ಇಂದೋರ್: ಐಸಿಸಿ ಮಹಿಳಾ ಕ್ರಿಕೆಟ್ ವಿಶ್ವಕಪ್‌ಗಾಗಿ ಭಾರತಕ್ಕೆ ಆಗಮಿಸಿರುವ ಆಸ್ಟ್ರೇಲಿಯಾದ ಇಬ್ಬರು ಮಹಿಳಾ ಕ್ರಿಕೆಟಿಗರಿಗೆ ಮಧ್ಯಪ್ರದೇಶದ ಇಂದೋರ್‌ನಲ್ಲಿ ವ್ಯಕ್ತಿಯೊಬ್ಬ ಬೈಕ್ ನಲ್ಲಿ ಹಿಂಬಾಲಿಸಿ, ಲೈಂಗಿಕ ಕಿರುಕುಳ ನೀಡಿದ ಆಘಾತಕಾರಿ ಘಟನೆ ನಡೆದಿದೆ. ಸಾರ್ವಜನಿಕವಾಗಿ ನಡೆದ ಈ ಘಟನೆಯು ರಾಜ್ಯದ ಭದ್ರತಾ ವ್ಯವಸ್ಥೆಯ ಬಗ್ಗೆ ಗಂಭೀರ ಪ್ರಶ್ನೆಗಳನ್ನು ಹುಟ್ಟುಹಾಕಿದ್ದರೆ, ಮಧ್ಯಪ್ರದೇಶದ ಕ್ಯಾಬಿನೆಟ್ ಸಚಿವ ಕೈಲಾಶ್ ವಿಜಯವರ್ಗಿಯಾ ಅವರ ವಿವಾದಾತ್ಮಕ ಹೇಳಿಕೆಯು ರಾಜಕೀಯ ಬಿರುಗಾಳಿಯನ್ನೂ ಎಬ್ಬಿಸಿದೆ.
ಈ ಘಟನೆಯಿಂದ ಆಟಗಾರರು ಪಾಠ ಕಲಿಯಬೇಕು ಎಂದು ವಿಜಯವರ್ಗಿಯ ಹೇಳಿದ್ದಾರೆ. "ಯಾವುದೇ ಆಟಗಾರರು ಎಲ್ಲಿಗಾದರೂ ಹೋದರೂ, ನಾವು ಹೊರಗೆ ಹೋದಾಗಲೂ, ಕನಿಷ್ಠ ಒಬ್ಬ ಸ್ಥಳೀಯ ವ್ಯಕ್ತಿಗೆ ತಿಳಿಸುತ್ತೇವೆ. ಇದು ಭವಿಷ್ಯದಲ್ಲಿ ಆಟಗಾರರಿಗೆ ನೆನಪು ಆಗಿರುತ್ತದೆ ಅನಿಸುತ್ತದೆ. ನಾವು ಎಲ್ಲಿಯಾದರೂ ಹೋಗಬೇಕಾದರೆ, ಕ್ರಿಕೆಟ್ ಆಟಗಾರರಿಗೆ ದೊಡ್ಡ ಕ್ರೇಜ್ ಇರುವುದರಿಂದ ಹೊರಡುವ ಮೊದಲು ನಮ್ಮ ಭದ್ರತೆ ಅಥವಾ ಸ್ಥಳೀಯ ಆಡಳಿತಕ್ಕೆ ತಿಳಿಸಬೇಕು ಎಂದು ಹೇಳಿದ್ದಾರೆ.
ಇಂಗ್ಲೆಂಡ್‌ನಲ್ಲಿ ಕ್ರಿಕೆಟ್ ಫುಟ್‌ಬಾಲ್‌ನಂತೆ ಕ್ರೀಡೆಯಾಗಿದೆ. ಫುಟ್ಬಾಲ್ ಆಟಗಾರರ ಬಟ್ಟೆ ಹರಿದಿರುವುದನ್ನು ನೋಡಿದ್ದೇನೆ. ನಾವು ಹೋಟೆಲ್‌ನಲ್ಲಿ ಉಳಿದು ಕಾಫಿ ಕುಡಿಯುತ್ತಿದ್ದೆವು. ಎಷ್ಟೋ ಯುವಕರು ಬಂದರು. ಯಾರೋ ಪ್ರಸಿದ್ಧ ಆಟಗಾರರಿಂದ ಆಟೋಗ್ರಾಫ್ ಕೇಳುತ್ತಿದ್ದರು. ಒಬ್ಬ ಹುಡುಗಿ ಆತನನ್ನು ಚುಂಬಿಸಿದಳು. ಆತನ ಬಟ್ಟೆಗಳು ಹರಿದಿತ್ತು. ಅವರು ಬಹಳ ಪ್ರಸಿದ್ಧ ಫುಟ್ಬಾಲ್ ಆಟಗಾರರಾಗಿದ್ದರು.
ಕೆಲವೊಮ್ಮೆ, ಆಟಗಾರರು ತಮ್ಮ ಜನಪ್ರಿಯತೆಯನ್ನು ಅರ್ಥಮಾಡಿಕೊಳ್ಳುವುದಿಲ್ಲ. ಆಟಗಾರರು ಬಹಳ ಜನಪ್ರಿಯರಾಗಿದ್ದಾರೆ, ಆದ್ದರಿಂದ ಅವರು ಜಾಗರೂಕರಾಗಿರಬೇಕು. ಆಸ್ಟ್ರೇಲಿಯಾದ ಇಬ್ಬರು ಮಹಿಳಾ ಕ್ರಿಕೆಟಿಗರಿಗೆ ಲೈಂಗಿಕ ಕಿರುಕುಳ ಘಟನೆ ಈಗ ನಡೆದಿದೆ ಇದು ಎಲ್ಲರಿಗೂ ಪಾಠವಾಗಿದೆ. ಇದು ನಮಗೆ ಮತ್ತು ಆಟಗಾರರಿಗೆ ಪಾಠವಾಗಿದೆ ಎಂದು ಅವರು ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ.
ಭದ್ರತಾ ಲೋಪವಿದ್ದಲ್ಲಿ ಹೊರ ಹೋಗುವ ಮುನ್ನ ಸ್ಥಳೀಯ ಅಧಿಕಾರಿಗಳಿಗೆ ತಿಳಿಸುವುದು ಆಟಗಾರರ ಜವಾಬ್ದಾರಿಯೂ ಆಗಿತ್ತು. ಅವರು ಯಾರಿಗೂ ತಿಳಿಸಿಲ್ಲ, ಯಾರಿಗೂ ಹೇಳಿಲ್ಲ. ಆದರೆ ಅವರು ಈ ಘಟನೆಯಿಂದ ಪಾಠ ಕಲಿಯುತ್ತಾರೆ ಮತ್ತು ಭವಿಷ್ಯದಲ್ಲಿ ಜಾಗರೂಕರಾಗಿರುತ್ತಾರೆ ಎಂದು ಹೇಳಿದ್ದಾರೆ.
ವಿಜಯ ವರ್ಗೀಯಾ ಅವರ ಹೇಳಿಕೆಗಳಿಗೆ ವಿರೋಧ ಪಕ್ಷಗಳು ಮತ್ತು ಮಹಿಳಾ ಪರ ಸಂಘಟನೆಗಳಿಂದ ತೀವ್ರ ಟೀಕೆ ವ್ಯಕ್ತವಾಗಿದೆ. ಇದು "ಅಸಹ್ಯಕರ ಹೇಳಿಕೆ ಎಂದು ಕೇಂದ್ರದ ಮಾಜಿ ಸಚಿವ ಮತ್ತು ಹಿರಿಯ ಕಾಂಗ್ರೆಸ್ ನಾಯಕ ಅರುಣ್ ಯಾದವ್ ಕಿಡಿಕಾರಿದ್ದಾರೆ. ಈ ಘಟನೆಯು ತನ್ನ ಅತಿಥಿಗಳನ್ನು ರಕ್ಷಿಸುವಲ್ಲಿ ರಾಜ್ಯದ ವೈಫಲ್ಯವನ್ನು ಬಹಿರಂಗಪಡಿಸುತ್ತದೆ. ಕೈಲಾಶ್ ಜಿ ಅವರ ಹೇಳಿಕೆಯು ಗೊಂದಲದ ಮನಸ್ಥಿತಿಯನ್ನು ಪ್ರತಿಬಿಂಬಿಸುತ್ತದೆ; ಮಹಿಳಾ ಸುರಕ್ಷತೆಯನ್ನು ಖಾತ್ರಿಪಡಿಸುವ ಬದಲು ಆಟಗಾರರನ್ನೇ ಸಚಿವರು ದೂಷಿಸುತ್ತಾರೆ ಎಂದು ಅವರು ಆಕ್ರೋಶ ವ್ಯಕ್ತಪಡಿಸಿದ್ದಾರೆ.