ಕೊಚ್ಚಿ: ಲವ್ ಜಿಹಾದ್ ಮತ್ತು ಜಾಗತಿಕ ಭಯೋತ್ಪಾದನೆ ಕುರಿತ ಕಥಾ ಹಂದರ ಹೊಂದಿದ್ದ 'ದಿ ಕೇರಳ ಫೈಲ್ಸ್' ಚಿತ್ರವನ್ನು ವಿರೋಧಿಸಿದ್ದ ಕೇರಳದ ಸಿಪಿಎಂ ಮುಖಂಡನ ಮನೆಯಲ್ಲೇ ಲವ್ ಜಿಹಾದ್ ಪ್ರಕರಣ ವರದಿಯಾಗಿದ್ದು, ಪುತ್ರಿಯ ವಿಡಿಯೋ ವ್ಯಾಪಕ ವೈರಲ್ ಆಗುತ್ತಿದೆ.
ಹೌದು.. ಈ ಹಿಂದೆ ದಿ ಕೇರಳ ಫೈಲ್ಸ್ ಚಿತ್ರ ಬಿಡುಗಡೆಯಾದಾಗ ಕೇರಳದಲ್ಲಿ ವ್ಯಾಪಕ ವಿರೋಧ ಎದುರಾಗಿತ್ತು. ಚಿತ್ರದಲ್ಲಿ ಒಂದು ಸಮುದಾಯವನ್ನು ಕೆಟ್ಟದಾಗಿ ಬಿಂಬಿಸಲಾಗುತ್ತಿದೆ ಎಂದು ಆರೋಪಿಸಲಾಗಿತ್ತು.
ಈ ಸಂಬಂಧ ಕೇರಳದ ಕಾಸರಗೋಡಿನ ಸಿಪಿಎಂ ನಾಯಕರೊಬ್ಬರೂ ಕೂಡ ವ್ಯಾಪಕ ವಿರೋಧ ವ್ಯಕ್ತಪಡಿಸಿದ್ದರು. ಇದೀಗ ಅದೇ ನಾಯಕನ ಪುತ್ರಿಯೇ ಲವ್ ಜಿಹಾದ್ ಗೆ ತುತ್ತಾಗಿದ್ದಾರೆ ಎಂದು ವರದಿಯಾಗಿದೆ.
ತಂದೆಯಿಂದಲೇ ಪುತ್ರಿಗೆ ಚಿತ್ರಹಿಂಸೆ
ಕೇರಳದ ಕಾಸರಗೋಡಿನ ಸಿಪಿಎಂನ ಉದುಮ ಪ್ರದೇಶ ಸಮಿತಿ ಸದಸ್ಯ ಪಿ.ವಿ. ಭಾಸ್ಕರನ್ ಅವರ ಪುತ್ರಿ ಸಂಗೀತಾ ಅವರು ಈ ಸಂಬಂಧ ದೂರು ದಾಖಲಿಸಿದ್ದು, ಮುಸ್ಲಿಂ ವ್ಯಕ್ತಿಯನ್ನು ಮದುವೆಯಾಗುವ ಬಯಕೆಯನ್ನು ವ್ಯಕ್ತಪಡಿಸಿದ ಮನೆಯಲ್ಲಿ ಚಿತ್ರಹಿಂಸೆ ನೀಡಲಾಗುತ್ತಿದೆ ಎಂದು ಆರೋಪಿಸಿದ್ದಾರೆ.
ವಿಡಿಯೋ ಮಾಡಿದ್ದ ಪುತ್ರಿ
ಇನ್ನು ಅಕ್ಟೋಬರ್ 25 ರಂದು ಕಾಸರಗೋಡಿನಿಂದ ಬಂದ ವರದಿಗಳ ಪ್ರಕಾರ, ಸಿಪಿಎಂ ಪ್ರದೇಶ ಸಮಿತಿ ಸದಸ್ಯ ಭಾಸ್ಕರನ್ ಪುತ್ರಿ ಸಂಗೀತಾ ವಿಡಿಯೋವೊಂದನ್ನು ಸಾಮಾಜಿಕ ಜಾಲತಾಣದಲ್ಲಿ ಅಪ್ಲೋಡ್ ಮಾಡಿದ್ದಾರೆ. ಈ ವಿಡಿಯೋದಲ್ಲಿ ತನ್ನನ್ನು ಮನೆಯಲ್ಲಿ ಗೃಹಬಂಧನದಲ್ಲಿರಿಸಲಾಗಿದೆ. ನಾನು ಮುಸ್ಲಿಂ ಧರ್ಮಕ್ಕೆ ಸೇರಿದ ರಶೀದ್ ರನ್ನು ವಿವಾಹವಾಗುವ ಬಯಕೆ ವ್ಯಕ್ತಪಡಿಸಿದ ಬಳಿಕ ಮನೆಯಲ್ಲಿ ನನಗೆ ಚಿತ್ರಹಿಂಸೆ ನೀಡಲಾಗುತ್ತಿದೆ ಎಂದು ಹೇಳಿದ್ದಾರೆ.
ಮಾತ್ರವಲ್ಲದೇ ತನ್ನ ತಂದೆ ತನ್ನ ಕುಟುಂಬದ ಆಸ್ತಿಯಲ್ಲಿ ತನ್ನ ಪಾಲನ್ನು ವಶಪಡಿಸಿಕೊಳ್ಳಲು ಪ್ರಯತ್ನಿಸುತ್ತಿದ್ದಾರೆ ಮತ್ತು ಆತ್ಮಹತ್ಯೆಗೆ ಮನವೊಲಿಸಲು ಪ್ರಯತ್ನಿಸುತ್ತಿದ್ದಾರೆ ಎಂದು ಅವರು ಆರೋಪಿಸಿದ್ದಾರೆ. ಮನೆಯಲ್ಲಿ ಯಾರಿಗೂ ತಿಳಿಯದಂತೆ ಬೇರೆಯವರ ಫೋನ್ ನಿಂದ ಸಂಗೀತಾ ಅವರು ಈ ವಿಡಿಯೋ ಮಾಡಿದ್ದಾರೆ ಎಂದು ಹೇಳಲಾಗಿದೆ.
ಸಂಗೀತಾ ಅವರಿಗೆ ಈ ಹಿಂದೆಯೇ ಒಂದು ವಿವಾಹವಾಗಿ ಅವರು ವಿಚ್ಛೇದನ ಪಡೆದುಕೊಂಡಿದ್ದರು. ತನ್ನ ವಿಚ್ಛೇದನದ ನಂತರ ಜೀವನಾಂಶವಾಗಿ ಪಡೆದ ಸಂಪೂರ್ಣ ಮೊತ್ತವನ್ನು ತನ್ನ ತಂದೆ ಮತ್ತು ಸಹೋದರ ಸ್ವಾಧೀನಪಡಿಸಿಕೊಂಡಿದ್ದಾರೆ ಮತ್ತು ಸರಿಯಾದ ವೈದ್ಯಕೀಯ ಆರೈಕೆಕೂಡ ನೀಡುತ್ತಿಲ್ಲ. ತನ್ನ ತಲೆಗೆ ಹಲವಾರು ಬಾರಿ ಹೊಡೆದು "ಹೋಗಿ ಸಾಯಿ" ಎಂದು ಮೂದಲಿಸಿದ್ದಾರೆ. ನೀನು ಈ ಜನ್ಮದಲ್ಲಿ ಎಂದಿಗೂ ನಡೆಯಲು ಸಾಧ್ಯವಿಲ್ಲ. ನೀನು ಹಾಸಿಗೆಯಲ್ಲಿಯೇ ಸಾಯುತ್ತೀಯ ಎಂದು ಬೆದರಿಸುತ್ತಿದ್ದಾರೆ ಎಂದು ಸಂಗೀತಾ ವಿಡಿಯೋದಲ್ಲಿ ಆರೋಪಿಸಿದ್ದಾರೆ. ಅಲ್ಲದೆ ತಂದೆಗಿರುವ ರಾಜಕೀಯ ಬೆಂಬಲದಿಂದಾಗಿ ನಾನು ಪೊಲೀಸ್ ದೂರು ನೀಡಲು ಸಾಧ್ಯವಾಗುತ್ತಿಲ್ಲ ಎಂದು ಹೇಳಲಾಗಿದೆ.
ಆರೋಪ ಅಲ್ಲಗಳೆದ ಕುಟುಂಬ
ಅದಾಗ್ಯೂ ಸಂಗೀತಾ ಆರೋಪಗಳನ್ನು ಅಲ್ಲಗಳೆದಿರುವ ಕುಟುಂಬದ ಮೂಲಗಳು 'ಸಂಗೀತಾ ಅವರು ಈ ಹಿಂದೆ ಸಂಭವಿಸಿದ ಅಪಘಾತದಲ್ಲಿ ಸೊಂಟದ ಕೆಳಗೆ ಪಾರ್ಶ್ವವಾಯುವಿಗೆ ಒಳಗಾಗಿದ್ದು ಮನೆಯಲ್ಲಿ ದುಃಖದಲ್ಲಿ ಬದುಕುತ್ತಿದ್ದಾರೆ. ಮನೆಯಿಂದ ಹೊರಗೆ ಬರಲು ಸಾಧ್ಯವಿಲ್ಲ. ಹೀಗಾಗಿ ಗೃಹ ಬಂಧನ ಆರೋಪಗಳು ಸತ್ಯಕ್ಕೆ ದೂರವಾದದ್ದು ಎಂದು ಹೇಳಿದ್ದಾರೆ ಎಂದು ವರದಿ ಮಾಡಲಾಗಿದೆ.
ಆಸ್ತಿ ಕಬಳಿಸಲು ಪ್ರೀತಿ ಬಲೆ: ಭಾಸ್ಕರನ್ ಆರೋಪ
ಮೂಲಗಳ ಪ್ರಕಾರ ಭಾಸ್ಕರನ್ ಅವರ ಪುತ್ರಿ ಸಂಗೀತಾ ಮುಸ್ಲಿಂ ಧರ್ಮಕ್ಕೆ ಸೇರಿದ ರಶೀದ್ ಎಂಬುವವರನ್ನು ವಿವಾಹವಾಗಲು ಇಚ್ಚಿಸಿದ್ಧು ಅವರ ವಿವಾಹಕ್ಕೆ ತಂದೆ ಭಾಸ್ಕರನ್ ವಿರೋಧಿಸಿದ್ದಾರೆ. ಅಲ್ಲದೆ ರಶೀದ್ ತನ್ನಪುತ್ರಿಯ ಹೆಸರಲ್ಲಿರುವ 1.5 ಕೋಟಿ ರೂ ಮೌಲ್ಯದ ಆಸ್ತಿ ಕಬಳಿಸಲು ಆಕೆಯನ್ನು ಪ್ರೀತಿಯ ಬಲೆಗೆ ಬೀಳಿಸಿಕೊಂಡಿದ್ದಾನೆ. ಆಕೆಯ ಮೇಲಿನ ಭಾವನೆಗಳು ನಿಜವಲ್ಲ. ಆತನಿಗೆ ಈಗಾಗಲೇ ಮದುವೆಯಾಗಿದೆ ಎಂದು ಆರೋಪಿಸಿದ್ದಾರೆ.
ಕೋರ್ಟ್ ಗೆ ಸಂಗೀತಾ ಅರ್ಜಿ
ಇನ್ನು ಈ ಎಲ್ಲ ಬೆಳವಣಿಗೆಗಳ ನಡುವೆ ಸಂಗೀತಾ ತನ್ನ ಸ್ನೇಹಿತನ ಸಹಾಯದಿಂದ ನ್ಯಾಯಾಲಯದಲ್ಲಿ ಹೇಬಿಯಸ್ ಕಾರ್ಪಸ್ ಅರ್ಜಿಯನ್ನು ಸಲ್ಲಿಸಿದ್ದಳು. ಆದಾಗ್ಯೂ, ಪೊಲೀಸ್ ವರದಿಯಲ್ಲಿ ಅವಳು ತನ್ನ ಪೋಷಕರೊಂದಿಗೆ ವಾಸಿಸುತ್ತಿರುವುದಾಗಿ ಹೇಳಿದ್ದರಿಂದ ಅದನ್ನು ಸ್ವೀಕರಿಸಲಾಗಿಲ್ಲ. ತಾನು ಗೃಹಬಂಧನದಲ್ಲಿದ್ದೇನೆ ಎಂದು ಪೊಲೀಸರಿಗೆ ತಿಳಿಸಲು ಪ್ರಯತ್ನಿಸಿದರೂ, ತನ್ನ ತಂದೆಯ ರಾಜಕೀಯ ಪ್ರಭಾವವನ್ನು ಅರಿತುಕೊಂಡ ನಂತರ ಅವರು ತನ್ನ ದೂರುಗಳನ್ನು ಕೇಳಲು ನಿರಾಕರಿಸಿದರು ಎಂದು ಅವರು ಆರೋಪಿಸಿದ್ದಾರೆ.
ನಂತರ, ಸ್ಥಳೀಯ ಪೊಲೀಸರಿಂದ ತನಗೆ ನ್ಯಾಯ ಸಿಗುವುದಿಲ್ಲ ಎಂದು ಮನವರಿಕೆ ಮಾಡಿಕೊಂಡು, ಉನ್ನತ ಪೊಲೀಸ್ ಅಧಿಕಾರಿಗಳನ್ನು ಸಂಪರ್ಕಿಸಿದರು. ತನ್ನ ಸ್ಥಿತಿಯನ್ನು ವಿವರಿಸಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಮತ್ತು ಜಿಲ್ಲಾಧಿಕಾರಿಗಳಿಗೆ ದೂರುಗಳನ್ನು ಸಲ್ಲಿಸಿದರು. ಇದೀಗ ಈ ವಿಚಾರ ಕೇರಳದಲ್ಲಿ ವ್ಯಾಪಕ ಸುದ್ದಿಗೆ ಗ್ರಾಸವಾಗುತ್ತಿದೆ.
ಕರ್ಮ ರಿಟರ್ನ್ಸ್
ಇನ್ನು ಸುದ್ದಿ ಸಾಮಾಜಿಕ ಮಾಧ್ಯಮಗಳಲ್ಲಿ ವ್ಯಾಪಕ ವೈರಲ್ ಆಗುತ್ತಿದ್ದು, ಇದಕ್ಕೆ ನೆಟ್ಟಿಗರಿಂದ ತರಹೇವಾರಿ ಕಮೆಂಟ್ ಗಳು ಹರಿದಾಡುತ್ತಿವೆ. ಕೆಲವರು ಭಾಸ್ಕರನ್ ನಡೆಯನ್ನು ಬೆಂಬಲಿಸಿದರೆ, ಕೆಲವರು ಸಂಗೀತಾರನ್ನು ಬೆಂಬಲಿಸಿ ಟ್ವೀಟ್ ಮಾಡುತ್ತಿದ್ದಾರೆ. ಮತ್ತೆ ಕೆಲವರು ಕರ್ಮ ರಿಟರ್ನ್ಸ್ ಎಂದು ಕಮೆಂಟ್ ಮಾಡುತ್ತಿದ್ದಾರೆ.