ನವದೆಹಲಿ: ಭಾರತ ಹಾಗೂ ಅಮೆರಿಕಾ ನಡುವೆ ಶುರುವಾಗಿದ್ದ ಸುಂಕಾಸ್ತ್ರದ ಕಾರ್ಮೋಡ ಅಂತ್ಯಗೊಳ್ಳುವ ಲಕ್ಷಣಗಳು ಕಂಡು ಬರುತ್ತಿವೆ. ಪರಸ್ಪರ ಮುನಿಸಿಕೊಂಡಿದ್ದ ಅಮೆರಿಕಾ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಹಾಗೂ ಪ್ರಧಾನಮಂತ್ರಿ ನರೇಂದ್ರ ಮೋದಿ ನಡುವೆ ಮತ್ತೆ ಸ್ನೇಹ ಮೂಡುತ್ತಿದೆ.
ಮೋದಿ ಜೊತೆ ಸದಾಕಾಲ ಸ್ನೇಹಿತನಾಗಿರುತ್ತೇನೆಂದು ಡೊನಾಲ್ಡ್ ಟ್ರಂಪ್ ಅವರು ನೀಡಿದ್ದ ಹೇಳಿಕೆಗೆ ಪ್ರಧಾನಿ ಮೋದಿಯವರು ಪ್ರತಿಕ್ರಿಯೆ ನೀಡಿದ್ದಾರೆ.
ಟ್ರಂಪ್ ಹೇಳಿಕೆ ಬೆನ್ನಲ್ಲೇ ಸಾಮಾಜಿಕ ಜಾಲತಾಣ ಎಕ್ಸ್ ನಲ್ಲಿ ಪೋಸ್ಟ್ ಮಾಡಿರುವ ಮೋದಿಯವರು, ಅಮೆರಿಕಾ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ಭಾವನೆಗಳು ಮತ್ತು ನಮ್ಮ ಸಂಬಂಧಗಳ ಬಗ್ಗೆ ಅವರ ಸಕಾರಾತ್ಮಕ ಮೌಲ್ಯಮಾಪನವನ್ನು ನಾನು ತುಂಬಾ ಗೌರವಿಸುತ್ತೇನೆ. ಅವರ ಭಾವನೆಯು ಸಂಪೂರ್ಣವಾಗಿ ಪರಸ್ಪರ ಪೂರಕವಾಗಿದೆ. ಭಾರತ ಮತ್ತು ಅಮೆರಿಕಗಳು ಬಹಳ ಸಕಾರಾತ್ಮಕ ಮತ್ತು ಭವಿಷ್ಯದ ದೃಷ್ಟಿಕೋನದ ಸಮಗ್ರ ಮತ್ತು ಜಾಗತಿಕ ಕಾರ್ಯತಂತ್ರದ ಪಾಲುದಾರಿಕೆಯನ್ನು ಹೊಂದಿವೆ ಎಂದು ಹೇಳಿದ್ದಾರೆ.
ಪ್ರಧಾನಿ ಮೋದಿ ಅವರು ಡೊನಾಲ್ಡ್ ಟ್ರಂಪ್ ಮತ್ತು POTUS (ಯುಎಸ್ ಅಧ್ಯಕ್ಷ) ಅವರನ್ನು ಟ್ಯಾಗ್ ಮಾಡಿ ಈ ಪೋಸ್ಟ್ ಹಾಕಿದ್ದು, ಈ ಪೋಸ್ಟ್ ವೈರಲ್ ಆಗುತ್ತಿದೆ.
ಇದಕ್ಕೂ ಮುನ್ನ ತಮ್ಮ ಓವಲ್ ಕಚೇರಿಯಲ್ಲಿ ಮಾತನಾಡಿದ್ದ ಟ್ರಂಪ್ ಅವರು, ನಾನು ಯಾವಾಗಲೂ (ನರೇಂದ್ರ) ಮೋದಿ ಅವರೊಂದಿಗೆ ಸ್ನೇಹಿತನಾಗಿರುತ್ತೇನೆ. ಅವರು ಒಬ್ಬ ಉತ್ತಮ ಹಾಗೂ ಅಧ್ಬುತ ಪ್ರಧಾನಿ. ಆದರೆ ಈ ನಿರ್ದಿಷ್ಟ ಕ್ಷಣದಲ್ಲಿ ಅವರು ಮಾಡುತ್ತಿರುವುದು ನನಗೆ ಇಷ್ಟವಿಲ್ಲ. ಆದರೆ ಭಾರತ ಮತ್ತು ಅಮೆರಿಕ ವಿಶೇಷ ಸಂಬಂಧವನ್ನು ಹೊಂದಿವೆ. ಈ ಬಗ್ಗೆ ಚಿಂತಿಸಲು ಏನೂ ಇಲ್ಲ. ಪ್ರಸ್ತುತ ಪರಿಸ್ಥಿತಿ ಕ್ಷಣಿಕವಷ್ಟೇ ಎಂದು ಹೇಳಿದ್ದರು.
ನಾವು ಭಾರತವನ್ನು ಕಳೆದುಕೊಂಡಿಲ್ಲ. ಭಾರತ ರಷ್ಯಾದಿಂದ ದೊಡ್ಡ ಪ್ರಮಾಣದ ತೈಲವನ್ನು ಖರೀದಿಸುತ್ತಿದೆ. ಅದು ನಮಗೆ ಬಹಳ ನಿರಾಶೆ ತಂದಿದೆ. ಹೀಗಾಗಿ ಅದನ್ನು ಅವರಿಗೆ ತಿಳಿಸಲು ದೊಡ್ಡ ರೀತಿಯ ಸುಂಕವನ್ನು ವಿಧಿಸಿದ್ದೇವೆ. ನಿಮಗೆ ತಿಳಿದಿರುವಂತೆ ನಾನು ಭಾರತದ ಪ್ರಧಾನಮಂತ್ರಿ (ನರೇಂದ್ರ ಮೋದಿ) ಅವರೊಂದಿಗೆ ಉತ್ತಮ ಬಾಂಧವ್ಯ ಹೊಂದಿದ್ದೇನೆ. 2 ತಿಂಗಳ ಹಿಂದೆ ಮೋದಿ ಅಮೆರಿಕಾದಲ್ಲಿದ್ದರು. ರೋಸ್ ಗಾರ್ಡನ್ ನಲ್ಲಿ ನಾವಿಬ್ಬರೂ ಪತ್ರಿಕಾಗೋಷ್ಠಿ ನಡೆಸಿದ್ದೆವು ಎಂದು ತಿಳಿಸಿದ್ದರು.
ಶುಕ್ರವಾರ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿದ್ದ ಟ್ರಂಪ್ ಅವರು, ನಾವು ಭಾರತ ಮತ್ತು ರಷ್ಯಾವನ್ನು ಕರಾಳ ಚೀನಾದಿಂದಾಗಿ ಕಳೆದುಕೊಂಡಂತೆ ಕಾಣುತ್ತಿದೆ. ಅವರಿಗೆ ಸುದೀರ್ಘ ಹಾಗೂ ಸಮೃದ್ಧ ಭವಿಷ್ಯ ಸಿಗುವಂತಾಗಲಿ ಎಂದು ಹೇಳಿದ್ದರು.
ಇದರ ಜತೆಗೆ ಅವರು ಇತ್ತೀಚೆಗೆ ನಡೆದ ಶಾಂಘೈ ಸಹಕಾರ ಒಕ್ಕೂಟದ (ಎಸ್‌ಸಿಒ) ಸಭೆಯಲ್ಲಿ ಪ್ರಧಾನಿ ನರೇಂದ್ರ ಮೋದಿ, ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಮತ್ತು ಚೀನಾ ಅಧ್ಯಕ್ಷ ಕ್ಸಿ ಜಿನ್ ಪಿಂಗ್ ಒಂದೇ ವೇದಿಕೆಯಲ್ಲಿ ಕಾಣಿಸಿಕೊಂಡು ಶಕ್ತಿ ಪ್ರದರ್ಶನ ಮಾಡಿದ್ದರ ಫೋಟೋವನ್ನು ಪೋಸ್ಟ್ ಮಾಡಿದ್ದರು. ಈ ಮೂಲಕ ಮೂರೂ ದೇಶಗಳ ಬಗ್ಗೆ ಪರೋಕ್ಷವಾಗಿ ಅಸಮಾಧಾನ ವ್ಯಕ್ತಪಡಿಸಿದ್ದರು. ಇದು ಸಾಕಷ್ಟು ಚರ್ಚೆಗಳನ್ನು ಹುಟ್ಟು ಹಾಕಿತ್ತು.
ರಷ್ಯಾದಿಂದ ತೈಲ ಖರೀದಿ ಮತ್ತು ಶೇ.50ರಷ್ಟು ತೆರಿಗೆ ಹಿನ್ನೆಲೆಯಲ್ಲಿ ಅಮೆರಿಕ ಮತ್ತು ಭಾರತದ ನಡುವಿನ 20 ವರ್ಷಗಳ ಆತ್ಮೀಯ ಸಂಬಂಧ ಬಹುತೇಕ ಹದಗೆಟ್ಟಿದೆ. ಆ ಬಳಿಕ ಭಾರತವು ಚೀನಾ ಜತೆಗಿನ ವಿವಾದ ಪರಿಹಾರಕ್ಕೆ ಹೆಚ್ಚಿನ ಮಹತ್ವ ನೀಡಿದೆ. ಅಲ್ಲದೆ, ಅಮೆರಿಕ ಬೆದರಿಕೆ ಹೊರತಾಗಿಯೂ ರಷ್ಯಾ ಜತೆಗಿನ ಸಂಬಂಧ ಕಡಿದುಕೊಳ್ಳದೇ ಇರಲು ನಿರ್ಧರಿಸಿದೆ.
ಇದರ ಬೆನ್ನಲ್ಲೇ ಎಸ್‌ಒ ಶೃಂಗದಲ್ಲಿ ಪುಟಿನ್ ಕ್ಸಿಮತ್ತು ಮೋದಿ ಒಂದೇ ವೇದಿಕೆಯಲ್ಲಿ ಕಾಣಿಸಿಕೊಂಡು ಶಕ್ತಿ ಪ್ರದರ್ಶನ ಮಾಡಿದ್ದರು. ವಿರೋಧಿಗಳ ಒಗ್ಗಟ್ಟು ಟ್ರಂಪ್ ರನ್ನು ವಿಚಲಿತ ಮಾಡಿದೆ ಎಂದು ಹೇಳಲಾಗುತ್ತಿದೆ.