ಚೆನ್ನೈ: ಕರೂರ್ ಕಾಲ್ತುಳಿತ ನಡೆದು ಒಂದು ತಿಂಗಳ ನಂತರ, ನಟ, ಟಿವಿಕೆ ಮುಖ್ಯಸ್ಥ ವಿಜಯ್ ಅವರು ಸೋಮವಾರ ಚೆನ್ನೈ ಬಳಿಯ ಮಹಾಬಲಿಪುರಂನಲ್ಲಿರುವ ರೆಸಾರ್ಟ್‌ನಲ್ಲಿ ದುರಂತದಲ್ಲಿ ಮೃತಪಟ್ಟವರ ಕುಟುಂಬದವರನ್ನು ಭೇಟಿ ಮಾಡಿದರು ಎಂದು ಟಿವಿಕೆ ಮೂಲಗಳು ತಿಳಿಸಿವೆ.
ಕರೂರಿನಿಂದ ಒಟ್ಟು 37 ಕುಟುಂಬಗಳನ್ನು ರೆಸಾರ್ಟ್‌ಗೆ ಕರೆತರಲಾಗಿತ್ತು. ಅವರಿಗಾಗಿ ಪಕ್ಷ, ಸುಮಾರು 50 ಕೊಠಡಿಗಳನ್ನು ಕಾಯ್ದಿರಿಸಿತ್ತು ಎಂದು ತಮಿಳಗ ವೆಟ್ರಿ ಕಳಗಂ(ಟಿವಿಕೆ) ಮೂಲಗಳು ತಿಳಿಸಿವೆ.
ಟಿವಿಕೆ ನಾಯಕ ಸಂತ್ರಸ್ತ ಕುಟುಂಬಸ್ಥರನ್ನು ಪ್ರತ್ಯೇಕವಾಗಿ ಭೇಟಿ ಮಾಡಿ, ಮಾತುಕತೆ ನಡೆಸಿದ್ದು, ಅವರಿಗೆ ಊಟದ ವ್ಯವಸ್ಥೆ ಮಾಡಲಾಗಿದೆ. ವಿಜಯ್ ಅವರು, ಸಂತ್ರಸ್ತ ಕುಟುಂಬಗಳಿಗೆ ಶಿಕ್ಷಣದ ಜೊತೆಗೆ ಆರ್ಥಿಕ ಸಹಾಯದ ಭರವಸೆ ನೀಡಿದ್ದಾರೆ ಎಂದು ಮೂಲಗಳು ತಿಳಿಸಿವೆ.
ಇದಕ್ಕೂ ಮೊದಲು, ಸಂತ್ರಸ್ತ ಕುಟುಂಬಸ್ಥರನ್ನು ಐದು ಬಸ್‌ಗಳಲ್ಲಿ ಕರೆತರಲಾಯಿತು ಮತ್ತು ನಂತರ ಅವರನ್ನು ಚೆನ್ನೈನಿಂದ ಸುಮಾರು 400 ಕಿ.ಮೀ ದೂರದಲ್ಲಿರುವ ಕರೂರ್‌ಗೆ ಹಿಂತಿರುಗಿಸುವ ನಿರೀಕ್ಷೆಯಿದೆ ಎಂದು ಮೂಲಗಳು ತಿಳಿಸಿವೆ.
ಸೆಪ್ಟೆಂಬರ್ 27 ರಂದು ವಿಜಯ್ ಅವರ ಟಿವಿಕೆ ಕಾರ್ಯಕ್ರಮದಲ್ಲಿ ಸಂಭವಿಸಿದ ಕಾಲ್ತುಳಿತದಲ್ಲಿ 41 ಜನ ಪ್ರಾಣ ಕಳೆದುಕೊಂಡಿದ್ದಾರೆ ಮತ್ತು 60ಕ್ಕೂ ಹೆಚ್ಚು ಜನ ಗಾಯಗೊಂಡಿದ್ದರು.