ನವದೆಹಲಿ: ರಾಷ್ಟ್ರರಾಜಧಾನಿ ನವದೆಹಲಿಯಲ್ಲಿ ಮಂಗಳವಾರ ರಾತ್ರಿ ಸುರಿದ ಮಳೆಯಿಂದಾಗಿ ಯಮುನಾ ಅಪಾಯದ ಮಟ್ಟ ಮೀರಿ ಹರಿಯುತ್ತಿದ್ದು, ನದಿ ಪ್ರದೇಶದ ಕೆಲವು ಭಾಗಗಳಲ್ಲಿದ್ದ ಮನೆಗಳಿಗೆ ನೀರು ನುಗ್ಗಿ ಅವಾಂತರ ಸೃಷ್ಟಿಯಾಗಿದೆ.
ನದಿ ಉಕ್ಕಿ ಹರಿಯುತ್ತಿದ್ದಂತೆ ಯಮುನಾ ಬಜಾರ್‌ನಂತಹ ತಗ್ಗು ಪ್ರದೇಶಗಳಿಗೆ ನೀರು ನುಗ್ಗಿದ್ದು, ಹಲವಿ ಮನೆಗಳ ನೆಲ ಮಹಡಿಗಳು ಜಲಾವೃತಗೊಂಡಿವೆ. ವಸ್ತುಗಳು ಹಾನಿಗೊಂಡಿವೆ ಎಂದು ವರದಿಗಳು ತಿಳಿಸಿವೆ.
ಕೇಂದ್ರ ಜಲ ಆಯೋಗದ (ಸಿಡಬ್ಲ್ಯೂಸಿ) ಪ್ರಕಾರ, ಬೆಳಿಗ್ಗೆ 9 ಗಂಟೆಗೆ, ಹಳೆಯ ಯಮುನಾ ಸೇತುವೆಯಲ್ಲಿ (ಒವೈಬಿ) ನದಿಯ ನೀರು 205.81 ಮೀಟರ್‌ನಲ್ಲಿ ಹರಿಯುತ್ತಿದ್ದು, ಅಪಾಯದ ಮಟ್ಟವನ್ನು 205.33 ಮೀಟರ್ ಮೀರಿದೆ ಎಂದು ತಿಳಿದುಬಂದಿದೆ.
ಈ ಮಟ್ಟವು ಮತ್ತಷ್ಟು ಏರಿಕೆಯಾಗುವ ನಿರೀಕ್ಷೆಯಿದ್ದು, ರಾತ್ರಿ 8 ಗಂಟೆಗೆ 206.41 ಮೀಟರ್ ತಲುಪವ ಸಾಧ್ಯತೆಯಿದೆ ಎಂದು ಅಧಿಕಾರಿಗಳು ಎಚ್ಚರಿಕೆ ನೀಡಿದ್ದಾರೆ.
ಬೆಳಿಗ್ಗೆ 8 ಗಂಟೆಗೆ ಬಿಡುಗಡೆಯಾದ ಮಾಹಿತಿಯ ಪ್ರಕಾರ, ಹಥ್ನಿ ಕುಂಡ್ ಬ್ಯಾರೇಜ್‌ನಿಂದ 1.76 ಲಕ್ಷ ಕ್ಯೂಸೆಕ್‌ಗಳು, ವಜೀರಾಬಾದ್ ಬ್ಯಾರೇಜ್‌ನಿಂದ 69,210 ಕ್ಯೂಸೆಕ್‌ಗಳು ಮತ್ತು ಓಖ್ಲಾ ಬ್ಯಾರೇಜ್‌ನಿಂದ 73,619 ಕ್ಯೂಸೆಕ್‌ಗಳು ನೀರಿನ್ನು ಬಿಡುಗಡೆ ಮಾಡಿದ ಹಿನ್ನೆಲೆಯಲ್ಲಿ ನದಿಯು ಅಪಾಯ ಮಟ್ಟ ಮೀರಿ ಹರಿಯಲು ಕಾರಣವಾಗಿದೆ ಎಂದು ತಿಳಿದುಬಂದಿದೆ.
ಇಂದು ಬೆಳಿಗ್ಗೆ ಓಖ್ಲಾದ ಎಲ್ಲಾ ಗೇಟ್‌ಗಳನ್ನು ತೆರೆಯಲಾಗಿದ್ದು, ಯಮುನಾ ಪೂರ್ಣವಾಗಿ ಹರಿಯುತ್ತಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ನದಿ ಅಪಾಯ ಮಟ್ಟ ಮೀರಿ ಹರಿಯುತ್ತಿರುವ ಹಿನ್ನೆಲೆಯಲ್ಲಿ ಮಯೂರ್ ವಿಹಾರ್, ಹತ್ತಿರದ ವಸತಿ ಪ್ರದೇಶಗಳ ಮೇಲೆ ಹೆಚ್ಚು ಪರಿಣಾಮ ಬೀರಿವೆ ಎಂದು ತಿಳಿದುಬಂದಿದೆ. ಸರ್ಕಾರ ಪರಿಹಾರ ಶಿಬಿರಗಳನ್ನು ಸ್ಥಾಪಿಸಿದ್ದು, ಜನರನ್ನು ಸುರಕ್ಷಿತ ಪ್ರದೇಶಗಳಿಗೆ ಸ್ಥಳಾಂತರಿಸುತ್ತಿದೆ ಎಂದು ವರದಿಗಳು ತಿಳಿಸಿವೆ.
ದೋಣಿಗಳ ಮೂಲಕ ಪ್ರವಾಹ ಪೀಡಿತ ಪ್ರದೇಶಗಳಲ್ಲಿ ವಾಸಿಸುತ್ತಿರುವ ಜನರನ್ನು ಸ್ಥಳಾಂತರಿಸಲಾಗುತ್ತಿದೆ. ಪ್ರವಾಹದ ಅಪಾಯವಿರುವ ಪ್ರದೇಶಗಳನ್ನು ಖಾಲಿ ಮಾಡುವಂತೆ ಜನರಿಗೆ ಒತ್ತಾಯಿಸಲಾಗುತ್ತಿದೆ. ಪರಿಸ್ಥಿತಿ ಎದುರಿಸಲು ಸನ್ನದ್ಧರಾಗುವಂತೆ ಜಿಲ್ಲಾಧಿಕಾರಿಗಳಿಗೆ ಸೂಚನೆ ನೀಡಲಾಗಿದೆ ಎಂದು ಅಧಿಕಾರಿಯೊಬ್ಬರು ಹೇಳಿದ್ದಾರೆ.