ಚೆನ್ನೈ: ತಮಿಳುನಾಡಿನಲ್ಲಿ ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆ (SIR) ನಡೆಸುವ ಕ್ರಮದಲ್ಲಿ 'ಪಿತೂರಿ' ಇದೆ ಎಂದು ಶಂಕಿಸಿರುವ ಡಿಎಂಕೆ ಅಧ್ಯಕ್ಷ ಮತ್ತು ಮುಖ್ಯಮಂತ್ರಿ ಎಂಕೆ ಸ್ಟಾಲಿನ್, ನವೆಂಬರ್ 2 ರಂದು ಚೆನ್ನೈನಲ್ಲಿ ನಡೆಯುವ ಸರ್ವಪಕ್ಷ ಸಭೆಯಲ್ಲಿ ಭಾಗವಹಿಸುವಂತೆ ಎಲ್ಲಾ ರಾಜಕೀಯ ಪಕ್ಷಗಳ ನಾಯಕರಿಗೆ ಮನವಿ ಮಾಡಿದ್ದಾರೆ.
ತಮಿಳುನಾಡು ಸೇರಿದಂತೆ ಒಂಬತ್ತು ರಾಜ್ಯಗಳಲ್ಲಿ ಮುಂದಿನ ಹಂತದ SIR ನಡೆಯಲಿದೆ ಎಂದು ಭಾರತೀಯ ಚುನಾವಣಾ ಆಯೋಗ (ECI) ಘೋಷಿಸಿದ ನಂತರ ನಿನ್ನೆ ಅಣ್ಣಾ ಅರಿವಲಯಂನಲ್ಲಿ ನಡೆದ ಜಾತ್ಯತೀತ ಪ್ರಗತಿಪರ ಒಕ್ಕೂಟದ ನಾಯಕರ ಸಮಾಲೋಚನಾ ಸಭೆಯ ನಂತರ ಸ್ಟಾಲಿನ್ ಅವರು ಈ ಹೇಳಿಕೆ ನೀಡಿದ್ದಾರೆ.
ರಾಜಕೀಯ ಭಿನ್ನಾಭಿಪ್ರಾಯಗಳನ್ನು ಬದಿಗಿಟ್ಟು ಎಲ್ಲಾ ರಾಜಕೀಯ ಪಕ್ಷಗಳು ಸರ್ವಪಕ್ಷ ಸಭೆಯಲ್ಲಿ ಭಾಗವಹಿಸುವಂತೆ ಜಂಟಿ ಹೇಳಿಕೆಯಲ್ಲಿ ಒತ್ತಾಯಿಸಿದರು.
ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರವು ನಿರಂತರವಾಗಿ ಪ್ರಜಾಪ್ರಭುತ್ವ ಮೌಲ್ಯಗಳನ್ನು ನಾಶಪಡಿಸುತ್ತಿದೆ ಮತ್ತು ಸ್ವತಂತ್ರ ಸಂಸ್ಥೆಗಳನ್ನು ತನ್ನ ಇಚ್ಛೆಯಂತೆ ದುರುಪಯೋಗಪಡಿಸಿಕೊಳ್ಳುತ್ತಿದೆ ಎಂದು ಆರೋಪಿಸಿದರು. ಇಸಿಐನ ಕಾರ್ಯನಿರ್ವಹಣೆಯು ವಿವಾದಾತ್ಮಕ ಮಾತ್ರವಲ್ಲದೆ ಅನುಮಾನಾಸ್ಪದವಾಗಿದೆ ಎಂದು ಹೇಳಿದರು.
ಬಿಹಾರದಲ್ಲಿ ನಡೆಸಲಾದ SIR ನ್ನು ಉಲ್ಲೇಖಿಸಿ ಸ್ಟಾಲಿನ್, ಬಿಹಾರದಲ್ಲಿ SIR ವಾಸ್ತವವಾಗಿ ನಿಜವಾದ ಮತದಾರರನ್ನು ಪಟ್ಟಿಯಿಂದ ತೆಗೆದುಹಾಕುವ ಒಂದು ಸಂಚು ಎಂದು ನಾವು ನೋಡಿದ್ದೇವೆ. ECI ಸುಪ್ರೀಂ ಕೋರ್ಟ್‌ನ ನಿರ್ದೇಶನಗಳನ್ನು ಸಹ ಪಾಲಿಸಲಿಲ್ಲ. ಬಿಜೆಪಿ ಸರ್ಕಾರವು ಈ ಪ್ರಜಾಪ್ರಭುತ್ವ ವಿರೋಧಿ ಚಟುವಟಿಕೆಯನ್ನು ಕೈಗೊಳ್ಳಲು ಚುನಾವಣಾ ಆಯೋಗವನ್ನು ಪ್ರಚೋದಿಸುತ್ತಿದೆ ಎಂದು ಹೇಳಿದರು.
ನವೆಂಬರ್ ಮತ್ತು ಡಿಸೆಂಬರ್ ತಿಂಗಳುಗಳಲ್ಲಿ ತಮಿಳುನಾಡಿನಲ್ಲಿ SIR ನಡೆಸುವುದು ತುಂಬಾ ಕಷ್ಟಕರ ಮತ್ತು ಪ್ರಾಯೋಗಿಕವಾಗಿ ಅಸಾಧ್ಯ ಮತ್ತು ECI ಘೋಷಿಸಿದ ಕಾರ್ಯವಿಧಾನಗಳು ಬಹುತೇಕ ನಾಗರಿಕರಿಗೆ ತೊಂದರೆಯನ್ನುಂಟುಮಾಡುತ್ತದೆ.
ಸುಪ್ರೀಂ ಕೋರ್ಟ್ ತೀರ್ಪಿನ ನಂತರವೂ ಆಧಾರ್ ಕಾರ್ಡ್ ನ್ನು SIR ಅಡಿಯಲ್ಲಿ ಏಕೆ ಸ್ವೀಕರಿಸಲಾಗಿಲ್ಲ ಮತ್ತು ಅವರ ಪದೇ ಪದೇ ಬೇಡಿಕೆಗಳಿದ್ದರೂ ಪಡಿತರ ಚೀಟಿಯನ್ನು ಏಕೆ ಸ್ವೀಕರಿಸಲಿಲ್ಲ ಎಂದು ಸ್ಟಾಲಿನ್ ಪ್ರಶ್ನಿಸಿದರು.
ತಮಿಳು ನಾಡು ಜನರ ಹಕ್ಕುಗಳನ್ನು ಕಸಿದುಕೊಳ್ಳುವ ಪಿತೂರಿ
ಬರುವ ಏಪ್ರಿಲ್‌ನಲ್ಲಿ ವಿಧಾನಸಭಾ ಚುನಾವಣೆ ನಡೆಯಲಿರುವಾಗ, ಈಗ SIR ನ್ನು ಘೋಷಿಸುವುದು ಅನ್ಯಾಯವಾಗಿದೆ. ತಮಿಳುನಾಡಿನ ಜನರ ಹಕ್ಕುಗಳನ್ನು ಕಸಿದುಕೊಳ್ಳುವ ಪಿತೂರಿ ಇದು. ಬಿಹಾರದಲ್ಲಿ, ಮುಸ್ಲಿಮರು, ಪರಿಶಿಷ್ಟ ಜಾತಿ ಸಮುದಾಯಗಳು ಮತ್ತು ಮಹಿಳೆಯರ ಹೆಸರು ತೆಗೆದುಹಾಕಲು ಗುರಿಯಾಗಿಸಲಾಗಿತ್ತು. ತಮಿಳುನಾಡು ಅಂತಹ ಪಿತೂರಿಯನ್ನು ಎಂದಿಗೂ ಅನುಮತಿಸುವುದಿಲ್ಲ ಮತ್ತು ರಾಜ್ಯವು ವಿರೋಧವಾಗಿ ಒಂದಾಗುತ್ತದೆ ಎಂದು ಹೇಳಿದರು.
ತಮ್ಮ ಎಕ್ಸ್ ಪೋಸ್ಟ್ ನಲ್ಲಿ ಸ್ಟಾಲಿನ್ "ಮತದಾನದ ಹಕ್ಕು ಪ್ರಜಾಪ್ರಭುತ್ವದ ಅಡಿಪಾಯ. ತಮಿಳುನಾಡು ಅದನ್ನು ಕೊಲೆ ಮಾಡುವ ಯಾವುದೇ ಪ್ರಯತ್ನದ ವಿರುದ್ಧ ಹೋರಾಡುತ್ತದೆ ಮತ್ತು ತಮಿಳುನಾಡು ಗೆಲ್ಲುತ್ತದೆ" ಎಂದು ಬರೆದುಕೊಂಡಿದ್ದಾರೆ.