ನವದೆಹಲಿ: ಇರಾನ್‌ನಲ್ಲಿ ಭಾರತದ ಚಾಬಹಾರ್ ಬಂದರು ಯೋಜನೆ ಮೇಲಿನ ನಿರ್ಬಂಧದಿಂದ ಅಮೆರಿಕ ಆರು ತಿಂಗಳು ವಿನಾಯಿತಿ ನೀಡಿದೆ ಎಂದು ವಿದೇಶಾಂಗ ಸಚಿವಾಲಯ(MEA) ಗುರುವಾರ ತಿಳಿಸಿದೆ.
ಭಾರತದ ವಿದೇಶಾಂಗ ನೀತಿಯಲ್ಲಿ ಗೇಮ್ ಚೇಂಜರ್ ಎಂದೇ ಬಿಂಬಿತವಾಗಿದ್ದ ಇರಾನ್‌ನಲ್ಲಿರುವ ಚಾಬಹಾರ್ ಬಂದರು ಯೋಜನೆಗೆ ಅಮೆರಿಕ ಇತ್ತೀಚಿಗೆ ನಿರ್ಬಂಧ ಹೇರಿತ್ತು. ಇದೀಗ ಆರು ತಿಂಗಳು ವಿನಾಯಿತಿ ನೀಡಿದೆ.
ಇಂದು ಪತ್ರಿಕಾಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ವಿದೇಶಾಂಗ ವ್ಯವಹಾರಗಳ ಸಚಿವಾಲಯದ ವಕ್ತಾರ ರಣಧೀರ್ ಜೈಸ್ವಾಲ್, ರಷ್ಯಾದ ತೈಲ ಕಂಪನಿಗಳ ಮೇಲಿನ ಅಮೆರಿಕದ ನಿರ್ಬಂಧಗಳ ಪರಿಣಾಮಗಳ ಕುರಿತು ಭಾರತ ಅಧ್ಯಯನ ಮಾಡುತ್ತಿದೆ ಎಂದು ಹೇಳಿದರು.
"ರಷ್ಯಾದ ತೈಲ ಕಂಪನಿಗಳ ಮೇಲಿನ ಇತ್ತೀಚಿನ ಅಮೆರಿಕದ ನಿರ್ಬಂಧದ ಪರಿಣಾಮಗಳನ್ನು ನಾವು ಅಧ್ಯಯನ ಮಾಡುತ್ತಿದ್ದೇವೆ. ನಮ್ಮ ನಿರ್ಧಾರಗಳು ಸ್ವಾಭಾವಿಕವಾಗಿ ಜಾಗತಿಕ ಮಾರುಕಟ್ಟೆಯ ವಿಕಸನಗೊಳ್ಳುತ್ತಿರುವ ಚಲನಶೀಲತೆಯನ್ನು ಗಣನೆಗೆ ತೆಗೆದುಕೊಳ್ಳುತ್ತವೆ" ಎಂದು ಅವರು ಹೇಳಿದರು.
"ಇಂಧನ ಮೂಲದ ಬಗ್ಗೆ ನಮ್ಮ ನಿಲುವು ಎಲ್ಲರಿಗೂ ತಿಳಿದಿದೆ. ಈ ಪ್ರಯತ್ನದಲ್ಲಿ, ನಮ್ಮ 1.4 ಶತಕೋಟಿ ಜನರ ಇಂಧನ ಭದ್ರತಾ ಅಗತ್ಯಗಳನ್ನು ಪೂರೈಸಲು ವೈವಿಧ್ಯಮಯ ಮೂಲಗಳಿಂದ ಕೈಗೆಟುಕುವ ದರದಲ್ಲಿ ಪಡೆದುಕೊಳ್ಳುವ ಬಗ್ಗೆ ನಾವು ಮಾರ್ಗದರ್ಶನ ಪಡೆಯುತ್ತೇವೆ" ಎಂದು ಜೈಸ್ವಾಲ್ ಹೇಳಿದರು