಣ ಪತ್ರ ನೀಡುವಂತೆ ಪ್ರಭಾವಿ MP ಹಾಗೂ ಆತನ ಸಹಚರರಿಂದ ಒತ್ತಡ ಹಾಕಲಾಗಿತ್ತು. ಅದಕ್ಕೆ ನಿರಾಕರಿಸಿದಾಗ ಕಿರುಕುಳ ಹೆಚ್ಚಾಯಿತು ಎಂದು ಮಹಿಳಾ ಡಾಕ್ಟರ್ ಡೆತ್ ನೋಟ್ ನಲ್ಲಿ ಉಲ್ಲೇಖಿಸಿದ್ದಾರೆ.
ಮಹಿಳಾ ಡಾಕ್ಟರ್ ದೂರಿನ ಪ್ರತಿಯನ್ನು ಶಿವಸೇನಾ (ಯುಬಿಟಿ) ಎಂಎಲ್ ಸಿ ಅಂಬಾದಾಸ್ ದನಾವೆ, ಸಾಮಾಜಿಕ ಜಾಲತಾಣ ಎಕ್ಸ್ ನಲ್ಲಿ ಹಂಚಿಕೊಂಡಿದ್ದು, ಭ್ರಷ್ಟಾಚಾರ ವ್ಯವಸ್ಥೆಯಿಂದಾಗಿ ಲೇಡಿ ಡಾಕ್ಟರ್ ಸಾವಿಗೆ ಶರಣಾಗಿರುವುದಾಗಿ ಆರೋಪಿಸಿದ್ದಾರೆ.