ಮುಂಬೈ: 'ನಾವು ಗೆದ್ದಿದ್ದೇವೆ' ಎಂದು ಮರಾಠಾ ಮೀಸಲಾತಿ ಹೋರಾಟಗಾರ ಮನೋಜ್ ಜರಂಗೆ ಅವರು ಮಂಗಳವಾರ ಮಹಾರಾಷ್ಟ್ರ ಸರ್ಕಾರ ಅರ್ಹ ಮರಾಠಾ ಸಮುದಾಯಕ್ಕೆ ಕುಂಬಿ ಜಾತಿ ಪ್ರಮಾಣಪತ್ರ ನೀಡುವುದು ಸೇರಿದಂತೆ ಅವರ ಹಲವು ಬೇಡಿಕೆಗಳನ್ನು ಒಪ್ಪಿದ ನಂತರ ಘೋಷಿಸಿದ್ದಾರೆ.
ಮರಾಠಾ ಮೀಸಲಾತಿ ಕುರಿತ ಸಂಪುಟ ಉಪಸಮಿತಿಯು ಅರ್ಹ ಮರಾಠಾ ಸಮುದಾಯಕ್ಕೆ ಕುಂಬಿ ಜಾತಿ ಪ್ರಮಾಣಪತ್ರ ನೀಡುವುದು ಸೇರಿದಂತೆ ಜರಂಗೆ ಅವರ ಹಲವು ಬೇಡಿಕೆಗಳನ್ನು ಈಡೇರಿಸುವುದಾಗಿ ಒಪ್ಪಿಕೊಂಡಿದೆ.
ಮಹಾರಾಷ್ಟ್ರ ಸಚಿವ ರಾಧಾಕೃಷ್ಣ ವಿಖೆ ಪಾಟೀಲ್ ನೇತೃತ್ವದ ರಾಜ್ಯ ಸರ್ಕಾರದ ಸಂಪುಟ ಉಪಸಮಿತಿಯೊಂದಿಗಿನ ಸಭೆಯ ನಂತರ ಮಾತನಾಡಿದ ಜರಂಗೆ ಅವರು, "ನಾವು ಗೆದ್ದಿದ್ದೇವೆ" ಎಂದು ಪ್ರತಿಭಟನಾಕಾರರಿಗೆ ತಿಳಿಸಿದರು.
ದಕ್ಷಿಣ ಮುಂಬೈನ ಆಜಾದ್ ಮೈದಾನದಲ್ಲಿ ಕಳೆದ ಐದು ದಿನಗಳಿಂದ ನಡೆಸುತ್ತಿದ್ದ ಅನಿರ್ದಿಷ್ಟಾವಧಿ ಉಪವಾಸ ಸತ್ಯಾಗ್ರಹವನ್ನು ಜರಂಗೆ ಅವರು ಇಂದು ಅಂತ್ಯಗೊಳಿಸಿದ್ದಾರೆ.
ಪ್ರತಿಭಟನಾ ಸ್ಥಳಕ್ಕೆ ಆಗಮಿಸಿದ ವಿಖೆ ಪಾಟೀಲ್ ಅವರು, ಸಮಿತಿಯ ಇತರ ಸದಸ್ಯರಾದ ಶಿವೇಂದ್ರಸಿಂಹ ಭೋಸಲೆ, ಉದಯ್ ಸಮಂತ್, ಮಾಣಿಕ್ರಾವ್ ಕೊಕಟೆ ಅವರೊಂದಿಗೆ ಇಂದು ಮಧ್ಯಾಹ್ನ ಜರಂಗೆ ಅವರನ್ನು ಭೇಟಿಯಾಗಿ ಸಮಿತಿ ಅಂತಿಮಗೊಳಿಸಿದ ಕರಡಿನ ಬಗ್ಗೆ ಚರ್ಚಿಸಿದರು.
"ಮಹಾರಾಷ್ಟ್ರ ಸರ್ಕಾರ ಮರಾಠಾ ಕೋಟಾ ಬೇಡಿಕೆಗಳ ಕುರಿತು ಜಿಆರ್‌ಗಳನ್ನು (ಸರ್ಕಾರದ ನಿರ್ಣಯಗಳು) ಹೊರಡಿಸಿದರೆ ನಾವು ಇಂದು ರಾತ್ರಿ 9 ಗಂಟೆಯೊಳಗೆ ಮುಂಬೈನಿಂದ ಹೊರಡುತ್ತೇವೆ" ಎಂದು ಜರಂಗೆ ಹೇಳಿದರು.
ಹೈದರಾಬಾದ್ ಗೆಜೆಟ್ ಅನ್ನು ಜಾರಿಗೆ ತರಬೇಕೆಂಬ ಜರಂಗೆ ಅವರ ಬೇಡಿಕೆಯನ್ನು ಸಂಪುಟ ಉಪಸಮಿತಿ ಒಪ್ಪಿಕೊಂಡಿದೆ ಮತ್ತು ಕುಂಬಿ ದಾಖಲೆಗಳನ್ನು ಹೊಂದಿರುವ ಮರಾಠರಿಗೆ ಸರಿಯಾದ ವಿಚಾರಣೆ ನಡೆಸಿದ ನಂತರ ಜಾತಿ ಪ್ರಮಾಣಪತ್ರಗಳನ್ನು ನೀಡಲಾಗುವುದು ಎಂದು ಹೇಳಿದೆ.
ಹೈದರಾಬಾದ್ ಗೆಜೆಟ್ ಅನ್ನು ಜಾರಿಗೆ ತರಲು ಒಪ್ಪಿಕೊಂಡಿರುವುದಾಗಿ ಮತ್ತು ತಕ್ಷಣವೇ ಜಿಆರ್ ಹೊರಡಿಸಲಾಗುವುದು ಎಂದು ಹೇಳಿದ ಸಮಿತಿಯ ಕರಡು ಅಂಶಗಳನ್ನು ಜರಂಗೆ ತಮ್ಮ ಬೆಂಬಲಿಗರಿಗೆ ಓದಿ ತಿಳಿಸಿದರು.