ಬುಲಂದ್‌ಶಹರ್ (ಉತ್ತರ ಪ್ರದೇಶ): ಬುಲಂದ್‌ಶಹರ್‌ನ ಸಣ್ಣ ದಿನಸಿ ಅಂಗಡಿಯ ಮಾಲೀಕರೊಬ್ಬರು 141 ಕೋಟಿ ರೂ.ಗಳಿಗೂ ಹೆಚ್ಚಿನ ಮೌಲ್ಯದ ಮಾರಾಟದ ಕುರಿತು ಆದಾಯ ತೆರಿಗೆ ಇಲಾಖೆಯಿಂದ ನೋಟಿಸ್ ಪಡೆದಿದ್ದು, ದೆಹಲಿಯಲ್ಲಿ ಆರು ಕಂಪನಿಗಳನ್ನು ಸ್ಥಾಪಿಸಲು ತಮ್ಮ ಪ್ಯಾನ್ ಕಾರ್ಡ್ ಅನ್ನು ದುರುಪಯೋಗಪಡಿಸಿಕೊಳ್ಳಲಾಗಿದೆ ಎಂದು ಆರೋಪಿಸಿದ್ದಾರೆ.
ಖುರ್ಜಾದ ನಯಾಗಂಜ್ ಪ್ರದೇಶದ ನಿವಾಸಿ ಸುಧೀರ್, ತಮ್ಮ ಮನೆಯಿಂದಲೇ ಸಾಧಾರಣ ದಿನಸಿ ಅಂಗಡಿಯನ್ನು ನಡೆಸುತ್ತಿದ್ದಾರೆ ಎಂದು ಹೇಳಿದರು.
2022ರಲ್ಲಿ ತನಗೆ ಮೊದಲು ನೋಟಿಸ್ ನೀಡಲಾಗಿತ್ತು. ನಂತರ ನಾನು ತೆರಿಗೆ ಅಧಿಕಾರಿಗಳಿಗೆ ಆ ಕಂಪನಿಗಳೊಂದಿಗೆ ಯಾವುದೇ ಸಂಬಂಧವಿಲ್ಲ ಎಂದು ಹೇಳಿದ್ದಾಗಿ ವಿವರಿಸಿದರು.
'ಈ ವರ್ಷ ಜುಲೈ 10 ರಂದು, ನಾನು 1,41,38,47,126 ರೂ.ಗಳ ಮಾರಾಟ ಮಾಡಿರುವುದಾಗಿ ಹೇಳುವ ಮತ್ತೊಂದು ನೋಟಿಸ್ ಬಂದಾಗ ನನಗೆ ಆಘಾತವಾಯಿತು. ದೆಹಲಿಯಲ್ಲಿ ಅನೇಕ ಸಂಸ್ಥೆಗಳನ್ನು ಸ್ಥಾಪಿಸಲು ತನ್ನ ಪ್ಯಾನ್ ಅನ್ನು ವಂಚನೆಯಿಂದ ಬಳಸಲಾಗಿದೆ' ಎಂದು ಸುಧೀರ್ ಆರೋಪಿಸಿದರು.
ಖುರ್ಜಾ ಪೊಲೀಸ್ ಠಾಣೆಯ ಉಸ್ತುವಾರಿ ಪಂಕಜ್ ರೈ, ಪ್ರಕರಣ ದಾಖಲಿಸಲಾಗಿದ್ದು, ತನಿಖೆ ನಡೆಯುತ್ತಿದೆ ಎಂದು ತಿಳಿಸಿದ್ದಾರೆ.
ಬ್ಯಾಂಕ್ ಖಾತೆಗಳನ್ನು ತೆರೆಯಲು, ನಕಲಿ ಕಂಪನಿಗಳನ್ನು ಸ್ಥಾಪಿಸಲು, ಸಾಲಗಳನ್ನು ಪಡೆಯಲು ಅಥವಾ ತೆರಿಗೆಗಳನ್ನು ತಪ್ಪಿಸಲು ಯಾರಾದರೂ ಇನ್ನೊಬ್ಬ ವ್ಯಕ್ತಿಯ ಪ್ಯಾನ್ ವಿವರಗಳನ್ನು ಅಕ್ರಮವಾಗಿ ಬಳಸಿದಾಗ ಪ್ಯಾನ್ ಕಾರ್ಡ್ ವಂಚನೆ ಸಂಭವಿಸುತ್ತದೆ ಎಂದು ಅಧಿಕಾರಿಗಳು ಹೇಳುತ್ತಾರೆ.
ಅನಿರೀಕ್ಷಿತ ತೆರಿಗೆ ನೋಟಿಸ್‌ಗಳು ಅಥವಾ ವಸೂಲಾತಿ ಕರೆಗಳನ್ನು ಸ್ವೀಕರಿಸಿದ ನಂತರವೇ ಸಂತ್ರಸ್ತರಿಗೆ ವಂಚನೆ ಮಾಡಿರುವುದು ತಿಳಿಯುತ್ತದೆ. ಇಂತಹ ಅಪಾಯಗಳನ್ನು ಕಡಿಮೆ ಮಾಡಲು ಕ್ರೆಡಿಟ್ ಸ್ಕೋರ್ ಅನ್ನು ನಿಯಮಿತವಾಗಿ ಪರಿಶೀಲಿಸಲು ಮತ್ತು ಪ್ಯಾನ್ ಅನ್ನು ಆಧಾರ್‌ನೊಂದಿಗೆ ಲಿಂಕ್ ಮಾಡಲು ತಜ್ಞರು ಸಲಹೆ ನೀಡುತ್ತಾರೆ.