ಪೂರ್ವ ಲಡಾಖ್‌ನಲ್ಲಿ ವಾಸ್ತವ ನಿಯಂತ್ರಣ ರೇಖೆ (LAC) ಉದ್ದಕ್ಕೂ ಶಾಂತಿ ಮತ್ತು ಭದ್ರತೆಯನ್ನು ಕಾಪಾಡಿಕೊಳ್ಳುವತ್ತ ಗಮನಹರಿಸುವ ಉನ್ನತ ಮಟ್ಟದ ಹೊಸ ಸುತ್ತಿನ ಮಿಲಿಟರಿ ಮಾತುಕತೆಗಳನ್ನು ಭಾರತ ಮತ್ತು ಚೀನಾ ಮಿಲಿಟರಿಗಳು ನಡೆಸಿವೆ.
ಚೀನಾ ರಕ್ಷಣಾ ಸಚಿವಾಲಯ ಇದನ್ನು ತಿಳಿಸಿದೆ. ಅಕ್ಟೋಬರ್ 25 ರಂದು ಭಾರತದ ಬದಿಯಲ್ಲಿರುವ ಮೊಲ್ಡೊ-ಚುಶುಲ್ ಗಡಿ ಸಭೆಯ ಸ್ಥಳದಲ್ಲಿ 23 ನೇ ಸುತ್ತಿನ ಕಾರ್ಪ್ಸ್ ಕಮಾಂಡರ್ ಮಟ್ಟದ ಮಾತುಕತೆ ನಡೆದಿದೆ ಎಂದು ಹೇಳಿದೆ. ಚೀನಾ-ಭಾರತ ಗಡಿಯ ಪಶ್ಚಿಮ ವಿಭಾಗದ ನಿರ್ವಹಣೆಯ ಕುರಿತು ಎರಡೂ ಕಡೆಯವರು ಸಕ್ರಿಯ ಮತ್ತು ಆಳವಾದ ಸಂವಹನದಲ್ಲಿ ತೊಡಗಿಸಿಕೊಂಡಿದ್ದಾರೆ ಎಂದು ಹೇಳಿಕೆಯಲ್ಲಿ ತಿಳಿಸಿದೆ.
ಸಭೆಯ ಕುರಿತು ಭಾರತೀಯ ಅಧಿಕಾರಿಗಳಿಂದ ಯಾವುದೇ ಅಧಿಕೃತ ಮಾಹಿತಿ ಬಂದಿಲ್ಲ. ಪ್ರಧಾನಿ ನರೇಂದ್ರ ಮೋದಿ ಮತ್ತು ಚೀನಾ ಅಧ್ಯಕ್ಷ ಕ್ಸಿ ಜಿನ್‌ಪಿಂಗ್ ನಿರ್ಧರಿಸಿದಂತೆ ಸಂವಹನ ಮತ್ತು ಮಾತುಕತೆ ಕಾಪಾಡಿಕೊಳ್ಳಲು ಎರಡೂ ಕಡೆಯವರು ನಿರ್ಧರಿಸಿದ್ದಾರೆ ಎಂದು ಚೀನಾ ರಕ್ಷಣಾ ಸಚಿವಾಲಯ ತಿಳಿಸಿದೆ.
ಎರಡೂ ದೇಶಗಳ ನಾಯಕರು ತಲುಪಿದ ಪ್ರಮುಖ ಒಮ್ಮತದ ಮಾರ್ಗದರ್ಶನದಲ್ಲಿ ಮಿಲಿಟರಿ ಮತ್ತು ರಾಜತಾಂತ್ರಿಕ ಮಾರ್ಗಗಳ ಮೂಲಕ ಸಂವಹನ ಮತ್ತು ಮಾತುಕತೆ ಮುಂದುವರಿಸಲು ಚೀನಾ-ಭಾರತ ಗಡಿ ಪ್ರದೇಶಗಳಲ್ಲಿ ಶಾಂತಿಯನ್ನು ಜಂಟಿಯಾಗಿ ಕಾಪಾಡಲು ಒಪ್ಪಿಕೊಂಡಿದ್ದಾರೆ ಎಂದು ಹೇಳಿದೆ.